ಕಲಬುರಗಿ,ಮಾ.24: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆಳಂದ್ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ನಗರದಲ್ಲಿ ವಾಸಿಸುತ್ತಿರುವ ಆಳಂದ್ ಕ್ಷೇತ್ರದ ನಿವಾಸಿಗಳನ್ನು ನಮ್ಮ ನಡೆ ಮಾತೃಭೂಮಿ ಕಡೆ ಎಂಬ ಘೋಷಣೆಯಡಿ ಮಾರ್ಚ್ 26ರಂದು ಬೆಳಿಗ್ಗೆ 10-30 ಗಂಟೆಗೆ ನಗರದ ಆಳಂದ್ ಚೆಕ್ ಪೋಸ್ಟ್ ರಸ್ತೆ ಬಳಿ ಇರುವ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ಸಭೆ ಕರೆಯಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಬಿಜೆಪಿ ಯುವ ಮುಖಂಡ ಹರ್ಷಾನಂದ್ ಸುಭಾಷ್ ಗುತ್ತೇದಾರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿಯೇ ಆಳಂದ್ ತಾಲ್ಲೂಕು ಐತಿಹಾಸಿಕ ಪರಂಪರೆ ಹೊಂದಿದೆ. ನಗರದಲ್ಲಿ ಹಲವಾರು ದಶಕಗಳಿಂದ ಆಳಂದ್ ತಾಲ್ಲೂಕಿನ ಜೊತೆ ಅವಿನಾಭಾವ ಸಂಬಂಧವನ್ನು ಅನೇಕರು ಹೊಂದಿದ್ದಾರೆ. ಅವರ ಕಷ್ಟ, ಸುಖಗಳಲ್ಲಿ ನಿರಂತರವಾಗಿ ನಾವು ಭಾಗಿಯಾಗಿದ್ದೇವೆ. ಅವರು ಜನಿಸಿದ ಗ್ರಾಮಗಳನ್ನು ಸುಧಾರಣೆ ಮಾಡಬೇಕು ಎಂಬ ನಿಟ್ಟಿನಲ್ಲಿ ಕಳೆದ ಅನೇಕ ವರ್ಷಗಳಿಂದ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅವರ ಗ್ರಾಮಗಳಿಗೆ ಆದ್ಯತೆಯ ಮೇಲೆ ಕಾಮಗಾರಿಗಳನ್ನು ಮಂಜೂರು ಮಾಡಿಸಿ ಅನುಷ್ಠಾನಗೊಳಿಸಲಾಗಿದೆ ಎಂದರು.
ಆ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ಹಂಚಿಕೊಳ್ಳಲು ಹಾಗೂ ಸಲಹೆ ಅಭಿಪ್ರಾಯಗಳನ್ನು ಸಂಗ್ರಹಿಸಲು ಪ್ರತಿ ಚುನಾವಣೆ ಸಂದರ್ಭದಲ್ಲಿ ಕರೆಯುವಂತೆ ಈ ಬಾರಿಯೂ ಸಭೆ ಕರೆಯಲಾಗಿದೆ. ನಗರದಲ್ಲಿರುವ ಆಳಂದ್ ತಾಲ್ಲೂಕಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು.
ಸಮಾಜದಲ್ಲಿರುವ ಬಡವರು, ನಿರ್ಗತಿಕರು, ಅಸಹಾಯಕರು, ಎಲ್ಲ ಜಾತಿ, ಧರ್ಮದಲ್ಲಿರುವ ಬಡವರ ಕುರಿತು ಅವರಿಗಿರುವ ಉದಾತ್ತ ಕಳಕಳಿಯೇ ಅವರನ್ನು ಜನಜೀವಿಯನ್ನಾಗಿಸಿದೆ. ಸದಾಕಾಲ ಜನರ ಕುರಿತು ಚಿಂತಿಸುವ ಅವರ ಚಿಂತನಾಗುಣ ಜನರ ಮಧ್ಯೆ ತಂದು ನಿಲ್ಲಿಸಿದೆ. ಬೆಳಿಗ್ಗೆ 7 ಗಂಟೆಯಿಂದ ಆರಂಭವಾಗುವ ಅವರ ಜನರ ಭೇಟಿ ರಾತ್ರಿ ಹತ್ತು ಗಂಟೆಯವರೆಗೂ ನಿರಂತರವಾಗಿ ಸಾಗುವುದೇ ಇದಕ್ಕೆ ನಿದರ್ಶನವಾಗಿದೆ ಎಂದು ಅವರು ಹೇಳಿದರು.
ಪ್ರತಿಯೊಬ್ಬರ ಜೀವನ ಏಳು- ಬೀಳುಗಳನ್ನು ಕಂಡಿದೆ. ಸತ್ಯ, ನ್ಯಾಯ, ಧರ್ಮದ ಪರವಾಗಿ ನಿಂತು ಹೋರಾಡಿದವರು, ಕೆಲಸ ಮಾಡಿದವರು ಇತಿಹಾಸದಲ್ಲಿ ನೆಲೆ ನಿಂತಿದ್ದಾರೆ. ಬದುಕು ಮುಳ್ಳಿನ ಹಾಸಿಗೆಯಿಂದ ಕೂಡಿದರೂ ನಂತರದಲ್ಲಿ ಒಂದೊಂದೆ ಮೆಟ್ಟಿಲುಗಳನ್ನು ಏರುತ್ತ ಸಾಮಾನ್ಯರಲ್ಲಿ ಅತೀ ಸಾಮಾನ್ಯ ವ್ಯಕ್ತಿಯೊಬ್ಬರು ಹಿಂದುಳಿದ ವರ್ಗದ ಕುಟುಂಬದಿಂದ ಬಂದು ನಾಲ್ಕು ಬಾರಿ ವಿಧಾನಸಭೆ ಪ್ರವೇಶ ಮಾಡಿರುವುದು ಸಾಮಾನ್ಯ ಸಂಗತಿಯಲ್ಲ ಎಂದು ಶಾಸಕ ಸುಭಾಷ್ ಆರ್. ಗುತ್ತೇದಾರ್ ಅವರ ಕುರಿತು ತಿಳಿಸಿದರು.
ಸಭೆಯಲ್ಲಿ ಶಾಸಕ ಸುಭಾಷ್ ಆರ್. ಗುತ್ತೇದಾರ್, ವಿದ್ಯಾಸಾಗರ್ ಕುಲಕರ್ಣಿ, ಶಿವರಾಜ್ ಪಾಟೀಲ್ ರದ್ದೇವಾಡಗಿ, ವೀರಣ್ಣಾ ಮಂಗಾಣೆ, ವಿಠಲರಾವ್ ಪಾಟೀಲ್, ಸಂತೋಷ್ ಹಾದಿಮನಿ, ಆನಂದರಾವ್ ಪಾಟೀಲ್ ಮುಂತಾದವರು ಪಾಲ್ಗೊಳ್ಳುವರು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ವೀರಮಹಾಶ್ವೇರ್ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರುದ್ರಯ್ಯ ಹಿರೇಮಠ್, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಸವರಾಜ್ ಬಿರಾದಾರ್, ಹಾಲುಮತ ಸಮಾಜದ ಮುಖಂಡ ಕಲ್ಯಾಣಿ ಸಾವಳಗಿ, ವೀರಶೈವ ಲಿಂಗಾಯತ ಮುಖಂಡ ಶರಣಗೌಡ ಪಾಟೀಲ್, ಆಳಂದ್ ಮಂಡಲ ಬಿಜೆಪಿ ಅಧ್ಯಕ್ಷ ಆನಂದರಾವ್ ಪಾಟೀಲ್, ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ಸಂತೋಷ್ ಹಾದಿಮನಿ ಮುಂತಾದವರು ಉಪಸ್ಥಿತರಿದ್ದರು.