ನರಸಾಪುರದಲ್ಲಿ ಬೃಹತ್ ಸಮಾವೇಶ

ಕೋಲಾರ, ಮಾ. ೩- ಕೇಂದ್ರ-ರಾಜ್ಯದ ಬಿಜೆಪಿ ಸರ್ಕಾರದ ಸಾಧನೆಗಳು ಹಾಗೂ ಕಳೆದ ಹತ್ತು ವರ್ಷಗಳ ಕಾಲ ಕ್ಷೇತ್ರದಲ್ಲಿ ನಡೆಸಿರುವ ಅಭಿವೃದ್ಧಿ ಕಾರ್ಯಗಳನ್ನು ಮೆಚ್ಚಿ ಮಾ.೫ ರಂದು ನರಸಾಪುರದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಬೃಹತ್ ಸಮಾವೇಶ ಹಮ್ಮಿಕೊಂಡಿದೆ ಎಂದು ಮಾಜಿ ಸಚಿವ ವರ್ತೂರ್ ಪ್ರಕಾಶ್ ತಿಳಿಸಿದರು.
ತಾಲೂಕಿನ ರಾಮಸಂದ್ರ, ಮಲ್ಲಸಂದ್ರ, ಕರಡುಬಂಡೆ ಮತ್ತು ಕೆ.ಬಿ.ಹೊಸಹಳ್ಳಿ ಗ್ರಾಮಗಳಲ್ಲಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಹತ್ತು ವರ್ಷಗಳ ಕಾಲ ನಾನು ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದು, ಈಗಿನ ಶಾಸಕರು ಯಾವುದೇ ಒಂದು ಅಭಿವೃದ್ಧಿ ಕಾರ್ಯ ಮಾಡದೆ ಕ್ಷೇತ್ರವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಕ್ಷೇತ್ರದ ಪರಿಸ್ಥಿತಿ ಬಹಳಷ್ಟು ಹದಗಟ್ಟಿದೆ ಆದ್ದರಿಂದ ತಾವೆಲ್ಲರೂ ಈ ಬಾರಿ ಬಿಜೆಪಿಗೆ ಬೆಂಬಲಿಸಿ ಗತವೈಭವವನ್ನು ಮತ್ತೆ ಮರುಕಳಿಸುವಂತೆ ಮಾಡಬೇಕೆಂದು ಮನವಿ ಮಾಡಿದರು.
ಪ್ರಸ್ತುತ ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳು ಆಡಳಿತದಲ್ಲಿದ್ದು, ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದೇ ಬರುತ್ತದೆ. ನನ್ನನ್ನು ನೀವು ಶಾಸಕನನ್ನಾಗಿ ಆರಿಸಿದರೆ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ತಂದು ಅಭಿವೃದ್ಧಿಗೊಳಿಸುತ್ತೇನೆ ಎಂದು ಭರವಸೆ ನೀಡಿದರು.
ಮಾ.೫ ರಂದು ನರಸಾಪುರದಲ್ಲಿ ನಡೆಯುವ ಬೃಹತ್ ಸಮಾವೇಶದಲ್ಲಿ ಉಸ್ತುವಾರಿ ಸಚಿವ ಮುನಿರತ್ನ, ಸಂಸದ ಮುನಿಸ್ವಾಮಿ ಭಾಗವಹಿಸಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಮೂಲಕ ಸಮಾವೇಶ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಬಿಜೆಪಿ ತಾಲ್ಲೂಕು ಅಧ್ಯಕ್ಷ ರಾಮಚಂದ್ರೇಗೌಡ, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್ ವೆಂಕಟೇಶ್, ಮುಖಂಡರಾದ ಬೆಗ್ಲಿ ಸೂರ್ಯ ಪ್ರಕಾಶ್, ಬಂಕ್ ಮಂಜುನಾಥ್, ಅರುಣ್ ಪ್ರಸಾದ್ , ಕುರುಗಲ್ ಮಲ್ಲೇಶ್, ಮಾಜಿ ನಗರಸಭಾ ಸದಸ್ಯ ಮುಖೇಶ್ ಇದ್ದರು.