ನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿಯಲ್ಲಿ ಟಿಕೆಟ್‍ಗಾಗಿ ಪ್ರಬಲ ಪೈಪೆÇೀಟಿ: ಜೆಡಿಎಸ್‍ನಿಂದ ಅಶ್ವಿನ್‍ಗೆ ಪಕ್ಕಾ

ವರದಿ: ತಲಕಾಡು ಮಹದೇವ
ತಿ.ನರಸೀಪುರ: ನ.24:- 2023ರ ವಿಧಾನ ಸಭಾ ಚುನಾವಣೆಗೆ ದಿನಾಂಕ ಪ್ರಕಟಗೊಳ್ಳುವ ಮುನ್ನವೇ ತಿ.ನರಸೀಪುರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಲ್ಲಿ ಟಿಕೆಟ್ ಗಾಗಿ ಭರಾಟೆ ಜೋರಾಗಿದೆ.ಹಲವು ಪ್ರಭಾವಿ ರಾಜಕಾರಿಣಿಗಳು ಪ್ರತಿನಿಧಿಸಿದ್ದ ತಿರುಮಕೂಡಲು ನರಸೀಪುರ ಕ್ಷೇತ್ರದಲ್ಲಿ ಯುವಕರ ದಂಡು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಟಿಕೆಟ್ ಗಾಗಿ ಭಾರೀ ಪೈಪೆÇೀಟಿ ನಡೆಸುತ್ತಿದ್ದು,ತಮ್ಮ ಪಕ್ಷದ ವರಿಷ್ಟರನ್ನು ಓಲೈಸಿ ಟಿಕೆಟ್ ದಕ್ಕಿಸಿಕೊಳ್ಳಲು ಭಗೀರಥ ಪ್ರಯತ್ನ ನಡೆಸುತ್ತಿದ್ದಾರೆ. ಹಲವು
ಆಕಾಂಕ್ಷಿಗಳು ಟಿಕೆಟ್ ಖಚಿತಗೊಳ್ಳುವ ಮುನ್ನವೇ ಕ್ಷೇತ್ರದ ಪರ್ಯಟನೆ ನಡೆಸಿ ಮತದಾರರ ಓಲೈಕೆಗೆ ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸ್ಥಿತಿ ಹಿಂದಿಗಿಂತ ಬಹಳ ಭಿನ್ನ.ಮಾಜಿ ಸಚಿವ ಮಹದೇವಪ್ಪ ಪಕ್ಕದ ನಂಜನಗೂಡು ಕ್ಷೇತ್ರದ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದೆ ತಡ ಕಾಂಗ್ರೆಸ್ ನಲ್ಲಿ ಏಕಾಏಕಿ ಹೊಸ ಆಕಾಂಕ್ಷಿಗಳ ದಂಡು ಉದಯಿಸಿದೆ.ಹಲವು ಯುವ ನಾಯಕರು ಕಾಂಗ್ರೆಸ್ ಪಕ್ಷದ ಟಿಕೆಟ್ ಪಡೆಯಲು ಜಿದ್ದಾಜಿದ್ದಿನ ಪೈಪೆÇೀಟಿ ನಡೆಸುತ್ತಿದ್ದು,ಈ ಪೈಕಿ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಮುಂಚೂಣಿಯಲ್ಲಿದ್ದಾರೆ.ಬೋಸ್ ಗೆ ಬಿ ಫಾರಂ ಪಕ್ಕ ಎಂದು ಅವರ ಬೆಂಬಲಿಗರ ಅಚಲ ನಂಬಿಕೆ.
ಕಾಂಗ್ರೆಸ್ ಧುರೀಣ ಮಾಜಿ ಸಚಿವ ಟಿ.ಎನ್.ನರಸಿಂಹಮೂರ್ತಿ
ಮಗ ಮಾಜಿ ವಿಧಾನ ಪರಿಷತ್ ಸದಸ್ಯ ದಿವಂಗತ ಎನ್ ಮಂಜುನಾಥ್ ಪುತ್ರ ಪ್ರಫುಲ್ ಚಂದ್ರ ಕೂಡ ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದು, ಶತಾಯಗತಾಯ ಟಿಕೆಟ್ ಪಡೆಯಬೇಕೆನ್ನುವ ಜಿದ್ದಿಗೆ ಬಿದ್ದಂತಿದೆ.ಇವರು ಎರಡು ತಲೆಮಾರಿನ ರಾಜಕೀಯ ಹಿನ್ನೆಲೆವುಳ್ಳ ಯುವನಾಯಕ.ಅಲ್ಲದೆ ಪರಿಶಿಷ್ಟಜಾತಿಯ ಎಡಗೈಗೆ ಪ್ರಾತಿನಿಧ್ಯ ನೀಡಬೇಕೆಂಬುದು ಇವರ ವಾದ.ಸ್ಥಳೀಯ ಕಾಂಗ್ರೆಸ್ ಯುವ ಮುಖಂಡ ನೂತನ್ ಕೂಡ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದು ಅವರ ಹೆಸರು ಕೂಡ ಚಾಲ್ತಿಯಲ್ಲಿದೆ.ಡಾ.ಪುಷ್ಪ ಅಮರ್ ನಾಥ್ , ಮಾಜಿ ಸಂಸದ ಧ್ರುವನಾರಾಯಣ್ ಮತ್ತು ಮೂಗೂರು ಚಿನ್ನಸ್ವಾಮಿ ಹೆಸರು ಅಲ್ಲಲ್ಲಿ ಕೇಳಿ ಬರುತ್ತಿದ್ದು, ಅಭ್ಯರ್ಥಿ ಆಯ್ಕೆ ನಿರ್ಣಯ ವರಿಷ್ಠರಿಗೆ ನಿರ್ಧಾರದ ಮೇಲೆ ನಿಂತಿದೆ. ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ ಮತ್ತು ಪರಿಸ್ಥಿತಿಯನ್ನು ಅವಲೋಕಿಸಿ ಅಂತಿಮ ಕ್ಷಣದಲ್ಲಿ ಸ್ವತಃ ಮಹದೇವಪ್ಪನವರೇ ಕಣಕ್ಕೆ ಇಳಿಯುತ್ತಾರೆ ಎಂಬ ಗುಸುಗುಸು ಅಲ್ಲಲ್ಲಿ ಹರಿದಾಡುತ್ತಿದೆ.
ಕಾಂಗ್ರೆಸ್ ನಲ್ಲಿ ಟಿಕೆಟ್ ಗಾಗಿ ಶೀತಲ ಸಮರ ನಡೆಯುತ್ತಿದ್ದರೆ ಬಿಜೆಪಿ ಟಿಕೆಟ್ ಹಂಚಿಕೆ ಮತ್ತಷ್ಟು ಜಟಿಲ. ಬಿಜೆಪಿ ವರಿಷ್ಟರು ಸರಣಿ ಸಭೆಗಳನ್ನು ನಡೆಸಿದರೂ ಒಮ್ಮತದ ಅಭ್ಯರ್ಥಿಯನ್ನು ಗುರುತಿಸಲು ಸಾಧ್ಯವಾಗಿಲ್ಲ. ಕಾಂಗ್ರೆಸ್ ಅಭ್ಯರ್ಥಿ ಹೆಸರು ಅಂತಿಮಗೊಂಡ ನಂತರ ಅವರಿಗೆ ಸರಿಸಾಟಿಯಾಗಬಲ್ಲ ಎದುರಾಳಿಯನ್ನು ಕಣಕ್ಕಿಳಿಸುವ ತಂತ್ರಗಾರಿಕೆ ಇದೆ ಎಂದು ಹೇಳಲಾಗುತ್ತಿದೆ.ಮಾಜಿ ಸಚಿವ ರಾಮದಾಸ್ ಬೆಂಬಲಿಗ ಮಾಜಿ ಶಾಸಕ ಎಲ್.ಎನ್. ಭಾರತೀಶಂಕರ್,ನಿಲಸೋಗೆಯ ಬಿಜೆಪಿ ಮುಖಂಡ ದಿ.ಪುಟ್ಟಬಸವಯ್ಯ ಸೋದರ ಸಂಬಂಧಿ ವೈದ್ಯ ಡಾ.ರೇವಣ್ಣ,ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಬೆಂಬಲಿತ ಕನಕಪುರ ಎಸ್.ಅರವಿಂದ,ಸಾಮ್ರಾಟ್ ಸುಂದರೇಶನ್ ಮತ್ತು ಸಂಸದ ಶ್ರೀನಿವಾಸ್ ಪ್ರಸಾದ್ ಮಗಳಾದ ಪೂರ್ಣಿಮಾ ಪ್ರಸಾದ್ ನಡುವೆ ಬಿಜೆಪಿ ಟಿಕೆಟ್ ಗಾಗಿ ತೀವ್ರ ಪೈಪೆÇೀಟಿ ಏರ್ಪಟ್ಟಿದೆ.
ಈ ಪೈಕಿ ಡಾ.ರೇವಣ್ಣರ ಹೆಸರು ಹೆಚ್ಚು ಚಾಲ್ತಿಯಲ್ಲಿದ್ದು, ಬಿಜೆಪಿ ಕಾರ್ಯಕರ್ತರು ಕೂಡ ಸ್ಥಳೀಯ ಅಭ್ಯರ್ಥಿ ಬಗ್ಗೆ ಹೆಚ್ಚು ಒಲವು ಹೊಂದಿದ್ದಾರೆ.ಅಲ್ಲದೆ ಪೂರ್ಣಿಮಾ ಕೂಡ ಸಂಸದ ವಿ. ಶ್ರೀನಿವಾಸ್ ಪ್ರಸಾದ್ ಪ್ರಭಾವದಿಂದ ಟಿಕೆಟ್ ಪಡೆಯವುದನ್ನು ಅಲ್ಲಗಳೆಯುವಂತಿಲ್ಲ. ಪ್ರಭಾವಿ ನಾಯಕರ ಕೃಪಾಶಿರ್ವಾದದಿಂದ ಟಿಕೆಟ್ ಪಡೆಯಲು ಎಲ್ಲ ಆಕಾಂಕ್ಷಿಗಳು ತೆರೆಮರೆಯ ಕಸರತ್ತು ನಡೆಸುತ್ತಿದ್ದು, ತಮ್ಮ ನೆಚ್ಚಿನ ನಾಯಕರ ಮೂಲಕ ವರಿಷ್ಠರ ಮನವೊಲಿಕೆಗೆ ಮುಂದಾಗಿದ್ದಾರೆ.
ಜೆಡಿಎಸ್ ಪಕ್ಷ ಹಾಲಿ ಶಾಸಕ ಎಂ.ಅಶ್ವಿನ್ ಕುಮಾರ್ ಟಿಕೆಟ್ ನೀಡುವುದು ಬಹುತೇಕ ಖಚಿತ. ಕ್ಷೇತ್ರದಲ್ಲಿ ಜೆಡಿಎಸ್ ಟಿಕೆಟ್ ಗಾಗಿ ಅಶ್ವಿನ್ ಕುಮಾರ್‍ಗೆ ಬೇರಾವ ಪ್ರತಿಸ್ಪರ್ಧಿ ಇಲ್ಲದ ಕಾರಣ ಅವರಿಗೆ ಟಿಕೆಟ್ ಖಚಿತ ಎನ್ನಲಾಗಿದೆ. ಹಾಲಿ ಶಾಸಕ ಅಶ್ವಿನ್ ಗೆ ಕ್ರಿಯಾಶೀಲ, ಸೃಜನಶೀಲ ಮತ್ತು ಜನಾನುರಾಗಿ ಎಂಬ ಹೆಗ್ಗಳಿಕೆಯೂ ಇದೆ. ಅಲ್ಲದೆ 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನ ಪ್ರಭಾವಿ ನಾಯಕ ಮಾಜಿ ಸಚಿವ ಎಚ್.ಸಿ
ಮಹದೇವಪ್ಪರನ್ನು 28 ಸಾವಿರಕ್ಕೂ ಹೆಚ್ಚಿನ ಮತಗಳ ಭಾರೀ ಅಂತರದಿಂದ ಸೋಲಿಸಿದ ಖ್ಯಾತಿಯು ಅವರಿಗಿದೆ. ಹಾಗಾಗಿ ಜೆಡಿಎಸ್ ವರಿಷ್ಠರು ಅಶ್ವಿನ್ ಕುಮಾರರನ್ನು ಮತ್ತೊಮ್ಮೆ ಕಣಕ್ಕಿಸುವುದು ಶತಸಿದ್ಧ.
ಜೆಡಿಎಸ್ ನಿಂದ ಹಾಲಿ ಶಾಸಕ ಅಶ್ವಿನ್ ಕುಮಾರ್, ಬಿಜೆಪಿಯಿಂದ ಡಾ.ರೇವಣ್ಣ ಮತ್ತು ಕಾಂಗ್ರೆಸ್ ನಿಂದ ಸುನಿಲ್ ಬೋಸ್ ಗೆ ಟಿಕೆಟ್ ನೀಡಿದಲ್ಲಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ಮೂವರ ಮಧ್ಯೆ ತುರುಸಿನ ಸ್ಪರ್ಧೆ ನಡೆಯಲಿದೆ.ಅಲ್ಲದೆ ಗೆಲುವು ಕೂಡ ಅತ್ಯಂತ ಅಲ್ಪ ಅಂತರ ಆಗಿರುತ್ತದೆ ಎಂಬುದು ಕ್ಷೇತ್ರದ ಮತದಾರರ ಲೆಕ್ಕಾಚಾರ.