ನರಳಿ ನರಳಿ ಪ್ರಾಣ ಬಿಟ್ಟ ಕೋವಿಡ್ ಸೋಂಕಿತ: ಆತಂಕದಿಂದ ಹೃದಯಾಘಾತದಿಂದ ಮುಖ್ಯ ಪೇದೆ ಸಾವು

ಕಲಬುರಗಿ:ಏ.14:ಈ ಮೊದಲು ಕೋವಿಡ್ ಮಹಾಮಾರಿಗೆ ನಗರದ ವೃದ್ಧ ಇಡೀ ದೇಶದಲ್ಲಿಯೇ ಮೊದಲ ಸಾವನ್ನಪ್ಪುವ ಮೂಲಕ ತೀವ್ರ ಆತಂಕ ಹುಟ್ಟಿಸಿದ್ದು, ಈಗ ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬ ಮೃತಪಟ್ಟಿರುವುದನ್ನು ನೋಡಿ ಆತಂಕಕ್ಕೆ ಒಳಗಾದ ಮುಖ್ಯ ಪೇದೆಯು ಹೃದಯಾಘಾತದಿಂದ ಮೃತಪಟ್ಟಿದ್ದಾನೆ.
ಕೋವಿಡ್ ಸೋಂಕಿತ ವ್ಯಕ್ತಿ ನರಳಿ, ನರಳಿ ಕೊನೆಯುಸಿರೆಳೆದಿದ್ದನ್ನು ಕಂಡು ಪಕ್ಕದ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮುಖ್ಯ ಪೇದೆ ಆನಂದಪ್ರಸಾದ್ ಎಂಬಾತನೇ ನಗರದ ಜಿಮ್ಸ್ ಆಸ್ಪತ್ರೆಯ ಕೋವಿಡ್ ವಾರ್ಡ್‍ನಲ್ಲಿ ಮೃತಪಟ್ಟ ದುರ್ದೈವಿ.
ಆನಂದಪ್ರಸಾದ್ ಅವರು ನ್ಯೂಮೋನಿಯಾದಿಂದ ಬಳಲುತ್ತಿದ್ದು, ಅವರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೋವಿಡ್ ವಾರ್ಡ್‍ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಅದೇ ವಆರ್ಡ್‍ನಲ್ಲಿ ಕಳೆದ ಎರಡು ದಿನಗಳ ಹಿಂದೆ ಅವರ ಪಕ್ಕದ ಹಾಸಿಗೆಯಲ್ಲಿದ್ದ ಕೊರೋನಾ ಸೋಂಕಿತ ನರಳಿ, ನರಳಿ ಮೃತಪಟ್ಟಿದ್ದ. ಅದನ್ನು ಕಂಡ ಆನಂದಪ್ರಸಾದ್ ಅವರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಕುಟುಂಬಸ್ಥರಿಗೆ ಕರೆ ಮಾಡಿ, ನನಗೂ ಇಂತಹ ಸಾವು ಬರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.
ಪಕ್ಕದ ಹಾಸಿಗೆಯಲ್ಲಿದ್ದ ವ್ಯಕ್ತಿ ಮೃತಪಟ್ಟ ಬಳಿಕ ನೊಂದಿದ್ದ ಆನಂದ್ ಪ್ರಸಾದ್ ಅವರು ಕೋವಿಡ್ ವರದಿ ನೆಗೆಟಿವ್ ಬಂದರೂ ಸಹ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.