ನರಸೀಪುರ ಬಂದ್ ಸಂಪೂರ್ಣ ಯಶಸ್ವಿ: ವ್ಯಾಪಕ ಬೆಂಬಲ

ಸಂಜೆವಾಣಿ ವಾರ್ತೆ
ತಿ.ನರಸೀಪುರ: ಸೆ.27:- ತಮಿಳುನಾಡಿಗೆ ಕಾವೇರಿ-ಕಪಿಲಾ ನೀರು ಹರಿಸುತ್ತಿರುವ ರಾಜ್ಯ ಸರ್ಕಾರದ ನಿಲುವು ಮತ್ತು ಸುಪ್ರೀಂ ಕೋರ್ಟ್ ಆದೇಶವನ್ನು ವಿರೋಧಿಸಿ ಕಾವೇರಿ ಹಿತ ರಕ್ಷಣಾ ಸಮಿತಿ ಕರೆ ನೀಡಿದ್ದ ತಿ.ನರಸೀಪುರ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.
ಬಂದ್ ಹಿನ್ನೆಲೆಯಲ್ಲಿ ಪಟ್ಟಣದ ಅಂಗಡಿ -ಮುಂಗಟ್ಟುಗಳು ಸಂಪೂರ್ಣ ಮುಚ್ಚಿದ್ದವು.ಹಾಲು, ಔಷಧಿ ಅಂಗಡಿಗಳು ಮತ್ತು ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಸಿದವು.ರಾಜ್ಯ ಕಬ್ಬು ಬೆಳೆಗಾರರ ಸಂಘ,ದಲಿತ ಸಂಘರ್ಷ ಸಮಿತಿ, ವಕೀಲರ ಸಂಘ,ಆಟೋ ಚಾಲಕರ ಸಂಘ, ಕಾರ್ಮಿಕ ಸಂಘಟನೆಗಳು ಸೇರಿದಂತೆ 30 ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು.ವಿದ್ಯೋದಯ ವೃತ್ತದಿಂದ ಮೆರೆವಣಿಗೆ ಹೊರಟ ನೂರಾರು ಪ್ರತಿಭಟನಾಕಾರರು ಖಾಸಗಿ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ರಚಿಸಿ ಕೇಂದ್ರ ಮತ್ತು ರಾಜ್ಯಗಳು ಕಾವೇರಿ ನೀರು ಹಂಚಿಕೆಯ ಬಗ್ಗೆ ತಳೆದಿರುವ ನಿರ್ಧಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಭಗವಾನ್ ವೃತ್ತ ಮಾರ್ಗವಾಗಿ ತಾಲೂಕು ಕಚೇರಿ ತಲುಪಿ ಮಿನಿ ವಿಧಾನಸೌಧದ ಮುಂಭಾಗ ಧರಣಿ ನಡೆಸಿದರು.
ಬಂದ್ ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಎಂ. ಅಶ್ವಿನ್ ಕುಮಾರ್, ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದ್ದರೂ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ಏಕೆ ಎಂಬುದು ಯಕ್ಷಪ್ರಶ್ನೆ.ರಾಜ್ಯ ಸರ್ಕಾರ ವಸ್ತುಸ್ಥಿತಿಯನ್ನು ಕಾವೇರಿ ನೀರು ಹಂಚಿಕೆ ನಿರ್ವಹಣಾ ಮಂಡಳಿ ಮತ್ತು ಸುಪ್ರೀಂ ಕೋರ್ಟ್ ಮುಂದೆ ಮನದಟ್ಟು ಮಾಡುವ ಅನಿವಾರ್ಯತೆ ಇದೆ.ಕಬಿನಿ-ಕೆ.ಆರ್. ಎಸ್ ಆಣೆಕಟ್ಟುಗಳಲ್ಲಿ ನೀರಿನ ಮಟ್ಟವನ್ನು ಕೋರ್ಟ್ ಮತ್ತು ಪ್ರಾಧಿಕಾರಗಳಿಗೆ ಮನವರಿಕೆ ಮಾಡಬೇಕಿದೆ.ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣವವೇ ನಿಲ್ಲಿಸಬೇಕು ಎಂದು ಅಗ್ರಹಿಸಿದರು.
ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಗಸೂರು ಶಂಕರ್, ರಾಜ್ಯ ಸರ್ಕಾರ ರಾಜಕೀಯ ದುರುದ್ದೇಶಕ್ಕಾಗಿ ರೈತರ ಹಿತಾಸಕ್ತಿಯನ್ನು ಬಲಿಕೊಟ್ಟು ತಮಿಳುನಾಡಿಗೆ ನೀರುಹರಿಸುತ್ತಿದೆ.ಕೆ.ಆರ್.ಎಸ್ -ಕಬಿನಿ ಅಚ್ಚುಕಟ್ಟು ಪ್ರದೇಶದ ರೈತರಿಗೆ ಬೇಸಾಯ ಮತ್ತು ಕುಡಿಯಲು ನೀರು ಇಲ್ಲ.ಆದರೂ ರಾಜ್ಯ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವುದು ರಾಜ್ಯದ ರೈತರಿಗೆ ಮಾಡಿದ ಮಹಾಮೋಸ.ಈ ಭಾಗದ ರೈತರು ಬಿತ್ತನೆ ಮಾಡಿದ್ದು, ಸಾಕಷ್ಟು ನಷ್ಟ ಅನುಭವಿಸಿದ್ದಾರೆ.ಹಾಗಾಗಿ ಸರ್ಕಾರ ಪ್ರತಿ ಎಕರೆಗೆ 25000/-ಸಾವಿರ ರೂಗಳ ಪರಿಹಾರ ಘೋಷಿಸಬೇಕು ಎಂದರು.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಿಯೋಗ ಕಳುಹಿಸಿ ಉಭಯ ಜಲಾಶಯಗಳ ವಸ್ತುಸ್ಥಿತಿಯನ್ನು ಅವಲೋಕಿಸಿದ ನಂತರ ನಿರ್ಧಾರಕೈಗೊಳ್ಳಬೇಕು.
ಕರ್ನಾಟಕದಲ್ಲಿ ಬರಗಾಲ ಛಾಯೆ ಮುಂದುವರೆದಿದೆ. ಸರ್ಕಾರಕ್ಕೆ ಇದೆಲ್ಲ ಗೊತ್ತಿದ್ದರೂ ತಮಿಳುನಾಡಿಗೆ ನೀರು ಬಿಟ್ಟಿರುವುದು ನಿಲ್ಲಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಕಾವೇರಿ -ಕಪಿಲಾ ಹಿತರಕ್ಷಣಾ ಸಮಿತಿಯ ಹೋರಾಟ ರಾಜ್ಯದ ರೈತರಿಗೆ ಮಾತ್ರ ಅಲ್ಲ,ಎಲ್ಲ ವರ್ಗದ ಜನರಿಗೆ ಎಂದರು.
ಧರಣಿಯಲ್ಲಿ ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್, ತಾಲೂಕು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಸಿದ್ದೇಶ್ ,ಕಾರ್ಯದರ್ಶಿ ಪ್ರಸಾದ್ ನಾಯಕ್ ಜೆಡಿಎಸ್ ಕ್ಷೇತ್ರ ಅಧ್ಯಕ್ಷ ಸಿಬಿಹುಂಡಿ ಚಿನ್ನಸ್ವಾಮಿ,ತಾಲೂಕು ಬಾಬು ಜಗಜೀವನ್ ರಾಂ ಸಂಘದ ಅಧ್ಯಕ್ಷ ಹುಣಸೂರು ಪುಟ್ಟಯ್ಯ, ನಾಗರೀಕ ವೇದಿಕೆ ಕೆ. ಎನ್.ಪ್ರಭುಸ್ವಾಮಿ, ತಾಲೂಕು ವಕೀಲ ಸಂಘದ ಅಧ್ಯಕ್ಷ ಫಾಲಾಕ್ಷಮೂರ್ತಿ, ದಸಂಸ ಜಿಲ್ಲಾ ಸಂಚಾಲಕರಾದ ಆಲಗೂಡು ಚಂದ್ರಶೇಖರ್, ಸೋಸಲೆ ರಾಜಶೇಖರ್, ಯಡದೊರೆ ಮಹದೇವಯ್ಯ, ಪರಿಣಾಮಿಪುರ ಪ್ರದೀಪ್, ಮಣಿಕಂಠ ,ಸೋಮನಾಥಪುರ ಗಣೇಶ್, ಯೋಗೇಶ್, ಶಿವಕುಮಾರ್, ಮನೋಜ್ ಕುಮಾರ್, ರಾಜೇಶ್,ಸೋಸಲೆ ಮಲ್ಲು, ಅಯ್ಯಪ್ಪ ಟ್ರಸ್ಟ್ ನ ಸಿದ್ದಲಿಂಗಸ್ವಾಮಿ, ಕನ್ನಾಯಕನಹಳ್ಳಿ ಮರಿಸ್ವಾಮಿ,ಕರೋಹಟ್ಟಿ ಮಹಾದೇವಯ್ಯ, ಕ್ರೇಜಿ ಸುರೇಶ್, ಟೌನ್ ಅಪ್ಪಣ್ಣ, ಪರಶೈವಮೂರ್ತಿ,ಯೋಗೇಶ್, ನಿಂಗರಾಜು, ಕುಮಾರ್, ಕುಮಾರ್, ಲೋಕೇಶ್, ಸುರೇಶ್, ಉಮೇಶ್, ಸ್ವಾಮಿಗೌಡ, ಶಿವಪ್ರಸಾದ್ ಇತರರು ಹಾಜರಿದ್ದರು.