ನಮ್ಮ ಜನಪದರಿಂದ ಕನ್ನಡ ಕಟ್ಟುವ ಕೆಲಸವಾಗಿದೆ: ನಬಿಲಾಲ್ ಮಕಂದಾರ

ಕೆಂಭಾವಿ:ನ.3:ಶರಣರು ಸಂತರು, ದಾಸರು ಎಲ್ಲಕ್ಕೂ ಮಿಗಿಲಾಗಿ ನಮ್ಮ ಜನಪದರಿಂದ ಕನ್ನಡ ಕಟ್ಟುವ ಕೆಲಸವಾಗಿದೆ ಎಂದು ಹಿರಿಯ ಸಾಹಿತಿ ನಬಿಲಾಲ್ ಮಕಂದಾರ ಹೇಳಿದರು.

ವಲಯ ಕನ್ನಡ ಸಾಹಿತ್ಯ ಪರಿಷತ್ತ ಸಹಯೋಗದೊಂದಿಗೆ ಪಟ್ಟಣದ ಹಿರೇಮಠ ಸಂಸ್ಥಾನದ ಆವರಣದಲ್ಲಿ ನ.1 ರವಿವಾರ 65ನೇ ಕನ್ನಡ ರಾಜ್ಯೋತ್ಸವ ನಿಮಿತ್ಯ ಹಮ್ಮಿಕೊಂಡ ಕವಿ ಗೋಷ್ಠಿ ಮತ್ತು ಜಾನಪದ ಗೀತ ಗಾಯನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕವಿಗಳ ಕವನಗಳನ್ನು ವಿಮರ್ಶಿಸುವುದರೊಂದಿಗೆ ಮಾತನಾಡಿದ ಅವರು ಕವಿತೆ ರಚಿಸುವಾಗ ನಿಷ್ಠುರವಾದರೆ ಕವಿ ಲೋಕ ವಿರೋದಿ ಎನ್ನುವಂತಾಗಿದೆ ಎಂದು ಕಳವಳ ವ್ಯಕ್ತ ಪಡಿಸಿದ ಅವರು ಕವಿತೆ ಕಟ್ಟುವ ಕಲೆಗೆ ಕಲಿಕೆ ಅಗತ್ಯ, ಸಮಾಜ, ಜನಾಂಗವನ್ನು ಸತ್ಯದ ವ್ಯವಸ್ಥೆಯಲ್ಲಿ ನೋಡುವ ಕವಿತೆಗಳು ಯುವ ಬರಹಗಾರರಿಂದ ರಚನೆಯಾಗಬೇಕು. ಇವತ್ತು ಹಲವು ಕಡೆ ಕನ್ನಡ ಬೋರ್ಡ ಹಾಕಿ ಇಂಗ್ಲೀಷ ಶಿಕ್ಷಣ ನಡೆಯುತ್ತಿವೆ. ಇದಕ್ಕೆ ಸರಕಾರದ ನಿರ್ಲಕ್ಷ್ಯವೆ ಕಾರಣ. ಸರಕಾರದ ಸಂಕಲ್ಪ ಬದಲಾಗಬೇಕು. ಕನ್ನಡ ಅನ್ನದ ಭಾಷೆಯಾಗಬೇಕಾಗಿದೆ ಎಂದು ಹೇಳಿದರು.

ವಲಯ ಕಸಾಪ ಅಧ್ಯಕ್ಷ ಡಾ. ಯಂಕನಗೌಡ ಪಾಟೀಲ್ ಪ್ರಾಸ್ತಾವಿಕ ಮಾತನಾಡಿ ಕನ್ನಡಾಭಿಮಾನವನ್ನು ಕಟ್ಟಿ ಬೆಳೆಸುವ ಹೊಣೆ ಕನ್ನಡಿಗರಾದ ನಮ್ಮ ಮೇಲೆ ಇದೆ. ಕನ್ನಡವನ್ನು ಉಳಿಸಿ ಬೆಳೆಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಅದು ನಮ್ಮ ಮನೆಯಿಂದಲೆ ಪ್ರಾರಂಭವಾದಾಗ ಮಾತ್ರ ಸಾಧ್ಯ ಎಂದರು.

ಕವಿಗೋಷ್ಠಿಯಲ್ಲಿ ಹಳ್ಳೇರಾವ್ ಕುಲ್ಕಣಿ, ವೀರಣ್ಣ ಕಲಕೇರಿ, ಶರಣಯ್ಯ ಹಿರೇಮಠ, ಸಿದ್ರಾಮಪ್ಪ ಕುಂಬಾರ, ಶ್ರೀಶೈಲ ಹುಗ್ಗಿ, ಶ್ರೀಶೈಲ್ ಹದಗಲ್, ದೇವಿಂದ್ರ ಕರಡಕಲ್, ಮಡಿವಾಳಪ್ಪ ಹೆಗ್ಗಣದೊಡ್ಡಿ, ನೀಲಮ್ಮ ಮಲ್ಲೆ, ಪಾರ್ವತಿ ದೇಸಾಯಿ, ಕು.ಶ್ರೀಪಲ್ಲವಿ, ಗುಡದಯ್ಯ ದಾವಣಗೇರಿ, ನಿತ್ಯಾನಂದ ಟಕ್ಕಳಕಿ, ಜಟ್ಟೆಪ್ಪ ದೊಡಮನಿ, ಮಹ್ಮದಸಾ ಡಲಾಯತ್, ರೇವಣಸಿದ್ದಯ್ಯ ಮಠ ಸೇರಿದಂತೆ ಹಲವರು ನಾಡು ನುಡಿ ಪ್ರೇಮ, ಮಹಾಮಾರಿ ಕೊರೋನಾ, ರೈತನ ಕೊರಗು, ಭಾವೈಕ್ಯತೆ, ಸಹೋದರತ್ವ, ಸಾಮರಸ್ಯ ಕುರಿತು ತಮ್ಮ ತಮ್ಮ ಕವನವನ್ನು ಮಂಡಿಸಿದರು.

ಕಾರ್ಯಕ್ರಮವನ್ನು ಪತ್ರಕರ್ತ ಸಂಘದ ರಾಜ್ಯ ಕಾರ್ಯದರ್ಶಿ ಸಂಜೀವರಾವ ಕುಲ್ಕರ್ಣಿ ಉದ್ಘಾಟಿಸಿದರು. ಅತಿಥಿಗಳಾಗಿ, ಸುಮಿತ್ರಪ್ಪ ಅಂಗಡಿ, ಸಾಹಿತಿ ನಿಂಗನಗೌಡ ದೇಸಾಯಿ, ಶಿವಶರಣಪ್ಪ ಶಿರೂರ ಭಾಗವಹಿಸಿದ್ದರು. ಕಸಾಪ ಜಿಲ್ಲಾ ಕಾರ್ಯದರ್ಶಿ ಪ್ರಕಾಶ ಅಂಗಡಿ ಆಶಯದ ಮಾತುಗಳನ್ನಾಡಿದರು. ಹಿರೇಮಠದ ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು. ಸಂಗೀತ ಶಿಕ್ಷಕರಾದ ಬಸವರಾಜ್ ಭಂಟನೂರ ಹಾಗೂ ಯಮುನೇಶ ಯಾಳಗಿ ಸಂಗೀತ ಸೇವೆ ನೀಡಿದರು. ಜಾನಪದ ಕಲಾವಿದರಾದ ಮಹಾದೇವಪ್ಪ ವಜ್ಜಲ್, ನಿಜಗುಣಿ ಬಡಿಗೇರ, ಸಿದ್ದಣ್ಣ ಆಲಗೂರ ತಂಡದವರು ಜಾನಪದ ಗೀತಗಾಯ ನಡೆಸಿಕೊಟ್ಟರು.