ನರೇಗಲ್ಲ ಪ. ಪಂನಲ್ಲಿ ಪಟ್ಟಕ್ಕೇರಿದ ಬಿಜೆಪಿ

ನರೇಗಲ್ಲ, ನ6- ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಪ.ಪಂ ಸಭಾಭವನದಲ್ಲಿ ನಡೆದ ಚುಣಾವಣೆಯಲ್ಲಿ 16ನೇ ವಾರ್ಡನ ಸದಸ್ಯೆ ಅಕ್ಕಮ್ಮ ಮಣ್ಣೋಡ್ಡರ ಅಧ್ಯಕ್ಷ ಹಾಗೂ 17ನೇ ವಾರ್ಡ್‍ನ ಸದಸ್ಯ ಕುಮಾರಸ್ವಾಮಿ ಕೋರಾಧಾನ್ಯಮಠ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಕಮಲ ಪಟ್ಟಕ್ಕೇರಿದೆ.
ಒಟ್ಟು 17ಸದಸ್ಯ ಸ್ಥಾನವನ್ನು ಹೊಂದಿರುವ ಪ.ಪಂ 12 ಸದಸ್ಯರ ಬೆಂಬಲ ಹೊಂದಿರುವ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ ಮಹಿಳೆ ವರ್ಗಕ್ಕೆ ಮೀಸಲಾಗಿತ್ತು. ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. 16ನೇ ವಾರ್ಡ್‍ನಿಂದ ಪರಿಶಿಷ್ಟ ಜಾತಿ ಮೀಸಲಾತಿಯಿಂದ ಆಯ್ಕೆಯಾಗಿದ್ದ ಅಕ್ಕಮ್ಮ ಮಣ್ಣೋಡ್ಡರ ಹಾಗೂ 17ನೇ ವಾರ್ಡ್‍ನಿಂದ ಸಾಮಾನ್ಯ ಮೀಸಲಾತಿಯಲ್ಲಿ ಆಯ್ಕೆಯಾಗಿದ್ದ ಕುಮಾರಸ್ವಾಮಿ ಕೋರಧಾನ್ಯಮಠ ಅವರುಗಳು ಮಾತ್ರ ನಾಮಪತ್ರ ಸಲ್ಲಿಸಿದ್ದರು. ಅವಿರೋಧವಾಗಿ ಅಕ್ಕಮ್ಮ ಮಣೋಡ್ಡರ ಅಧ್ಯಕ್ಷ, ಕುಮಾರಸ್ವಾಮಿ ಕೋರಧಾನ್ಯಮಠ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಅಶೋಕ ಕಲಘಟಗಿ ಅಧಿಕೃತವಾಗಿ ಘೋಷಣೆ ಮಾಡಿದರು. ಬಿಜೆಪಿ ಪಕ್ಷದ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಅಧ್ಯಕ್ಷ-ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಸಂಸದ ಶಿವಕುಮಾರ ಉದಾಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳ ಅಭಿವೃದ್ಧಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಯೋಜನೆ ಯಶಸ್ವಿ ಪಥದಲ್ಲಿ ಸಾಗುತ್ತಿದೆ. ರಾಜ್ಯದಲ್ಲಿ ಎರಡು ವರ್ಷದಲ್ಲಿ ಎರಡು ಬಾರಿ ಪ್ರವಾಹ ಬಂದರೂ ಎದೆಗೊಂದದೆ ಕಷ್ಟದಲ್ಲಿರುವ ಜನರನ್ನು ರಕ್ಷಿಸುವ ಕಾರ್ಯವನ್ನು ನಮ್ಮ ಸರ್ಕಾರಗಳು ಮಾಡಿದೆ. ಅಲ್ಲದೇ, ಕೊರೊನಾ ವೈರಸ್ ಮಹಾಮಾರಿಯಿಂದ ಸಂಭವಿಸುವ ದೊಡ್ಡ ಪ್ರಮಾಣದ ನಷ್ಟವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎದುರಿಸಿವೆ. ಸಂಕಷ್ಟದ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿ ಅವರು ಸಾಕಷ್ಟು ಮುನ್ನಚ್ಚರಿಕೆ ಕ್ರಮವನ್ನು ಅನುಸರಿಸುವ ಮೂಲಕ ದೇಶದ ಜನರ ಆರೋಗ್ಯವನ್ನು ಕಾಪಾಡುವ ದೃಷ್ಠಿಯಿಂದ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಉಜ್ವಲ ಯೋಜನೆ ಮೂಲಕ ಮಹಿಳೆಯರ ಆರೋಗ್ಯಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಮಹತ್ವ ನೀಡಿದೆ ಎಂದರು.
ರೋಣ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಪಕ್ಷ-ಬೇಧ ಮರೆತು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತಗೆದುಕೊಂಡು ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಕಂಕಣ ಬದ್ಧರಾಗಬೇಕು. ಅಧಿಕಾರ ಎಂದೂ ಶಾಶ್ವತವಲ್ಲ, ಅಧಿಕಾರ ಒಲಿದು ಬಂದಾಗ ಜನಪರ ಕಾರ್ಯಗಳನ್ನು ಮಾಡುವ ಮೂಲಕ ಜನರ ವಿಶ್ವಾಸಗಳಿಸಿಕೊಳ್ಳಬೇಕು. ಅವಿರೋಧ ಆಯ್ಕೆಗೆ ಶ್ರಮಿಸಿದ ಎಲ್ಲ ಸದಸ್ಯರಿಗೂ ಅಭಿನಂದನೆ ಸಲ್ಲಿಸುತ್ತೇನೆ. ನರೇಗಲ್ಲ ಪಟ್ಟಣಕ್ಕೆ ನಾನು ಹಾಗೂ ಸಂಸದರಾ ಶಿವಕುಮಾರ ಉದಾಸಿ ಇವರ ಕೂಡಿಕೊಂಡು ಹೆಚ್ಚಿನ ಅನುದಾನವನ್ನು ಬಿಡುಗಡೆಗೊಳಿಸುವ ಮೂಲಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ಪ.ಪಂ ನೂತನ ಅಧ್ಯಕ್ಷೆ ಅಕ್ಕಮ್ಮ ಮಣ್ಣೊಡ್ಡರ ಮಾತನಾಡಿ, ನರೇಗಲ್ಲ ಪಟ್ಟಣ ಸೇರಿದಂತೆ ಐದು ಮಜರೆ ಗ್ರಾಮಗಳಲ್ಲಿರುವ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ರೈತರು, ಸಂಘ, ಸಂಸ್ಥೆಯವರು ಸೇರಿಕೊಂಡು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಿದ ಹಿರೇಕೆರೆಗೆ ಶಾಶ್ವತ ನೀರನ್ನು ತರುವ ಮೂಲಕ ಸುತ್ತಮುತ್ತಲಿನ ರೈತರಿಗೆ ಅನುಕೂಲ ಮಾಡುವ ಗುರಿ ಹೊಂದಲಾಗಿದೆ. ಬಹುದಿನಗಳಿಂದ ಅನಾಥವಾಗಿ ಬಿದ್ದಿರುವ ಆಶ್ರಯ ಮನೆಗಳಿಗೆ ಮೂಲಕ ಸೌಲಭ್ಯವನ್ನು ಒದಗಿಸು ಮೂಲಕ ಫಲಾನುಭವಿಗಳನ್ನು ಗುರುತಿಸಿ ಕೂಡಲೇ ಮನೆ ಹಂಚಿಕೆ ಕಾರ್ಯಗಳನ್ನು ಕೈಗೊಳ್ಳಲಾಗುವುದು. ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಪಟ್ಟಣದಲ್ಲಿ ಡಿಜಿಟಲ್ ಮಾದರಿಯ ಗ್ರಂಥಾಲಯವನ್ನು ಪ್ರಾರಂಭಿಸುವ ಉದ್ದೇಶವನ್ನು ಹೊಂದಲಾಗಿದೆ. ಪಟ್ಟಣದ ಹೊರ ಹದ್ದಿನಲ್ಲಿ ಸ್ವಾಗತ ದ್ವಾರಬಾಗಿಲು ನಿರ್ಮಿಸುವುದು ಸೇರಿದಂತೆ ಸಾರ್ವಜನಿಕರ ಹತ್ತು ಹಲವಾರು ಸಮಸ್ಯೆಗಳಿಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ನರೇಗಲ್ಲ ಪಟ್ಟಣದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಪ.ಪಂ ಸದಸ್ಯ ಶ್ರೀಶೈಲಪ್ಪ ಬಂಡಿಹಾಳ, ಫಕೀರಪ್ಪ ಮಳ್ಳಿ, ಫಕೀರಪ್ಪ ಬಂಲ್ಲಾಪೂರ, ಮಲ್ಲಿಕಸಾಬ ರೋಣದ, ಮಲ್ಲಿಕಾರ್ಜುನಗೌಡ ಭೂಮನಗೌಡ್ರ, ಈರಪ್ಪ ಜೋಗಿ, ವಿಜಯಲಕ್ಷ್ಮೀ ಚಲವಾದಿ, ಜ್ಯೋತಿ ಪಾಯಪ್ಪಗೌಡ್ರ, ವಿಶಾಲಾಕ್ಷಿ ಹೊಸಮನಿ, ಸುಮಿತ್ರಾ ಕಮಲಾಪೂರ, ಮಂಜುಳಾ ಹುರಳಿ, ಮುತ್ತಣ್ಣ ಕಡಗದ, ಉಮೇಶ ಸಂಗನಾಳಮಠ, ಬಸವರಾಜ ವಂಕಲಕುಂಟಿ, ನಿಂಗಪ್ಪ ಕಣವಿ, ಬಸವರಾಜ ಕೊಟಗಿ, ಶಶಿಧರ ಸಂಕನಗೌಡ್ರ, ಮುತ್ತಣ್ಣ ಲಿಂಗನಗೌಡ್ರ, ರವಿ ಬಿದರೂರ, ಯಲ್ಲಪ್ಪ ಮಣ್ಣೊಡ್ಡರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.