
ಸಂಜೆವಾಣಿ ವಾರ್ತೆ
ಹಿರಿಯೂರು.ನ.೨೧ : ನಮ್ಮೂರಿನ ಶಾಲೆ ನಮ್ಮ ಹೆಮ್ಮೆ ಅನ್ನುವ ಭಾವನೆ ಹಿರಿಯೂರಿನ ಗುಳಗೊಂಡನಹಳ್ಳಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದಿದಂತಹ ವಿದ್ಯಾರ್ಥಿಗಳಿಗೆ ಮತ್ತು ಓದಿಸುತ್ತಿರುವ ಪೋಷಕರಿಗೆ ಹಾಗೂ ಗ್ರಾಮದ ಪ್ರತಿಯೊಬ್ಬರಿಗೂ ಬಂದರೆ ಊರಿನ ಮಕ್ಕಳ ಶಿಕ್ಷಣ – ರಾಜ್ಯ – ದೇಶ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಸಂಪನ್ಮೂಲ ಮಾರ್ಗದರ್ಶಿ ಶಿಕ್ಷಕರಾದ ರಾಘವೇಂದ್ರಾಚಾರಿ ವಿಶೇಷ ಪೋಷಕರ ಮತ್ತು ತಾಯಂದಿರ ಸಭೆ ಯಲ್ಲಿ ಮನವರಿಕೆ ಮಾಡಿದರು.ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಹಿರಿಯೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ.ಎಂ ತಿಪ್ಪೇಸ್ವಾಮಿ ಅವರ ಆಶಯದಂತೆ ಗ್ರಾಮದ ಪ್ರತಿಯೊಬ್ಬರು ಕೂಡ ಆ ಊರಿನ ಶಾಲೆಯ ಏಳಿಗೆಗೆ ಶ್ರಮಿಸಿದಲ್ಲಿ ಸರ್ಕಾರಿ ಶಾಲೆಗಳು ಕೂಡ ಇನ್ನೂ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ಶೈಕ್ಷಣಿಕ ಪ್ರಗತಿಗೆ ಪೂರಕವಾಗುತ್ತದೆ ಎಂದು ಪೋಷಕರ ಸಭೆಯಲ್ಲಿ ತಿಳಿಸಿದರು. ಪೋಷಕರ ಸ್ಪಂದನೆ ಕೂಡ ಉತ್ತಮ ರೀತಿಯಲ್ಲಿ ಇತ್ತು. ನಮ್ಮ ಗ್ರಾಮದ ಶಾಲೆಗೆ ಏನೇನು ಅಗತ್ಯವಿದೆಯೋ ಅದನ್ನು ತಿಳಿಸಿದಲ್ಲಿ ನಾವು ಹಂತ ಹಂತವಾಗಿ ಅದನ್ನು ಈಡೇರಿಸುತ್ತೇವೆಂದು ಪೋಷಕರು, ಎಸ್.ಡಿ.ಎಂ.ಸಿ ಯವರು, ಗ್ರಾಮಪಂಚಾಯಿತಿ ಯವರು,ಹಳೇ ವಿದ್ಯಾರ್ಥಿಗಳು ಭರವಸೆ ನೀಡಿದರು.ಗುಳಗೊಂಡನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀಮತಿ ಪುಟ್ಟಮ್ಮನವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಈ ಹಿಂದೆ ಈ ಶಾಲೆಗೆ ದೇಣಿಗೆಯನ್ನು ನೀಡಿ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಪ್ರತಿಯೊಬ್ಬರನ್ನು ನೆನಪಿಸಿಕೊಂಡು ಇನ್ನೂ ಆಗಬೇಕಾದ ಕಾರ್ಯಗಳನ್ನು ಪೋಷಕರ ಮುಂದಿಟ್ಟರು. ಹಳೇ ವಿದ್ಯಾರ್ಥಿಗಳ ಮತ್ತು ತಾಯಂದಿರ ಸಮಿತಿ ನೇಮಿಸಲಾಯಿತು. ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಕೊಟ್ಟರು.ವಿಶೇಷ ಸಭೆಯಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ತೊಟ್ಲಪ್ಪ, ಉಪಾಧ್ಯಕ್ಷರಾದ ಮಂಜುಳಮ್ಮ, ಗ್ರಾಮಪಂಚಾಯ್ತಿ ಸದಸ್ಯರಾದ ಹನುಮಂತಪ್ಪ,ಮಾಜಿ ಗ್ರಾ. ಪಂ.ಸದಸ್ಯರಾದ ತಿಮ್ಮಕ್ಕನವರು ಭಾಗವಹಿಸಿದ್ದರು ಶಿಕ್ಷಕರಾದ ಲೋಕೇಶ್ ಸ್ವಾಗತಿಸಿದರು, ಸುಜಾತ ಕಾರ್ಯಕ್ರಮ ನಿರೂಪಿಸಿದರು.