ನಮ್ಮ ಮನೆಯಿಂದಲೇ ನಮ್ಮನ್ನು ಹೊರ ಹಾಕಲಾಗಿದೆ

ಬೆಂಗಳೂರು,ಏ.೧೬:ನಮ್ಮ ಮನೆಯಿಂದಲೇ ನಮ್ಮನ್ನು ಹೊರ ಹಾಕಲಾಗುತ್ತಿದೆ. ಮೂಲ ಬಿಜೆಪಿಗರನ್ನು ಹೊರ ಕಳುಹಿಸುವ ಕೆಲಸ ಬಿಜೆಪಿಯಲ್ಲಿ ಕೆಲವರು ನಡೆಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಶಿರಸಿಯಲ್ಲಿಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಸ್ಬಹಿತಕ್ಕಾಗಿ ನನಗೆ ಟಿಕೆಟ್ ಕೈತಪ್ಪಿಸಿದ್ದಾರೆ. ಭಾರವಾದ ಮನಸ್ಸಿನಿಂದ ಬಿಜೆಪಿಯನ್ನು ಬಿಡುತ್ತಿದ್ದೇನೆ ಎಂದರು.
ನಾನು ಭ್ರಷ್ಟಾಚಾರ ಮಾಡಿಲ್ಲ, ಸಿಡಿ ಕೇಸ್‌ನಲ್ಲಿಲ್ಲ. ರೌಡಿಶೀಟರೂ ಅಲ್ಲ ಹೀಗಿರುವಾಗ ನನಗೆ ಟಿಕೆಟ್ ತಪ್ಪಿಸಿದ್ದು ಏಕೆ? ನನ್ನ ಮೈನಸ್ ಏನು ಎಂಬುದನ್ನು ಬಿಜೆಪಿ ನಾಯಕರು ಹೇಳಬೇಕು ಎಂದು ಒತ್ತಾಯಿಸಿದರು.
ಮೂಲ ಬಿಜೆಪಿಗರನ್ನು ಹೊರ ಹಾಕಲಾಗುತ್ತಿದೆ. ನಮ್ಮ ಮನೆಯಿಂದಲೇ ನಮ್ಮನ್ನು ಹೊರಗೆ ಕಳುಹಿಸಲಾಗಿದೆ. ಇದು ನೋವಿನ ಸಂಗತಿ ಎಂದರು. ನಿಮ್ಮ ಈ ಪರಿಸ್ಥಿತಿಗೆ ಯಾರು ಕಾರಣ ಎಂಬ ಪ್ರಶ್ನೆಗೆ ನಾನು ಯಾರ ಹೆಸರನ್ನು ಹೇಳಲ್ಲ. ಜನರಿಗೆ ಯಾರು ಈ ಕೆಲಸ ಮಾಡಿದ್ದಾರೆ ಎಂಬುದು ಗೊತ್ತಿದೆ. ಸ್ವಹಿತಕ್ಕಾಗಿ ಕೆಲವರು ತಮ್ಮ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ ಎಂದರು.
ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ನನ್ನದೂ ಪಾತ್ರವಿದೆ. ಬಿಜೆಪಿಯಲ್ಲಿ ಚುನಾವಣೆಗೆ ನಿಲ್ಲಲು ಅಭ್ಯರ್ಥಿಗಳು ಇಲ್ಲದಿದ್ದಾಗಲೂ ಅಭ್ಯರ್ಥಿಗಳನ್ನು ಹುಡುಕಿ ಚುನಾವಣೆಗೆ ನಿಲ್ಲಿಸಿದ್ದೇವೆ. ನಾನು ಅಧಿಕಾರಕ್ಕಾಗಿ ರಾಜಕಾರಣಕ್ಕೆ ಬಂದವನಲ್ಲ ಎಂದರು.
ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೀರಾ ಎಂಬ ಪ್ರಶ್ನೆಗೆ ಇನ್ನೂ ಯಾವ ತೀರ್ಮಾನವನ್ನೂ ಮಾಡಿಲ್ಲ. ಹುಬ್ಬಳ್ಳಿಗೆ ಹೋದ ನಂತರ ನನ್ನ ತೀರ್ಮಾನ ಪ್ರಕಟಿಸುತ್ತೇನೆ. ಕಾಂಗ್ರೆಸ್ ನಾಯಕರ್‍ಯಾರು ನನ್ನನ್ನು ಸಂಪರ್ಕಿಸಿಲ್ಲ ಎಂದರು.