ನಮ್ಮ ಜೀವ ನಮ್ಮ ಕೈಯಲ್ಲಿ ಎಚ್ಚರವಹಿಸಲು ಸಚಿವರ ಮನವಿ

ಬೆಂಗಳೂರು, ಜ. ೧೪- ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಜಾರಿ ಮಾಡುವ ಪ್ರಸ್ತಾವ ಇಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಸಹ ಲಾಕ್‌ಡೌನ್ ಅಗತ್ಯವಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ರಾಜ್ಯದಲ್ಲೂ ಕೊರೊನಾ ಸೋಂಕು ನಿಯಂತ್ರಣಕ್ಕೆ ಲಾಕ್‌ಡೌನ್ ಜಾರಿ ಮಾಡಲ್ಲ ಎಂದರು. ರಾಜ್ಯದಲ್ಲಿ ಪ್ರತಿನಿತ್ಯ ಸೋಂಕು ಹೆಚ್ಚಾಗುತ್ತಿದೆ. ಜನತೆ ಸರ್ಕಾರದ ಜತೆ ಕೈಜೋಡಿಸಬೇಕು. ನಮ್ಮ ಜೀವ ನಮ್ಮ ಕೈಯಲ್ಲಿದೆ ಎಂದರು.
ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಜಾರಿ ಮಾಡಿರುವ ವಾರಾಂತ್ಯ ಕರ್ಫ್ಯೂ, ರಾತ್ರಿ ಕರ್ಫ್ಯೂ ಈ ತಿಂಗಳ ಅಂತ್ಯದವರೆಗೂ ಮುಂದುವರೆಯಲಿದೆ. ಈಗಿರುವ ನಿಯಮಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ನಿಯಮಗಳನ್ನು ಸಡಿಲಿಸುವ ಪ್ರಶ್ನೆಯೂ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ಗೆ ನಷ್ಟ
ಮೇಕೆದಾಟು ಪಾದಯಾತ್ರೆಯಿಂದ ಕಾಂಗ್ರೆಸ್ ಪಕ್ಷ ರಾಜಕೀಯ ಲಾಭ ಮಾಡಲು ಹೊರಟಿದ್ದರು. ಆದರೆ ಅವರಿಗೆ ಲಾಭಕ್ಕಿಂತ ನಷ್ಟವೇ ಆಯಿತು ಎಂದರು.
ಮೇಕೆದಾಟು ಪಾದಯಾತ್ರೆ ತಡೆಗೆ ಯಾವುದೇ ಷ್ಯಡಂತ್ರ ಇರಲಿಲ್ಲ. ಕಾಂಗ್ರೆಸ್‌ನವರು ಪಾದಯಾತ್ರೆ ವಿಫಲವಾದುದ್ದಕ್ಕೆ ಬಾಯಿಗೆ ಬಂದ ಹಾಗೆ ಆರೋಪಗಳನ್ನು ಮಾಡುತ್ತಿದ್ದಾರೆ ಅಷ್ಟೇ. ಅವರು ಪಾದಯಾತ್ರೆ ಮಾಡಿದ್ದೇ ತಪ್ಪು ಎಂದರು.
ಮೇಕೆದಾಟು ಯೋಜನೆಗೆ ಯಾವ ಪಕ್ಷದ ವಿರೋಧವೂ ಇಲ್ಲ. ಕಾಂಗ್ರೆಸ್‌ನವರು ಯಾರ ವಿರುದ್ಧ ಪಾದಯಾತ್ರೆ ಮಾಡಿದರೋ ಅರ್ಥವಾಗಲಿಲ್ಲ. ಅಧಿಕಾರದಲ್ಲಿದ್ದಾಗ ಏನೂ ಮಾಡದ ಕಾಂಗ್ರೆಸ್‌ನವರು ಪಾದಯಾತ್ರೆ ಮಾಡಿ ರಾಜಕೀಯ ಲಾಭ ಮಾಡಲು ಹೊರಟರು ಇದು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ಇದೇ ಸಂಕ್ರಾಂತಿ ದಿನ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಕಾಂಗ್ರೆಸ್‌ನವರು ಕೂಡಲ ಸಂಗಮಕ್ಕೆ ಹೋಗಿ ನೀರನ್ನು ಹಿಡಿದು ವರ್ಷಕ್ಕೆ ೧೦ ಸಾವಿರ ಕೋಟಿ ರೂ.ಗಳನ್ನು ಕೃಷ್ಣ ಕೊಳ್ಳದ ಯೋಜನೆಗಳಿಗೆ ನೀಡುವುದಾಗಿ ಶಪಥ ಮಾಡಿದ್ದರು. ಆದರೆ ಇಡೀ ಐದು ವರ್ಷದಲ್ಲಿ ೭೫೦೦ ಕೋಟಿ ರೂ. ಮಾತ್ರ ನೀಡಿದರು. ಕಾಂಗ್ರೆಸ್‌ಗೆ ನೀರಾವರಿ ಯೋಜನೆಗಳ ಬಗ್ಗೆ ಬದ್ಧತೆ ಇಲ್ಲ ಎಂದು ಟೀಕಿಸಿದರು.
ಮೇಕೆದಾಟು ಯೋಜನೆಯನ್ನು ಜಾರಿ ಮಾಡುವುದಾಗಿ ನಿನ್ನೆ ಮುಖ್ಯಮಂತ್ರಿಗಳೇ ಹೇಳಿದ್ದಾರೆ. ಬಿಜೆಪಿ ಈ ಯೋಜನೆಯನ್ನು ಜಾರಿ ಮಾಡುತ್ತದೆ ಎಂದರು.
ಹೋರಿ ಸ್ಪರ್ಧೆಯಲ್ಲಿ ಪಾಲ್ಗೊಂಡ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರ ಮೇಲೆ ಎಫ್‌ಐಆರ್ ಹಾಕಲಾಗಿದೆಯೇ ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾನೂನು ಕಾಯ್ದೆ ಎಲ್ಲರಿಗೂ ಒಂದೇ ಎಂದರು.