ನರಿಬೋಳ್- ಚಾಮನೂರ್ ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಒತ್ತಾಯಿಸಿ ಬೆಂಗಳೂರಿಗೆ ಶೀಘ್ರ ನಿಯೋಗ

ಕಲಬುರಗಿ,ಜೂ.14: ಅಲ್ಪ, ಸ್ವಲ್ಪ ಕೆಲಸ ಉಳಿದ ನರಿಬೋಳ್ ಚಾಮನೂರ್ ಸೇತುವೆ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿ ಶೀಘ್ರ ಗ್ರಾಮಸ್ಥರು ಬೆಂಗಳೂರಿಗೆ ಜೂನ್ 20ರೊಳಗೆ ನಿಯೋಗ ಹೋಗಲಿದೆ ಎಂದು ಗ್ರಾಮಸ್ಥರಾದ ಎಂ.ಎಸ್. ಪಾಟೀಲ್ ನರಿಬೋಳ್, ಶರಣಗೌಡ ಪೋಲಿಸ್ ಪಾಟೀಲ್, ರಾಘವೇಂದ್ರ ಕುಲಕರ್ಣಿ, ಗುರುರಾಜ್ ಟಣಕೆದಾರ್, ದೇವಿಂದ್ರ ಕರಿಗುಡ್ಡ, ಭಗವಾನ್ ಚಾಮನೂರ್, ಸಿದ್ಧರಾಮ್ ಗಡ್ಡದ್, ನಿಂಗಣ್ಣ ಗಡ್ಡದ್, ಭೀಮು ನಾಯಕೋಡಿ, ಪರಶುರಾಮ್ ದೇಸಾಯಿ, ನಿಂಗಣ್ಣ ಮುಡಬೂಳ್ ಅವರು ತಿಳಿಸಿದ್ದಾರೆ.
ಜೇವರ್ಗಿ ಮತ್ತು ಚಿತ್ತಾಪುರ ತಾಲ್ಲೂಕಿನ ನರಿಬೋಳ್- ಚಾಮನೂರ್ ಭೀಮಾ ನದಿಯ ಬ್ರಿಡ್ಜ್ ಕಮ್ ಬ್ಯಾರೇಜ್ ಪ್ರಾರಂಭವಾಗಿ ಆರು ವರ್ಷಗಳಾಗುತ್ತ ಬಂದರೂ ಪೂರ್ಣಗೊಂಡಿಲ್ಲ. ಕೆಲಸವೂ ಬಹಳ ಉಳಿದಿಲ್ಲ. ಕೇವಲ ಮೂರು ಕಾಲಂ ಹಾಕಿದರೆ ಪೂರ್ಣಗೊಳ್ಳುತ್ತದೆ. ಆದಾಗ್ಯೂ, ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತಹ ಪರಿಸ್ಥಿತಿ ಬಂದಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಅಪೂರ್ಣ ಕಾಮಗಾರಿ ಕುರಿತು ಗುತ್ತಿಗೆದಾರರಿಗೆ ಕೇಳಿದರೆ ಬಿಲ್ ಆಗಿಲ್ಲವೆಂದು ಹೇಳುತ್ತಾರೆ. ವಿಶೇಷವಾಗಿ ಇಲ್ಲಿ ಮುಖ್ಯ ಗುತ್ತಿಗೆದಾರರು ಕೆಎಂವಿ ಕನಸ್ಟ್ರಕ್ಷನ್ ಅವರು ಇನ್ನೊಬ್ಬ ಗುತ್ತಿಗದಾರರಿಗೆ ವಿಎಲ್‍ಈ ಕನ್ಸ್ಟ್ರಕ್ಷನ್ ಅವರಿಗೆ ಲೀಜ್ ನೀಡಿದ್ದಾರೆ. ಅವರು ಗುತ್ತಿಗೆದಾರರಿಗೆ ಬಿಲ್ ಆಗಿದೆ, ನಮಗೆ ಸರಿಯಾಗಿ ವೇತನ ಕೊಡುತ್ತಿಲ್ಲ ಎಂದು ಹೇಳುತ್ತಾರೆ. ಅವರಿಬ್ಬರ ಗೊಂದಲದಲ್ಲಿ ಮೂರು ವರ್ಷಗಳಿಂದ ಕೆಲಸ ನಿಲ್ಲಿಸಲಾಗಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೇತುವೆ ಪೂರ್ಣಗೊಂಡು ಲೋಕಾರ್ಪಣೆಯಾದರೆ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಎಲ್ಲರಿಗೂ ಅನುಕೂಲ ಆಗುತ್ತದೆ. ಹಣ, ಸಮಯ ಉಳಿತಾಯವಾಗುತ್ತದೆ. ಆದ್ದರಿಂದ ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಬೆಂಗಳೂರಿಗೆ ಶೀಘ್ರ ನಿಯೋಗದಲ್ಲಿ ತೆರಳಿ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ, ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್ ಹಾಗೂ ಐಟಿಬಿಟಿ, ಜಿಲ್ಲಾ ಉಸ್ತುವಾರಿ ಸಚಿವರೂ ಆದ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ, ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.