ನಮ್ಮ ಮತ ನಮ್ಮ ಹಕ್ಕು…

ವಿಜಯಪುರ:ಮೇ.6:ಭಾರತ ದೇಶವು ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ ಹೊಂದಿದ ದೇಶವಾಗಿದೆ. ಪ್ರಜಾಪ್ರಭುತ್ವದ ಯಶಸ್ವಿಗೆ ಮತದಾನ ತುಂಬಾ ಅವಶ್ಯವಾಗಿದೆ. ರೋಗಿಯ ಜೀವ ಉಳಿಸಲು ರಕ್ತದಾನ, ಹಸಿವು ನೀಗಿಸಲು ಅನ್ನದಾನ, ಶಕ್ತಿಯುತ ಸಮಾಜ ನಿರ್ಮಾಣಕ್ಕೆ ವಿದ್ಯಾದಾನ ಎಷ್ಟು ಮುಖ್ಯವೋ ದೇಶದ ಉಜ್ವಲ ಭವಿಷ್ಯಕ್ಕೆ ಮತದಾನ ಕೂಡ ಅಷ್ಟೇ ಮುಖ್ಯ. ಪ್ರಜಾಪ್ರಭುತ್ವದ ರಾಯಭಾರಿಯಾದ ಚುನಾವಣೆಯಲ್ಲಿ ,18 ವರ್ಷ ತುಂಬಿದ ಅರ್ಹ ಮತದಾರರೆಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. ನನ್ನೊಬ್ಬನ ಮತದಿಂದ ಏನಾಗುತ್ತದೆ ಎಂಬ ಅಸಡ್ಡೆ ಭಾವ ಯಾರಲ್ಲೂ ಬರಕೂಡದು. ದೇಶದ ಭವಿಷ್ಯ ನಿರ್ಮಾಣವಾಗುವುದೇ ಪ್ರತಿಯೊಬ್ಬರ ಮತದಾನದಿಂದ ಮಾತ್ರ. ಜವಾಬ್ದಾರಿಯುತ ಮತದಾರರು ಎಂದೂ ಮತದಾನದಿಂದ ನುಣಚಿಕೊಳ್ಳುವಂತಿಲ್ಲ. ನಮಗೆ ಬೇಕಾದ ಸರ್ಕಾರವನ್ನು ಮತದಾನದ ಮೂಲಕ ರಚಿಸಿಕೊಳ್ಳುವ ಅವಕಾಶವನ್ನು ಸಂವಿಧಾನ ಕಲ್ಪಿಸಿಕೊಟ್ಟಿದೆ.ಆಸೆ ಆಮಿಷಗಳಿಗೆ ಪ್ರಜೆಗಳು ಮತದಾನದ ಹಕ್ಕನ್ನು ಮಾರಿಕೊಂಡರೆ ಆಳುವ ನಾಯಕರು ಭ್ರಷ್ಟಾಚಾರಿಗಳಾಗುತ್ತಾರೆ. ಹೀಗಾದರೆ ಭವ್ಯ ಭಾರತದ ಕನಸು ನನಸಾಗದು.’
ಕಲ್ಯಾಣ ರಾಜ್ಯ’ವಾಗಬೇಕಾದರೆ ಹಂಸಕ್ಷಿರ ನ್ಯಾಯದಂತೆ ನಾಗರಿಕರಾದ ನಾವೆಲ್ಲರೂ ಮತದಾನದ ಮೂಲಕ ಯೋಗ್ಯ ಪ್ರಜಾಪ್ರತಿನಿಧಿಗೆ ಮತ ನೀಡಬೇಕು. ಮತದಾನವು ಪ್ರಜಾಪ್ರಭುತ್ವದ ದೊಡ್ಡ ಹಬ್ಬ. ಯಾವುದೇ ಲೋಭನೆಗೆ ಒಳಗಾಗದೆ ನಿರ್ಭಯದಿಂದ ಪ್ರಾಮಾಣಿಕತೆ ಹಾಗೂ ಉತ್ಸಾಹದಿಂದ ಮತ ಚಲಾಯಿಸುವುದರ ಮೂಲಕ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸೋಣ.ಮತದ ಮೌಲ್ಯ ಅರಿತು ಅಮೂಲ್ಯವಾದ ಹಕ್ಕನ್ನು ವಿಶ್ವಾಸದಿಂದ ಸುಗಮವಾಗಿ ನೈತಿಕತೆಯಿಂದ ಚಲಾಯಿಸಬೇಕು. ಯಾವೊಬ್ಬ ಮತದಾರನು ಹೊರಗುಳಿಯದೆ ಪ್ರತಿಯೊಬ್ಬರೂ ಮತ ಚಲಾಯಿಸಿ ನಮ್ಮ ಜವಾಬ್ದಾರಿ ನಿಭಾಯಿಸಬೇಕು. ಇದೇ ತಿಂಗಳು ಏಳರಂದು ಕರ್ನಾಟಕದಲ್ಲಿ ಎರಡನೇ ಹಂತದ ಮತದಾನ ಜರುಗಲಿದ್ದು 18 ವರ್ಷ ತುಂಬಿದ ಅರ್ಹ ಮತದಾರರೆಲ್ಲರೂ ಕುಂಟು ನೆಪ ಹೇಳದೆ ಶೇಕಡ ನೂರರಷ್ಟು ಮತ ಚಲಾಯಿಸಿ ತಮ್ಮ ಕರ್ತವ್ಯ ಮೆರೆಯಬೇಕು.
ಚುನಾವಣೆ ಆಯೋಗ ಎಷ್ಟೇ ಜಾಗೃತಿ ಮೂಡಿಸಿದರೂ ಕೆಲ ಮತದಾರರು ಮತ ಚಲಾಯಿಸದೆ ಇರುವುದು ದುರಂತ. ದೇಶದ ಘನತೆ ಸುಭದ್ರ ಸರ್ಕಾರ ರಚಿಸುವ ಭಾಗವಾದ ನಾವು ಯೋಗ್ಯ ವರನಿಗೆ ಮಗಳನ್ನು ಕೊಡುವಂತೆ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಪ್ರಜಾಪ್ರಭುತ್ವವನ್ನು ಯಶಸ್ವಿಗೊಳಿಸೋಣ. ಸಚ್ಚಾರಿತ್ರ್ಯವುಳ್ಳ ಸಮರ್ಥ ಜನನಾಯಕನ ಆಯ್ಕೆಯೇ ನಮ್ಮ ಕರ್ತವ್ಯ. ಮತದಾನದ ಕರ್ತವ್ಯ ನಿಭಾಯಿಸಿದಾಗ ಮಾತ್ರ ಮುಂದೆ ನಮಗೆ ಪೂರಕವಾಗುವ ಹಕ್ಕನ್ನು ಕೇಳಬಹುದು.ಮತ ಚಲಾಯಿಸದೆ ಇದ್ದಲ್ಲಿ ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯುವಲ್ಲಿ ಮತ್ತು ನಮ್ಮ ಬೇಡಿಕೆಗಳನ್ನು ಅವರ ಮುಂದೆ ಇಡುವ ಅರ್ಹತೆ ನಮಗಿರುವುದಿಲ್ಲ.ಕಾರಣ ನಾವು ಯಾವುದೇ ಆಸೆಗೆ ಒಳಗಾಗದೆ ಮತ ಹಾಕಿ ದೇಶದ ಅಭಿವೃದ್ಧಿಯಲ್ಲಿ ಪಾಲುದಾರರಾಗೋಣ. ಸ್ವಾರ್ಥ ರಹಿತ ಉತ್ತಮ ನಾಯಕರಿಗೆ ಒತ್ತು ನೀಡೋಣ.ರಾಷ್ಟ್ರ ರಕ್ಷಣೆ, ಸದೃಢ ಭಾರತದ ಸಮಗ್ರತೆಯ ಅಭಿವೃದ್ಧಿಗಾಗಿ ನಮ್ಮ ಮತ ಪೂರಕವಾಗಿರಲಿ.

ಬಸವರಾಜ ಎಸ್ ಕೌಲಗಿ
ಸಂಸ್ಥಾಪಕ ಅಧ್ಯಕ್ಷರು
ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆ ವಿಜಯಪುರ