ನರಸಿಂಹಗಿರಿ ದೊಡ್ಮನೆ ಕುಟುಂಬದಿಂದ,ಚೊಚ್ಚಲ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಮಾ.14 :- ಮಹಿಳಾ ದಿನಾಚರಣೆಯ ಅಂಗವಾಗಿ ತಾಲೂಕಿನ ನರಸಿಂಹಗಿರಿ ಗ್ರಾಮದ ದೊಡ್ಮನೆ ಕುಟುಂಬದಿಂದ ಚೊಚ್ಚಲ ಗರ್ಭಿಣಿಯರಿಗೆ ಸೀಮಂತ ಶಾಸ್ತ್ರವನ್ನು ಮಂಗಳವಾರದಂದು ಪ್ರತಿ ವರ್ಷದಂತೆ ಈ ವರ್ಷವೂ  ಆಯೋಜನೆ ಮಾಡಲಾಗಿತ್ತು.
ನರಸಿಂಹಗಿರಿ ದೊಡ್ಮನೆ ಕುಟುಂಬದ  ಸೊಸೆ ಹಾಗೂ ಮಾಜಿ ಶಾಸಕ ದಿವಂಗತ ಎನ್ ಟಿ ಬೊಮ್ಮಣ್ಣ ಅವರ ಪತ್ನಿ ಓಬಮ್ಮ ಮಾತನಾಡಿ ಹೆರಿಗೆ ಎನ್ನುವುದು ಮಹಿಳೆಯರಿಗೆ ಪುನರ್ಜನ್ಮವಿದ್ದಂತೆ ಹಾಗಾಗಿ ಮಹಿಳೆಯರು ಹಣ್ಣು, ತರಕಾರಿ ಸೊಪ್ಪು ಸೇರಿದಂತೆ ವಿವಿಧ ಪೌಷ್ಠಿಕಾಂಶವಿರುವ ಆಹಾರವನ್ನು ಸೇವಿಸಬೇಕು ಅಲ್ಲದೆ ಅಪಾಯಕಾರಿ ಕೆಲಸದಿಂದ ದೂರವಿರುವಂತೆ ಗರ್ಭಿಣಿ ಸ್ತ್ರೀಯರಿಗೆ ಮುಂಜಾಗ್ರತಾ ಕ್ರಮ ವಹಿಸಬೇಕು. ಗರ್ಭಿಣಿಯರು ರಕ್ತಹೀನತೆ ಹಾಗೂ ಮಗುವಿನ ಉತ್ತಮ ಬೆಳವಣಿಗೆಗೆ ಗಮನಹರಿಸಿ ಪೌಷ್ಠಿಕ ಆಹಾರ ಸೇವನೆ ಮಾಡುವಂತೆ ಓಬಮ್ಮ  ತಿಳಿಸಿದರು.
ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿದ ಕೂಡ್ಲಿಗಿ  ಶಾಸಕ ಡಾ ಶ್ರೀನಿವಾಸ ಎನ್ ಟಿ ಮಾತನಾಡುತ್ತ ನೂರಾರು ಚೊಚ್ಚಲ ಗರ್ಭಿಣಿ ಮಹಿಳೆಯರಿಗೆ ತವರು ಮನೆ ಉಡುಗೊರೆ ಎಂಬಂತೆ ಉಡಿ ತುಂಬುವ ಸೀಮಂತ ಶಾಸ್ತ್ರ ದೊಡ್ಮನೆ ಕುಟುಂಬದಿಂದ ಮಾಡುತ್ತಿರುವುದು ಪುಣ್ಯದ ಕೆಲಸವೆಂದು ಭಾವಿಸಿದ್ದೇನೆ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನನ್ನ ವಿವಾಹ ನಿಶ್ಚಿತಾರ್ಥವಾಗಿದ್ದು ಈ ವಿಶೇಷ ದಿನದ ಕಾರ್ಯಕ್ರಮವನ್ನು ಮಹಿಳೆಯರಿಗೆ ಅನುಕೂಲವಾಗುವ ಆರೋಗ್ಯ ಕಾಪಾಡುವ ಕಾರ್ಯಕ್ರಮವನ್ನು ಪ್ರತಿವರ್ಷ ಆಚರಿಸುತ್ತಿರುವುದಾಗಿ ಶಾಸಕ ಡಾ ಶ್ರೀನಿವಾಸ ತಿಳಿಸಿದರು.
ಕಾಂಗ್ರೆಸ್ ಮುಖಂಡ ಹಾಗೂ  ಸಮಾಜ ಸೇವಕ ಎನ್.ಟಿ.ತಮ್ಮಣ್ಣ ಮಾತನಾಡಿ, ಆರೋಗ್ಯವೇ ಮಹಾಭಾಗ್ಯ  ಚೊಚ್ಚಲ ಗರ್ಭಿಣಿಯರು ಹಿರಿಯ ಮಹಿಳೆಯರ ಸಲಹೆ ಪಡೆದುಕೊಂಡು ಸಮಯೋಚಿತವಾಗಿ  ವೈದ್ಯರಿಂದ ತಪಾಸಣೆಗೊಳಗಾಗಿ ಚಿಕಿತ್ಸೆ ಪಡೆಯಬೇಕು ಅಲ್ಲದೆ ಉತ್ತಮ ಆರೋಗ್ಯ ನಿಮ್ಮದಾಗಿದ್ದಲ್ಲಿ ಮಗುವಿನ ಆರೋಗ್ಯದ ಜೊತೆಗೆ ಉತ್ತಮ ಬೆಳವಣಿಗೆಯಾಗಬಲ್ಲದು ಸೀಮಂತ ಶಾಸ್ತ್ರ ಕಾರ್ಯಕ್ಕೆ ಆಗಮಿಸಿದ ಗರ್ಭಿಣಿ ಸಹೋದರಿಯರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ  ಮುಖಂಡರಾದ ನರಸಿಂಹನಗಿರಿ ವೆಂಕ ಟೇಶ್, ಉಪನ್ಯಾಸಕಿ ಎನ್.ಟಿ.ಗಂಗಮ್ಮ ಎನ್.ಟಿ.ಸುಜಾತಾ, ಎನ್.ಟಿ.ಸುವರ್ಣ, ಎನ್ ಪಿ ಮಂಜುನಾಥ, ಎನ್ ವಿ  ಸಣ್ಣತಮ್ಮಣ್ಣ,ಕಾನಾಮಡುಗು ಶಶಿಧರ, ಕೂಡ್ಲಿಗಿ ಕಾವಲ್ಲಿ ಶಿವಪ್ಪನಾಯಕ ಸೇರಿದಂತೆ ಇತರರಿದ್ದರು