ನಮ್ಮ ನಡೆ ಮತಗಟ್ಟೆ ಕಡೆ ಕಾರ್ಯಕ್ರಮಕ್ಕೆ ತಾ. ಪಂ ಇಒ ಚಾಲನೆ


ಸಂಜೆವಾಣಿ ವಾರ್ತೆ
ಕಾರಟಗಿ, ಏ.30: ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯತಿಯ ಮಾದರಿ ಮತಗಟ್ಟೆ- 149 ನಲ್ಲಿ ಇಂದು ಏಪ್ರಿಲ್ 30 ಪ್ರಜಾಪ್ರಭುತ್ವ ಹಬ್ಬ‌ ನಮ್ಮ ನಡೆ ಮತಗಟ್ಟೆಗಳ ಕಡೆ ಕಾರ್ಯಕ್ರಮಕ್ಕೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ನರಸಪ್ಪ ಎನ್. ಅವರು ಚಾಲನೆ ನೀಡಿದರು.
ನಂತರ ಮಾತನಾಡಿ ಚುನಾವಣಾ ಆಯೋಗ ಸೂಚಿಸಿದಂತೆ ಎಲ್ಲಾ ಮತಗಟ್ಟೆಗಳಲ್ಲಿ ಏಕಕಾಲಕ್ಕೆ ಮತದಾನದ ಧ್ವಜವನ್ನು ಹಾರಿಸಿ, ಸಡಗರ ಸಂಭ್ರಮದಿಂದ ಮೇ.10 ರಂದು ನಡೆಯುವ ಚುನಾವಣೆ ಹಬ್ಬವನ್ನು ಆಚರಿಸಲಾಗುತ್ತಿದೆ, ಮತಗಟ್ಟೆಗೆ ತೆರಳಿ ತಪ್ಪದೆ ಮತ ಚಲಾಯಿಸಿ, ಶೇಕಡವಾರು ಮತದಾನವಾಗಲು ಅರ್ಹರು ಮತ ಚಲಾಯಿಸುವಂತಾಗಬೇಕು. ಮತದಾನ ನಮ್ಮ ಹಕ್ಕು, ಪ್ರಜಾಪ್ರಭುತ್ವ ಬಲಪಡಿಸಲು ತಪ್ಪದೆ ಮತ ಚಲಾಯಿಸಬೇಕು ಎಂದರು. ನಂತರ ಮತದಾನ ಕುರಿತು ಪ್ರತಿಜ್ಞಾವಿಧಿಯನ್ನು‌ ಭೋದಿಸಿದರು.
ಮತದಾರರ ಜಾಗೃತಿ ಜಾಥಾ: ಮೇ.10 ರ ಮತದಾನ ಹಿನ್ನೆಲೆಯಲ್ಲಿ ಸಾರ್ವಜನಿಕ ಮತದಾನದ ಅರಿವು ಮೂಡಿಸಲು ಮತದಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮತದಾನದ ಜಾಗೃತಿ ಫಲಕಗಳನ್ನು ಹಿಡಿದು, ಮತದಾನದ ಗೀತೆಗಳನ್ನು ಪ್ರಚುರ ಪಡಿಸುವ ಮೂಲಕ ಗ್ರಾಮ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಜಾಗೃತಿ ಮೂಡಿಸಿದರು.
ಆಕರ್ಷಣೆಯ ಚಿಟ್ಟೆಯ ಪೋಟೋ ಪ್ರೇಮ್: ನನ್ನ  ಮತ ನನ್ನ ಆಯ್ಕೆ, ನನ್ನ ಮತ ನನ್ನ ಹಕ್ಕು ಎಂಬ ಘೋಷಣೆಯ ಚಿಟ್ಟೆ ಪೋಟೋ ಪ್ರೇಮ್ ನಲ್ಲಿ ಮತದಾರರಿಗೆ ಜಾಗೃತಿ ಮೂಡಿಸಲು ಅಧಿಕಾರಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆ ಸ್ವಸಹಾಯ ಗುಂಪು ಸದಸ್ಯರು ಪೋಟೋಗಳನ್ನು ತೆಗೆದುಕೊಂಡಿದ್ದು ವಿಶೇಷವಾಗಿ ಕಂಡು ಬಂತು.
ಬೀದಿ ನಾಟಕ ಪ್ರದರ್ಶನ: ಸಾರ್ವಜನಿಕರಿಗೆ ಮತದಾನದ ಜಾಗೃತಿ ಮೂಡಿಸುವ ಹಿನ್ನಲೆ *ಇಂಚರ ಜಾಗೃತಿ ಕಲಾತಂಡದಿಂದ* ಸಿದ್ದಾಪುರ ಗ್ರಾಮದ ಬಸ್ ನಿಲ್ದಾಣ ಆವರಣದಲ್ಲಿ ಬೀದಿ ನಾಟಕ ಪ್ರದರ್ಶನ ಆಯೋಜಿಸಿದ್ದು ಕಾರ್ಯಕ್ರಮಕ್ಕೆ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಚಾಲನೆ ನೀಡಿದರು.
ಸಹಿ ಸಂಗ್ರಹ ಅಭಿಯಾನ: ಮತದಾನಕ್ಕಿಂತ ಮತ್ತೋಂದಿಲ್ಲ, ನಾನು‌ ಖಚಿತವಾಗಿ ಮತದಾನ ಮಾಡುವೆ ಎಂಬ ಧ್ಯೇಯ ವಾಕ್ಯದಂತೆ ಮತದಾರರ ಸಹಿ ಸಂಗ್ರಹ ಅಭಿಯಾನದಲ್ಲಿ ಬಸ್ ನಿಲ್ದಾಣ ಆವರಣದಲ್ಲಿರುವ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತು ಒಬ್ಬೊಬ್ಬರಾಗಿ ಖಚಿತವಾಗಿ ಮತದಾನ ಮಾಡುವೆ ಎಂದು ಸಂತಸದಿಂದ ತಮ್ಮ ಸಹಿ ಮಾಡಿದರು.
ಈ ಸಂದರ್ಭದಲ್ಲಿ ಗ್ರಾ.‌ಪಂ ಅಭಿವೃದ್ಧಿ ಅಧಿಕಾರಿಗ ಸಾಯಿನಾಥ್, ಐಇಸಿ ಸಂಯೋಜಕ ಸೋಮನಾಥ ನಾಯಕ, ಎನ್.ಆರ್.ಎಲ್‌.ಎಮ್ ವ್ಯವಸ್ಥಾಪಕ ಶಾಮ್ ಸುಂದರ್, ಇಂಜರ ಜಾಗೃತಿ ಕಲಾ ತಂಡದವರು, ಅಂಗನವಾಡಿ, ಆಶಾ, ಕಾರ್ಯಕರ್ತೆಯರು, ಎಂಬಿಕೆ, ಎಲ್‌.ಸಿ.ಆರ್ ಪಿ, ಸ್ವಸಹಾಯ ಸಂಘದ ಮಹಿಳೆಯರು, ಗ್ರಾ.ಪಂ ಸಿಬ್ಬಂದಿಗಳು ಇದ್ದರು.