ನಮ್ಮ ಸಂಸ್ಕೃತಿ ಈ ದೇಶದ ಆಸ್ತಿ: ಡಿಸಿಎಂ ಡಿಕೆಶಿ

ಸಂಜೆವಾಣಿ ನ್ಯೂಸ್
ಮೈಸೂರು: ಫೆ.11:- ನಮ್ಮ ಸಂಸ್ಕೃತಿ ಈ ದೇಶದ ಆಸ್ತಿ. ಸೈನಿಕ, ಶಿಕ್ಷಕ, ರೈತ, ಮಠಾಧೀಶರು ಈ ದೇಶದ ಆಧಾರ ಸ್ಥಂಭ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ್ಣಿಸಿದರು.
ಸುತ್ತೂರು ಶ್ರೀಕ್ಷೇತ್ರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಕೃಷಿ ಮೇಳ ಹಾಗೂ ವಸ್ತು ಪ್ರದರ್ಶನದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಧರ್ಮ ಎಷ್ಟಾದರೂ ದೈವವೊಂದೇ. ಜಾತಿ, ಧರ್ಮವನ್ನು ಮಠದಲ್ಲಿ ಲೆಕ್ಕ ಹಾಕುವುದಿಲ್ಲ. ಅದು ನಮ್ಮ ಮಠಗಳ ಸಂಸ್ಕೃತಿ. ಆ ಸಂಸ್ಕೃತಿಯೇ ಈ ದೇಶದ ಆಸ್ತಿ ಎಂದರು.ಸರ್ಕಾರ ಮಾಡಲಿಕ್ಕೆ ಸಾಧ್ಯವಿಲ್ಲದ ಕೆಲಸವನ್ನು ಮಠ ಮಾನ್ಯಗಳು ಮಾಡುತ್ತಿವೆ. ಆ ಕಾರಣಕ್ಕಾಗಿಯೇ ಮನೆ ಮಠ ಹುಷಾರು ಎಂಬ ಹಿರಿಯ ಮಾತು ಸತ್ಯ ಎಂದರು.
ವಿದ್ಯೆ ಇಲ್ಲದಿದ್ದರೆ ನಾವು ಮನುಷ್ಯರಾಗಲು ಸಾಧ್ಯವಿಲ್ಲ. ಮಾನವೀಯ ಸೇವೆಗಳು ಮಠದಿಂದ ನಡೆದಿವೆ. ಶಕ್ತಿ, ಭಕ್ತಿಯ ಕೇಂದ್ರವಾಗಿ ಇಂದು ಕಾರ್ಯ ನಿರ್ವಹಿಸುತ್ತಿವೆ ಎಂದ ಅವರು, ಒಳ್ಳೆಯ ನೀತಿ, ನಡತೆ, ಸಂಸ್ಕಾರವನ್ನು ನಾವು ಕಲಿತು , ಇಲ್ಲಿ ಬಿಟ್ಟು ಹೋಗಬೇಕಿದೆ ಎಂದು ಹೇಳಿದರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ಜಾತ್ರೆ ಅನುಭವದ ಮೂಟೆ ಕೊಡಲಿದೆ. ಬಸವಣ್ಣನವರ ಸಂದೇಶವನ್ನು ಸುತ್ತೂರು ಮಠ ಅಕ್ಷರಶಃ ಪಾಲಿಸುತ್ತಿದ್ದು, ಪೆÇ್ರೀತ್ಸಾಹಕ್ಕೆ ಮತ್ತೊಂದು ಹೆಸರೇ ಸುತ್ತೂರು ಮಠ ಎಂದರು. ಇಂತಹ ಮಠಗಳು ಹಾಗೂ ಮಠಾಧೀಶರಿಂದ ನಮ್ಮ ಸಂಸ್ಕೃತಿ ಉಳಿದಿದೆ ಎಂದ ಅವರು, ಮಠಾಧೀಶರ ಮಾರ್ಗದರ್ಶನ ಇಂದಿನ ಸಮಾಜಕ್ಕೆ ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶ್ರೀ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಸುತ್ತೂರು ಶ್ರೀಕ್ಷೇತ್ರದ ಪೀಠಾಧಿಪತಿ ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಸಾಧ್ವಿ ಉನ್ಮೇಶ ಭಾರತೀ ವಹಿಸಿದ್ದರು. ಶಾಸಕರಾದ ಗಣೇಶ್, ದರ್ಶನ ದ್ರುವನಾರಾಯಣ್, ನಯನ ಮೋಟಮ್ಮ, ಮುಡಾ ಮಾಜಿ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್, ಮಹೇಶ್, ಮೈಮುಲ್ ಅಧ್ಯಕ್ಷ ಪ್ರಸನ್ನ ವೇದಿಕೆಯಲ್ಲಿ ಉಪಸ್ಥಿತರಿದ್ದರು.