
ಕಲಬುರಗಿ:ಮೇ.16:ನಮ್ಮ ಜೀವನ ಮತ್ತೊಬ್ಬರಿಗೆ ಪಾಠವಾಗದಿದ್ದರೂ ಪರವಾಗಿಲ್ಲ ಆದರೆ ನಮ್ಮ ಜೀವನ ಬೇರೆಯವರಿಗೆ ಆಟವಾಗದಿರಲಿ ಎಂದು ಸಾಹಿತಿ ಗುಂಡೆರಾವ ಮುಡಬಿ ಹೇಳಿದರು.
ನಗರದ ಭವಾನಿ ನಗರದ ಬಬಲಾದ ಮಠದಲ್ಲಿ 159ನೇ ಶಿವಾನುಭವಗೋಷ್ಠಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತ ಸುಖದ ಹಿಂದೆ ಬಿದ್ದು ನಿರಾಸೆ ಆಗುವುದಕ್ಕಿಂತ, ವಾಸ್ತವದ ಬದುಕಿನ ಜೊತೆಗೆ ಸಾಗುವುದು ಒಳ್ಳೆಯದು ಹಾಗೆ ಶರಣರು ತಮ್ಮ ವಾಸ್ತವದ ಬದುಕಿನೊಂದಿಗೆ ಜೀವನ ಸಾಗಿಸಿ ಸಮೃದ್ಧ ಸಮಾಜ ನಿರ್ಮಿಸುವ ಕಾರ್ಯ ಮಾಡಿದ್ದಾರೆಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಗುಲಬರ್ಗಾ ಜಿಲ್ಲಾ ನ್ಯಾಯವಾದಿಗಳ ಸಂಘದ ಸಹ ಕಾರ್ಯದರ್ಶಿ ನ್ಯಾಯವಾದಿ ಶಾಂತಪ್ಪ ಚಿಕ್ಕಳ್ಳಿ ಮಾತನಾಡುತ್ತಾ ಆಧುನಿಕ ಯುಗದಲ್ಲಿ ಮೊಬೈಲ್ ಧಾರವಾಹಿಗಳಲ್ಲಿ ಮಕ್ಕಳು ದಾರಿ ಬಿಡುವ ಸಂದರ್ಭದಲ್ಲಿ ಸಂಸ್ಕಾರದ ಬೀಜ ಬಿತ್ತಿ ಒಳ್ಳೆಯ ಸಮಾಜ ನಿರ್ಮಾಣ ಮಾಡುತ್ತಿರುವ ಶ್ರೀಮಠದ ಕಾರ್ಯ ಶ್ಲಾಘನೀಯ ಎಂದು ಹೇಳಿದರು. ಶ್ರೀ ಮಠದ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಗುರುಪಾದ ಲಿಂಗ ಮಹಾಸ್ವಾಮಿಗಳು ನೇತೃತ್ವ ವಹಿಸಿದರು. ಕಾರ್ಯಕ್ರಮದಲ್ಲಿ ಗುರುರಾಜ ಬಿರಾದರ, ಸಂಗಮೇಶ ನಾಗೂರ, ನ್ಯಾಯವಾದಿ ಹಣಮಂತರಾಯ ಅಟ್ಟೂರ, ಕವಿತಾ ದೇಗಾಂವ, ಸೌಮ್ಯ ಶ್ರೀವಾತ್ಸವ, ಸಿದ್ದಣ್ಣ ವಾಡಿ, ಶರಣ ಪಾಟೀಲ, ರೇವಣಸಿದ್ದಯ್ಯ ಶಾಸ್ತ್ರಿ, ಶಾಂತು ಕಲ್ಬುರ್ಗಿ, ವೀರಣ್ಣ ಸ್ವಾದಿ, ನ್ಯಾಯವಾದಿ ರವೀಂದ್ರ ಬಂಟನಳ್ಳಿ, ಗುರುರಾಜ ಹಸರಗುಂಡಗಿ, ಮಲ್ಲಿಕಾರ್ಜುನ ಹುಮನಾಬಾದ ಸೇರಿದಂತೆ ಹಲವಾರು ಜನ ಭಾಗವಹಿಸಿದರು. ಇದೇ ಸಂದರ್ಭದಲ್ಲಿ ಖ್ಯಾತ ಸಂಗೀತ ಕಲಾವಿದರಾದ ಗೌರಿಶಂಕರ ಚಕ್ಕಿ ಅವರಿಗೆ ವಿಶೇಷವಾಗಿ ಗೌರವಿಸಲಾಯಿತು.