“ನಮ್ಮ ನಡೆ ದಾವಣಗೆರೆ ಕಡೆ” ಯಶಸ್ಸಿಗೆ ಮನವಿ

ಕಲಬುರಗಿ ಜು 25: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ 75ನೇ ಜನ್ಮ ದಿನಾಚರಣೆ ಪ್ರಯುಕ್ತ ಕರ್ನಾಟಕ ಪ್ರದೇಶ ಕುರುಬರ ಸಂಘ ಜಿಲ್ಲಾ ಶಾಖೆಯಿಂದ ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮನವಿ ಮಾಡಲಾಗುವುದೆಂದು ಸಂಘದ ಅಧ್ಯಕ್ಷ ಗುರುನಾಥ ಎಸ್. ಪೂಜಾರಿ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ 26ರಂದು ಯಡ್ರಾಮಿ, ಜೇವರ್ಗಿ, ಶಹಾಬಾದ್, ಚಿತ್ತಾಪುರ ಮತ್ತು 27ರಂದು ಆಳಂದ ಮತ್ತು ಅಫಜಲಪುರ ತಾಲೂಕುಗಳಲ್ಲಿ ಸಮಾಜದ ಮುಖಂಡರ ಸಭೆ ನಡೆಸಿ ಆ. 3ರಂದು ದಾವಣಗೆರೆಯಲ್ಲಿ ನಡೆಯಲಿರುವ ಅಮೃತ ಮಹೋತ್ಸವದಲ್ಲಿ ನಮ್ಮ ಜಿಲ್ಲೆಯಿಂದ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗುವುದು ಎಂದರು.
“ನಮ್ಮ ನಡೆ ದಾವಣಗೆರೆ ಕಡೆ” ಎಂಬ ಘೋಷಣೆಯೊಂದಿಗೆ ಕನಿಷ್ಠ 25-30 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಜುಕುಮಾರ ಎಸ್. ಪೂಜಾರಿ, ಮಲ್ಲಿಕಾರ್ಜುನ ಮುಡಬೂಳ, ಧರ್ಮರಾಜ ಹೇರೂರ್, ಶಿವಲಿಂಗ ವಗ್ಗಿ ಇದ್ದರು.