ನರಸಾಪುರ ಗಣೇಶ್ ಬ್ಯಾಂಕರ್ಸ್ ವಂಚನೆ – ಕ್ರಮಕ್ಕೆ ಒತ್ತಾಯ

ಕೋಲಾರ,ಡಿ.೧: ನರಸಾಪುರ ಗ್ರಾಮದಲ್ಲಿ ಗಿರವಿ ವ್ಯಾಪಾರ ನಡೆಸುತ್ತಿರುವ ಗಣೇಶ್ ಬ್ಯಾಂಕರ್ಸ್ ಇವರು ಸಾರ್ವಜನಿಕರ, ರೈತರ, ಬಡಕಾರ್ಮಿಕರ ಒಡವೆಗಳನ್ನು ಗಿರವಿ ಇಟ್ಟುಕೊಂಡು ನಿಯಮಾನುಸಾರ ವಾಪಸ್ಸು ನೀಡದೆ ಮೋಸ ಮಾಡುತ್ತಿದ್ದು, ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಮ್ಮ ಕೋಲಾರ ರೈತ ಸಂಘವು ಕೋಲಾರ ತಾಲ್ಲೂಕು ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಮನವಿ ಸಲ್ಲಿಸಿದರು.
ನಮ್ಮ ಕೋಲಾರ ರೈತ ಸಂಘದ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್‌ಗೌಡ ಮಾತನಾಡಿ, ಕೋಲಾರ ತಾಲ್ಲೂಕು ನರಸಾಪುರ ಗ್ರಾಮದಲ್ಲಿ ಗಣೇಶ್ ಬ್ಯಾಂಕರ್ಸ್ ಗಿರವಿದಾರರಾದ ಇವರು ಸುಮಾರು ೧೫-೨೦ ವರ್ಷಗಳಿಂದ ಗಿರವಿ ವ್ಯವಹಾರ ನಡೆಸುತ್ತಿದ್ದು, ಸಾರ್ವಜನಿಕರು ಮತ್ತು ರೈತರು ಹಾಗೂ ಬಡ ಕೂಲಿ ಕಾರ್ಮಿಕರ ಒಡವೆಗಳನ್ನು ಗಿರವಿ ಇಟ್ಟುಕೊಂಡು ವ್ಯಾಪಾರ ವಹಿವಾಟು ನಡೆಸುತ್ತಿದ್ದು, ಸುಸ್ತಿದಾರರಾದ ಸಾರ್ವಜನಿಕರ ಒಡವೆಗಳನ್ನು ನಿಯಮಾನುಸಾರ ವಾಪಸ್ಸು ನೀಡದೆ ಅಥವಾ ವಿಲೇವಾರಿ ಮಾಡುತ್ತಿಲ್ಲವೆಂದು ಸಾರ್ವಜನಿಕರಿಂದ ಆಗಾಗ ದೂರುಗಳು ಕೇಳಿಬರುತ್ತಿರುವುದಲ್ಲದೆ ಸಾವಿರಾರು ಬಡ ಕಾರ್ಮಿಕರ ಹಾಗೂ ರೈತರ ಕೆ.ಜಿಗಟ್ಟಲೆ ಒಡವೆಗಳು ಗಿರಿವಿದಾರರ ಬಳಿಯೇ ಅಕ್ರಮವಾಗಿ ಉಳಿಸಿಕೊಂಡು ಮುಂದೆ ಇವುಗಳನ್ನು ಉನ್ನತ ಬೆಲೆಗೆ ಮಾರಿ ಹಣಗಳಿಸುತ್ತಿರುವುದರಿಂದ, ಇವರ ಬಳಿ ಅಪಾರವಾದ ಸಂಪತ್ತು ಕ್ರೂಢೀಕರಣವಾಗಿ ಸಮಾಜದಲ್ಲಿ ಅಸಮತೋಲನ ಉಂಟಾಗುತ್ತದೆಯಲ್ಲದೆ ಎಂದು ತಿಳಿಸಿದ್ದಾರೆ.
ರೈತರು ಹಾಗೂ ಬಡ ಕಾರ್ಮಿಕರು ಬಹಳ ಪ್ರಯಾಸದಾಯಕವಾಗಿ ಕೂಡಿಟ್ಟ ಹಣದಿಂದ ಸಂಪಾದಿಸಿದ ಒಡವೆಗಳನ್ನು ಕಳೆದುಕೊಂಡು, ನಿರಾಶಾದಾಯಕವಾಗಿ ಹತಾಶ ಮನೋಭಾವನೆಯಿಂದ ವ್ಯವಸ್ಥೆಯ ಬಗ್ಗೆ ಕೆಟ್ಟ ಭಾವನೆಯನ್ನು ಹೊಂದಿ ಮುಂದೆ ಸಾರ್ವಜನಿಕ ವ್ಯವಸ್ಥೆಯಲ್ಲಿ ಪ್ರತಿಕೂಲ ವರ್ತನೆಯನ್ನು ತೋರುವುದು, ಕುಟುಂಬ ಆರ್ಥಿಕವಾಗಿ ದಿವಾಳಿಯಾಗುವುದರಿಂದ ಆತ್ಮಹತ್ಯೆಯಂತಹ ಪ್ರಯತ್ನಗಳನ್ನು ನಡೆಸುತ್ತಿರುತ್ತಾರೆ ಎಂದು ದೂರಿದರು.
ಇದಲ್ಲದೇ ಸದರಿ ಲೇವಾದೇವಿದಾರರು ಕದ್ದ ಒಡವೆಗಳನ್ನು ಅತೀ ಕಡಿಮೆ ಬೆಲೆಗೆ ತೆಗೆದುಕೊಳ್ಳುವುದು, ಇನ್ನಿತರ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿರುತ್ತಾರೆ,.
ಈ ನಿಯೋಗದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಅರಾಭಿಕೊತ್ತನೂರು ಮುನಿವೆಂಕಟಪ್ಪ, ಜಿಲ್ಲಾ ಕಾರ್ಯಧ್ಯಕ್ಷ ಕಾಮಧೇನಹಳ್ಳಿ ವೆಂಕಟಾಚಲಪತಿ, ಅಬ್ಬಣಿ ಮುನೇಗೌಡ, ಜಿಲ್ಲಾ ಉಪಾಧ್ಯಕ್ಷ ವಿಶ್ವನಾಥಗೌಡ, ಸಂಘಟನಾ ಕಾರ್ಯದರ್ಶಿ ಕೆಂಬೋಡಿ ರವಿ, ವೀರಾಪುರ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ನಾಗರಾಜ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ತಮ್ಮೇಗೌಡ, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಕೋಲಾರ ತಾಲ್ಲೂಕು ಅಧ್ಯಕ್ಷ ಶಿಳ್ಳಂಗೆರೆ ಗೋಪಾಲ್, ಕೋಲಾರ ತಾಲ್ಲೂಕು ಗೌರವಾಧ್ಯಕ್ಷ ನಾರಾಯಣಪ್ಪ, ಅಶೋಕ್, ಗಣೇಶ್ ಹಾಜರಿದ್ದರು.