ನರೇಗಲ್ಲ: ವಾಗ್ವಾದ ಗೊಂದಲಗಳ ನಡುವೆ ಪ.ಪಂ. ವಾಣಿಜ್ಯ ಮಳಿಗೆ ಹರಾಜು

ನರೇಗಲ್ಲ,ಸೆ22 : ಪಟ್ಟಣ ಪಂಚಾಯಿತಿಯ 29 ವಾಣಿಜ್ಯ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಬುಧವಾರ ಪ.ಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಚಲವಾದಿ ಅವರ ನೇತೃತ್ವದಲ್ಲಿ ಪ.ಪಂ ಆವರಣದಲ್ಲಿ ಜರುಗಿತು. ಹಲವು ವಾಗ್ವಾದ, ಗೊಂದಲಗಳ ಮಧ್ಯೆಯು ದಶಕದ ನಂತರ ಮಳಿಗೆಗಳ ಹರಾಜು ಮೂಲಕ ಪ.ಪಂ ಆದಾಯ ವೃದ್ಧಿಗೆ ಮುಂದಾಗಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
12 ವರ್ಷಗಳ ಹಿಂದೆ 29 ವಾಣಿಜ್ಯ ಮಳಿಗೆಗಳಿಗೆ ಬಹಿರಂಗ ಹರಾಜು ನಡೆದಿತ್ತು. ಕೆಲ ವರ್ಷಗಳ ನಂತರ ಅಲ್ಪ ಪ್ರಮಾಣದಲ್ಲಿ ಬಾಡಿಗೆ ಹೆಚ್ಚಿಸಲಾಗಿತ್ತು. ಬಾಡಿಗೆ ಪಡೆದವರು ಇತರರಿಗೆ ಹೆಚ್ಚಿನ ದರಕ್ಕೆ ಮರುಬಾಡಿಗೆ ನೀಡಿದ್ದರು. ಕೆಲ ವ್ಯಾಪಾರಸ್ಥರು ಬಾಡಿಗೆಯನ್ನು ಬಾಕಿ ಉಳಿಸಿಕೊಂಡಿದ್ದರು. ಈ ಬಗ್ಗೆ ಸಾರ್ವಜನಿಕರು ಹಾಗೂ ಬೀದಿ ಬದಿ ವ್ಯಾಪಾರಸ್ಥರು ವಾಣಿಜ್ಯ ಮಳಿಗೆಗಳ ಹರಾಜು ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಹರಾಜು ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದ ಅರ್ಧದಲ್ಲಿ ಆಡಳಿತ ಪಕ್ಷದ ಸದಸ್ಯೆ ಜ್ಯೋತಿ ಪಾಯಪ್ಪಗೌಡ್ರ ಹರಾಜು ಪ್ರಕ್ರಿಯೆ ನಡೆಸುತ್ತಿದ್ದ ಅಧಿಕಾರಿ ಹತ್ತಿರದ ಮೈಕ್ ಕಸಿದುಕೊಂಡು ಈ ಹರಾಜು ಪ್ರಕ್ರಿಯೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ಈದರ ಬಗ್ಗೆ ಪ.ಪಂ ಮುಖ್ಯಾಧಿಕಾರಿ ಯಾಗಲಿ, ಅಧ್ಯಕ್ಷರಾಗಲಿ ನನಗೆ ಮಾಹಿತಿ ಒದಗಿಸಿಲ್ಲ. ಅಲ್ಲದೆ, ಹರಾಜು ಪ್ರಕ್ರಿಯೆ ಇದೆ ಎಂದು ರಾತ್ರಿ ಹನ್ನೆರಡು ಗಂಟೆಗೆ ಬಂದು ಪ.ಪಂ ಸಿಬ್ಬಂದಿಗಳು ನೋಟಿಸ್‍ಗೆ ಸಹಿ ಮಾಡಿಸಿಕೊಂಡು ಹೋಗಿರುತ್ತಾರೆ. ಈ ಹರಾಜು ಪ್ರಕ್ರಿಯೆ ನನ್ನ ಸಹಮತ ಇಲ್ಲ. ಹರಾಜು ಪ್ರಕ್ರಿಯೆಯನ್ನು ಮುಂದೂಡಬೇಕು ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ, ಸಾರ್ವಜನಿಕರು ಅಧಿಕಾರಿಗಳ, ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಿಪಡಿಸಿದರು. ಸದಸ್ಯೆಯರ ಮಾತು ಕೇಳುತ್ತಿದಂತೆ ಸಾರ್ವನಿಕರು ಗೊಂದಲ ಸೃಷ್ಠಿ ಮಾಡಿದರು.
ಈ ವೇಳೆ ಪ.ಪಂ ಮುಖ್ಯಾಧಿಕಾರಿ ಹನಮಂತಪ್ಪ ಮಣ್ಣೊಡ್ಡರ ಮಾತನಾಡಿ, ಕಳೆದ 15 ದಿನಗಳಿಂದ ವಾಣಿಜ್ಯ ಮಳಿಗೆಗಳ ಹರಾಜಿನ ಬಗ್ಗೆ ನಿರಂತರ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರ ಹಂಚಲಾಗಿದೆ. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಎಲ್ಲ ಪ್ರಕ್ರಿಯೆಗಳು ನಡೆದಿವೆ. ಯಾವುದೇ ಕಾರಣಕ್ಕೂ ಹರಾಜು ಪ್ರಕ್ರಿಯೆ ಮುಂದೂಡಲಾಗದು. ಈ ಹರಾಜು ಪ್ರಕ್ರಿಯೆನ್ನು ಮಧ್ಯಾಹ್ನ 3 ಗಂಟೆ ನಂತರ ಪ.ಪಂ ಸಭಾ ಭವನದಲ್ಲಿ ನಡೆಸಲಾಗವದು ಎಂದು ಗೊಂದಲಕ್ಕೆ ತೆರೆ ಎಳೆದರು. ಇದರಿಂದ ಕೋಪಗೊಂಡ ಸದಸ್ಯೆ ಜ್ಯೋತಿ ಪಾಯಪ್ಪಗೌಡ್ರ ಹರಾಜು ಪ್ರಕ್ರಿಯೆಯಿಂದ ಹೊರ ನಡೆದರು.

ರೈತ ಸಂಘದ ಮುಖಂಡ ಶರಣಪ್ಪ ಧರ್ಮಾಯತ ಮಾತನಾಡಿ, ಈ ವಾಣಿಜ್ಯ ಮಳಗೆ ಹರಾಜು ಪ್ರಕ್ರಿಯೆಯಲ್ಲಿ ಎಸ್‍ಸಿ/ಎಸ್‍ಟಿ ವರ್ಗಗಳಿಗೆ ಮೀಸಲಾತಿ ಹೊಂದಿರುವ ಮಳಗೆಗಳಿಗೆ ಬಾಡಿಗೆ ಹಾಗೂ ಠೇವಣಿಯಲ್ಲಿ ವಿನಾಯತಿ ನೀಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಈದಕ್ಕೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮುಖಂಡರು ಮತ್ತು ಯುವಕರು ವಾಣಿಜ್ಯ ಮಳಗೆಯಲ್ಲಿ ವಿನಾಯತಿ ಕಲ್ಪಿಸಬೇಕು ಎಂದು ಪಟ್ಟುಹಿಡಿದರು. ಇದಕ್ಕೆ ಪ್ರತೀಕ್ರಿಯಿಸಿದ ಮುಖ್ಯಾಧಿಕಾರಿ ಹನಮಂತಪ್ಪ ಮಣ್ಣೋಡ್ಡರ, ಜಿಲ್ಲಾಧಿಕಾರಿಗಳಿಗೆ ಈ ವಿಷಯದ ಬಗ್ಗೆ ಗಮನಕ್ಕೆ ತಂದು ಸರಿ ಪಡಿಸಲಾಗುವದು ಎಂದರು.
ಪ.ಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಚಲವಾದಿ, ಉಪಾಧ್ಯಕ್ಷ ಶ್ರೀಶೈಲಪ್ಪ ಬಂಡಿಹಾಳ, ಸದಸ್ಯ ಕುಮಾರಸ್ವಾಮಿ ಕೋರಧ್ಯಾನಮಠ, ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ರಾಚಯ್ಯ ಮಾಲಗಿತ್ತಿಮಠ, ಬಸವರಾಜ ವಂಕಲಕುಂಟಿ, ದಾವುದಲಿ ಕುದರಿ, ಮುತ್ತಪ್ಪ ನೂಲ್ಕಿ, ಫಕೀರಪ್ಪ ಮಳ್ಳಿ, ಅಕ್ಕಮ್ಮ ಮಣ್ಣೊಡ್ದರ, ಬಸಮ್ಮ ಧರ್ಮಾಯತ , ಕಂದಾಯ ನಿರೀಕ್ಷಕ ರಾಮಚಂದ್ರ ಕಜ್ಜಿ, ಆರೀಫ್ ಮಿರ್ಜಾ, ಮುತ್ತು ಹೂಗಾರ ಸೇರಿದಂತೆ ಇತತರಿದ್ದರು.