ನಮ್ಮ ಭಾಗದಲ್ಲಿ ಹೆಚ್ಚು ಮತದಾನ ಆಗಬೇಕು: ಶಿಲ್ಪಾ ಎಂ.

ಬೀದರ, ಏ.22: ನಮ್ಮ ಭಾಗದಲ್ಲಿ ಕಡಿಮೆ ಮತದಾನವಾದ ವಿಧಾನ ಸಭಾ ಕ್ಷೇತ್ರಗಳಲ್ಲಿ ಹೆಚ್ಚಿನ ಮತದಾನ ಆಗಬೇಕೆಂಬ ಉದ್ದೇಶದಿಂದ ಜಿಲ್ಲೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಸ್ವೀಫ್ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶಿಲ್ಪಾ ಎಂ. ಹೇಳಿದರು.

ಅವರು ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಸ್ವೀಫ್ ಸಮಿತಿ ಹಾಗೂ ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ವಿಕಲಚೇತನರ ತ್ರಿಚಕ್ರವಾಹನಗಳ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಚುನಾವಣೆಗಳು ಐದು ವರ್ಷಕ್ಕೊಮ್ಮೆ ಬರುತ್ತದೆ ಈ ಅವಕಾಶ ಸದುಪಯೋಗ ಪಡೆದುಕೊಳ್ಳುವ ಮೂಲಕ ಎಲ್ಲರೂ ಮತದಾನ ಮಾಡಬೇಕು ಹಾಗೂ ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಮತದಾನ ಮಾಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಬೇಕೆಂದರು.

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಮತದಾನ ಕೇಂದ್ರಗಳಲ್ಲಿ ಅಂಗವಿಕಲರಿಗೆ, 80 ವರ್ಷ ಮೇಲ್ಪಟ್ಟ ಹಿರಿಯರು ಹಾಗೂ ಮತದಾನ ಕೇಂದ್ರಕ್ಕೆ ಹೋಗಿ ಮತದಾನ ಮಾಡಲು ಆಗದವರು ಮತದಾನ ಕೇಂದ್ರಕ್ಕೆ ಹೋಗಿ ಮತ ಹಾಕಲು ಆಟೋ ತ್ರಿಚಕ್ರಗಳ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದರು.

ರಾಜ್ಯ ಮಟ್ಟದ ಚುನಾವಣಾ ಮಾಸ್ಟರ್ ತರಬೇತಿದಾರ ಗೌತಮ ಅರಳಿ ಮಾತನಾಡಿ, ನಾವು ವಿಕಲಚೇತನರ ಮುಖಾಂತರ ಇಂದು ವಿಶೇಷ ಮತದಾನ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ವಿಶೇಷ ಚೇತನರಿಂದ ತ್ರಿಚಕ್ರ ಬೈಕ್ ರ್ಯಾಲಿ ಹಮ್ಮಿಕೊಳ್ಳುವ ಮೂಲಕ ಮತದಾನದ ಅರಿವು ಜನರಲ್ಲಿ ಮೂಡಿಸುತ್ತಿದ್ದೆವೆ. ನಾವು ಮತ ಹಾಕುತ್ತೆವೆ ಎಲ್ಲರೂ ಮತದಾನ ಮಾಡಿ ಎಂದು ವಿಶೇಷ ಚೇತನರು ಇಂದು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ನಾಗರಾಜ ಮಟ್ಟ, ಬೀದರ ತಾಲ್ಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾಣಿಕರಾವ ಪಾಟೀಲ್ ಪಂಡಿತ್ ಜಿಲ್ಲಾ ಸಮಾಲೋಚಕರು ಸ್ವಚ್ಛ ಭಾರತ ಮಿಷನ್, ಬೀದರ ಜಿಲ್ಲೆ ಮತ್ತು ತಾಲ್ಲೂಕಿನ ವಿಕಲಚೇತನರ ಅಧ್ಯಕ್ಷರು ಹಾಗೂ ವಿಕಲಚೇತನರು ಸೇರಿದಂತೆ ಇತರರು ಉಪಸ್ಥಿತರಿದ್ದರು.