ನರಿಬೋಳ್‍ದಲ್ಲಿ ಫೆ. 25ರಂದು ಬಿಜೆಪಿ ಮುಖಂಡ ದಿ. ಶಿವಲಿಂಗಪ್ಪ ಪಾಟೀಲ್ ಮೂರ್ತಿ ಅನಾವರಣ

ಕಲಬುರಗಿ.ಫೆ.22: ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನರಿಬೋಳ್ ಗ್ರಾಮದಲ್ಲಿ ಬಿಜೆಪಿ ಮುಖಂಡ ದಿ. ಶಿವಲಿಂಗಪ್ಪ ಪಾಟೀಲ್ ನರಿಬೋಳ್ ಅವರ ಮೂರ್ತಿ ಅನಾವರಣ ಕಾರ್ಯಕ್ರಮವನ್ನು ಫೆಬ್ರವರಿ 25ರಂದು ಹಮ್ಮಿಕೊಳ್ಳಲಾಗಿದೆ ಎಂದು ನರಿಬೋಳ್ ಅವರ ಪುತ್ರ ಹಾಗೂ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರ್ತಿಯು ಫೆಬ್ರವರಿ 24ರಂದು ಜೇವರ್ಗಿ ಪಟ್ಟಣಕ್ಕೆ ಬರಲಿದ್ದು, ಅಂದು ಅಲ್ಲಿನ ರಿಲೈನ್ಸ್ ಪೆಟ್ರೋಲ್ ಪಂಪ್‍ನಿಂದ ವಿಜಯಪುರ ರಸ್ತೆವರೆಗೆ ಭವ್ಯ ಮೆರವಣಿಗೆ ಜರುಗಲಿದೆ. ನಂತರ 25ರಂದು ಸಹ ನರಿಬೋಳ್ ಗ್ರಾಮದಲ್ಲಿಯೂ ಸಹ ಮೂರ್ತಿಯ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನೂ ಸಹ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಸುಮಾರು 60 ಜನರು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ. ಇನ್ನೂ ಹೆಚ್ಚು ಜನರು ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದು ಎಂದು ಹೇಳಿದ ಅವರು, ನವ ವಧು- ವರರಿಗೆ ಉಚಿತವಾಗಿ ಬಟ್ಟೆ, ತಾಳಿ ನೀಡಲಾಗುತ್ತದೆ ಹಾಗೂ ಮರೆಯದ ಮಾಣಿಕ್ಯ ಎಂಬ ಪುಸ್ತಕವನ್ನು ಸಹ ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದರು.
ಕಾರ್ಯಕ್ರಮಕ್ಕೆ ರಾಜ್ಯ ಮಟ್ಟದ ನಾಯಕರು ಹಾಗೂ ಈ ಭಾಗದ ಜನಪ್ರತಿನಿಧಿಗಳು, ಮಠಾಧೀಶರೂ ಆಗಮಿಸುವರು. ಚುನಾವಣೆಗೂ ಕಾರ್ಯಕ್ರಮಕ್ಕೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಜೇವರ್ಗಿ ಶಾಸಕ ಡಾ. ಅಜಯಸಿಂಗ್ ಅವರು ತಾಕತ್ತಿದ್ದರೆ ಚರ್ಚೆಗೆ ಬರಲಿ ಎಂಬ ಸವಾಲು ಹಾಕಿದ್ದು, ಅದನ್ನು ಈಗಲೂ ಸಹ ಅವರಿಗೆ ಆಹ್ವಾನಿಸುವೆ. ಅವರ ತಂದೆ 8 ಬಾರಿ ಶಾಸಕರಾಗಿ, ಸಚಿವರಾಗಿ, ಮುಖ್ಯಮಂತ್ರಿಗಳಾಗಿದ್ದರೂ ಸಹ ಯಾವುದೇ ಅಭಿವೃದ್ಧಿ ಕೆಲಸ ಮಾಡಲಿಲ್ಲ. ಅವರ ಪುತ್ರ ಡಾ. ಅಜಯಸಿಂಗ್ ಸಹ ಅದೇ ರೀತಿ ಅಭಿವೃದ್ಧಿ ಮಾಡಲಿಲ್ಲ ಎಂದು ದೂರಿದರು.
ಜೇವರ್ಗಿ ತಾಲ್ಲೂಕಿನ ಮಲ್ಲಾಬಾದ್ ಏತ ನೀರಾವರಿ ಯೋಜನೆಗೆ 47 ಕೋಟಿ ರೂ.ಗಳನ್ನು ಕೊಟ್ಟಿದ್ದು ಬಿಜೆಪಿ ಸರ್ಕಾರವಾಗಿದೆ ಎಂದು ಹೇಳಿದ ಅವರು, ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯು ಮಾರ್ಚ್ 3ರಂದು ಬೀದರ್ ಜಿಲ್ಲೆಯ ಬಸವಕಲ್ಯಾಣದಿಂದ ಆರಂಭವಾಗಲಿದ್ದು, ಮಾರ್ಚ್ 7ರಂದು ಜೇವರ್ಗಿಗೆ ಆಗಮಿಸಲಿದೆ. ಆ ಸಂದರ್ಭದಲ್ಲಿ ಜೇವರ್ಗಿ ಪಟ್ಟಣದಲ್ಲಿ ಭವ್ಯ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದೆ. ಅಲ್ಲಿಂದ ಯಾತ್ರೆಯು ಅಫಜಲಪುರಕ್ಕೆ ತೆರಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಬಸವರಾಜ್ ಪಾಟೀಲ್, ಶಿವು ಭಂಡಾರಿ, ವಿಶ್ವನಾಥ್ ತಳವಾರ್, ನಾಗರಾಜ್ ಪಾಟೀಲ್, ವೀರೇಶ್, ಶಿವರಾಜ್, ತಿಪ್ಪಣ್ಣ, ಗುರುರಾಜ್ ಮುಂತಾದವರು ಉಪಸ್ಥಿತರಿದ್ದರು.