ನಯಾಪೈಸೆ ಕೊಟ್ಟಿದ್ದಾರಾ ದೇವರ ಮೇಲೆ ಅಣೆ ಮಾಡಿ ಹೇಳಲಿ : ರಾಜೀವ್ ಸೇರಿ ಹಲವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಕಿಡಿ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.28:- 2023-24 ರ ಬಜೆಟ್‍ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ.ಗಳನ್ನು ಕೊಡುತ್ತೇವೆ ಎಂದಿದ್ದರು. ಈ ವರ್ಷ ಒಂದೇ ಒಂದು ಪೈಸೆ ಬಂದಿಲ್ಲ ಎಂದರು. ಈ ಬಗ್ಗೆ ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ ಸತ್ಯ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಬಿಜೆಪಿಗೆ ಸವಾಲು ಹಾಕಿ ಕಿಡಿಕಾರಿದರು.
ಮೈಸೂರಿನ ವಿದ್ಯಾರಣ್ಯಪುರಂನ ಭೂತಾಳೆ ಮೈದಾನದಲ್ಲಿ ಬಿಜೆಪಿಯ ಮುಡಾ ಮಾಜಿ ಅಧ್ಯಕ್ಷ ಎಚ್.ವಿ.ರಾಜೀವ್, ಜೆಡಿಎಸ್‍ನ ಕೆ.ವಿ.ಮಲ್ಲೇಶ್ ನೇತೃತ್ವದಲ್ಲಿ ಹಲವು ಮಂದಿಯನ್ನು ಪಕ್ಷಕ್ಕೆ ಸ್ವಾಗತಿಸಿಕೊಂಡು ಅವರು ಮಾತನಾಡಿದರು. ಕರ್ನಾಟಕದ ಜನರನ್ನು ಅತ್ಯಂತ ಅಲಕ್ಷ್ಯದಿಂದ ಕಾಣುತ್ತಿದ್ದಾರೆ. 18171ಕೋಟಿ ರೂ.ಗಳ ಪರಿಹಾರವನ್ನು ಕೊಡಲು ಮನವಿ ಮಾಡಿ 5 ತಿಂಗಳಾಗಿದ್ದರೂ ಒಂದು ರೂಪಾಯಿ ನೀಡಿಲ್ಲ. ರೈತರು ಕಷ್ಟದಲ್ಲಿದ್ದರೂ ಈವರೆಗೆ ಒಮದು ರೂಪಾಯಿ ಬಿಡಿಗಡೆ ಮಾಡಿಲ್ಲ. ಇದು ಸತ್ಯ ಎಂದರು. ಕರ್ನಾಟಕದ ಜನರನ್ನು ಅತ್ಯಂತ ಅಲಕ್ಷ್ಯದಿಂದ ಕಾಣುತ್ತಿದ್ದು, ಮಲತಾಯಿ ಧೋರಣೆ ತೋರುತ್ತಿದ್ದಾರೆ ಎಂದರು.
ನ್ಯಾಯಾಲಯಕ್ಕೆ ಮೊರೆ: 15ನೇ ಹಣಕಾಸಿನ ಆಯೋಗದಲ್ಲಿ ನಮಗೆ 5495 ಕೋಟಿ ನೀಡಿದ್ದರೂ, ಕೆರೆಗಳ ಅಭಿವೃದ್ಧಿ ಹಾಗೂ ಪೆರಿಫೆರಲ್ ರಿಂಗ್ ರಸ್ತೆಗೆ ಬಿಡುಗಡೆಯಾದ ಮೊತ್ತ ಸೇರಿ ಒಟ್ಟು 11495 ಕೋಟಿ ರೂ.ಗಳ ಪೈಕಿ ಒಂದು ರೂ ನೀಡದೆ ಸುಳ್ಳು ಹೇಳುತ್ತಿದ್ದಾರೆ. ಅವರ ತಾಳಕ್ಕೆ ಕುಣಿಯುವ ಬಿಜೆಪಿ ಅವರು 7 ಕೋಟಿ ಕನ್ನಡಿಗರಿಗೆ ಮಾಡುತ್ತಿರುವ ದ್ರೋಹ ಎಂದರು. ಅದಕ್ಕಾಗಿಯೇ ನಾವು ಸರ್ವೊಚ್ಛ ನ್ಯಾಯಾಲಯಕ್ಕೆ ಹೋಗಿದ್ದೇವೆ. ಕಾನೂನಿನಲ್ಲಿ ಒಂದು ತಿಂಗಳೊಳಗೆ ಪರಿಹಾರ ಕೊಡಬೇಕೆಂದಿದ್ದರೂ ನಮಗೆ ಪರಿಹಾರ ನೀಡಿಲ್ಲ ಎಂದರು.
ಬಿಜೆಪಿಗೆ ಮತ ಹಾಕಬೇಕೆ: ಕರ್ನಾಟಕದಲ್ಲಿ ಭಯದಿಂದ ಬಿಜೆಪಿ-ಜೆಡಿಎಸ್ ಒಂದಾಗಿದೆ. ಇವರನ್ನು ಜನತೆ ಸೋಲಿಸಬೇಕು. ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿರುವ ಬಿಜೆಪಿಗೆ ಮತ ಹಾಕಬೇಕೆ ಎಂದು ಜನತೆ ಯೋಚಿಸಬೇಕು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಬಹಿರಂಗ ಚರ್ಚೆಗೆ ಕರೆಯುತ್ತಿದ್ದೇನೆ. ದಾಖಲೆಗಳ ಸಮೇತ ಜನರೆದುರು, ಕನ್ನಡಿಗರ ಎದುರು ಚರ್ಚೆಗೆ ಬನ್ನಿ. ನೀವು ಕರೆದ ಜಾಗಕ್ಕೆ ನಾನು ಬರ್ತೀನಿ. ನೀವು ರೆಡಿನಾ? ಬಿಜೆಪಿ ಶೂದ್ರರ, ಮಹಿಳೆಯರ ದಲಿತರ, ದುಡಿಯುವ ವರ್ಗಗಳ, ಶ್ರಮಿಕರ, ಸಂವಿಧಾನ ಮತ್ತು ಸಾಮಾಜಿಕ ನ್ಯಾಯದ ಶತ್ರುಗಳಾಗಿದ್ದಾರೆ. ನುಡಿದಂತೆ ನಡೆದು ಜನರ ಬದುಕಿಗೆ ಸ್ಪಂದಿಸುವುದು ನಮ್ಮ ಕಾಂಗ್ರೆಸ್ ಸಂಸ್ಕಾರವಾದರೆ, ಜನರನ್ನು ಕೇವಲ ಭಾವನಾತ್ಮಕವಾಗಿ ಕೆರಳಿಸಿ ಅವರ ಬದುಕಿಗೆ ವಂಚಿಸುವುದು ಬಿಜೆಪಿ ಸಂಸ್ಕಾರವಾಗಿದೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ರಾಜೀವ್ ಮತ್ತು ಸೇರ್ಪಡೆಯಿಂದಾಗಿ ಶಕ್ತಿ ಬಂದಂತಾಗಿದೆ ಲೋಕಸಭಾ ಚುನಾವಣೆಯಲ್ಲಿ ರಾಜೀವ್ ಅವರು ಸೇರಿರುವುದರಿಂದ ಕೃಷ್ಣರಾಜ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಲಕ್ಷ್ಮಣ್ ಗೆಲ್ಲುವ ವಿಶ್ವಾಸವಿದೆ ಎಂದರು. ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಭಿನ್ನಾಭಿಪ್ರಾಯಗಳನ್ನು ಮರೆತು ಕಾಂಗ್ರೆಸ್ ಪಕ್ಷ ಗೆಲ್ಲಿಸಬೇಕೆಂಬ ಗುರಿಯೊಂದಿಗೆ ಕೆಲಸ ಮಾಡಬೇಕು. ಈ ಕ್ಷೇತ್ರದಲ್ಲಿ ಬಡವರಿದ್ದಾರೆ. ಯಾವುದೇ ಜಾತಿ, ಧರ್ಮ ಅಥವಾ ಪಕ್ಷದ ಆಧಾರದ ಮೇಲೆ ಕಾಂಗ್ರೆಸ್ ಬಡವರನ್ನು ಕಡೆಗಣಿಸಿಲ್ಲ ಎಂದರು.
ನಾವು ಮಾಡಿರುವ ಕೆಲಸವನ್ನು ಜನರಿಗೆ ಮುಟ್ಟಿಸುವ ಕೆಲಸ ಮಾಡಬೇಕು. ಸುಳ್ಳು ಹೇಳಬೇಡಿ ಎಂದು ಹೇಳಿದ್ದೇನೆ. ಹಿಂದಿನ ಬಾರಿ ನಮ್ಮ ಸರ್ಕಾರ 168 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು. ನುಡಿದಂತೆ ನಡೆದಿದ್ದೇವೆ ಎಂದು ಹೆಮ್ಮೆಯಿಂದ ಹೇಳುತ್ತೇವೆ ಎಂದರು. ನಾವು ಹಣ ಕೇಳುತ್ತಿರುವುದು ಗ್ಯಾರಂಟಿಗಳಿಗೆ ಎಂದು ನಿರ್ಮಲಾ ಸೀತಾರಾಮನ್ ಹೇಳುತ್ತಾರೆ. ಈ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡಲು ಬಿಜೆಪಿಯವರಿಗೆ ನಾವು ಆಹ್ವಾನ ನೀಡಿದ್ದೇವೆ ಎಂದರು. ಗ್ಯಾರಂಟಿಗಳಿಗೆ ಒಂದು ಪೈಸೆಯನ್ನೂ ಕೊಡಬೇಡಿ. ಮುಂದಿನ ವರ್ಷದಲ್ಲಿ ಗ್ಯಾರಂಟಿ ಯೋಜನೆಗಳಿಗೆ 52009 ಕೋಟಿ ರೂ.ಗಳನ್ನು ಬಜೆಟ್ ನಲ್ಲಿ ಮೀಸಲಿರಿಸಲಾಗಿದೆ ಎಂದರು.
ಪಶು ಸಂಗೋಪನ ಸಚಿವ ಕೆ.ವೆಂಕಟೇಶ್, ಶಾಸಕರಾದ ಅನಿಲ್ ಚಿಕ್ಕಮಾದು, ಕೆ.ಹರೀಶ್ ಗೌಡ, ಎಚ್.ಎಂ.ಗಣೇಶ್ ಪ್ರಸಾದ್, ತನ್ವೀರ್ ಸೇಟ್, ಮುಡಾ ಅಧ್ಯಕ್ಷ ಮರೀಗೌಡ, ಮಾಜಿ ಅಧ್ಯಕ್ಷ ಸಿ,ಬಸವೇಗೌಡ, ವಸ್ತು ಪ್ರದರ್ಶನ ಪ್ರಾಕಾರದ ಅಧ್ಯಕ್ಷ ಅಯೂಬ್ ಖಾನ್, ಮಾಜಿ ಶಾಸಕರಾದ ಡಾ.ಯತೀಂದ್ರ ಸಿದ್ದರಾಮಯ್ಯ, ಎಂ.ಕೆ.ಸೋಮಶೇರ್, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂ.ಲಕ್ಷ್ಮಣ್ ಕಾರ್ಯಕ್ರಮದಲ್ಲಿ ಹಾಜರಿದ್ದರು.