ನಮ್ಮ ಆತ್ಮಸಾಕ್ಷಿಗಾಗಿ ನಾವು ಕಾರ್ಯನಿರ್ವಹಿಸಬೇಕಿದೆ : ಬಿಇಓ

ಭಾಲ್ಕಿ:ಅ.8: ಸನ್ಮಾನ, ಸತ್ಕಾರಕ್ಕಾಗಿ ಕೆಲಸ ಮಾಡದೇ, ನಮ್ಮ ಆತ್ಮ ಸಾಕ್ಷಿಕಾಗಿ ನಾವು ಕಾರ್ಯನಿರ್ವಹಿಸಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಜಹರ ಹುಸೇನ ಹೇಳಿದರು.
ಪಟ್ಟಣದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಶನಿವಾರ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಡಿಯಲ್ಲಿ, ವಿವಿಧ ಸಂಘಟನೆಯಗಳಿಂದ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ತಾಲೂಕಿನ ಶಿಕ್ಷಕರಿಗಾಗಿ ಆಯೋಜಿಸಿದ್ದ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು. ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಶಿಕ್ಷಕರು ಮುಂದೆಯೂ ಉತ್ತಮ ಕಾರ್ಯ ಮಾಡುವುದರೊಂದಿಗೆ ತಮ್ಮ ಕಿರೀಟ ಮುಂದುವರೆಸಿಕೊಂಡು ಹೋಗಬೇಕು. ನಮ್ಮ ತಾಲೂಕಿನಿಂದ ಆಯ್ಕೆಯಾದ ಉತ್ತಮ ಶಿಕ್ಷಕ ನಿಟ್ಟೂರ(ಬಿ) ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಗಣೇಶ, ದಾಡಗಿ ಹಿರಿಯ ಪ್ರಾಥಮಿಕ ಶಾಲೆಯ ಸಾಯಮ್ಮ ಮತ್ತು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅತನೂರಿನ ಅನಿತಾ ಮುದಾಳೆ ಯರವರು ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರಾಗಿ ಪ್ರಶಸ್ತಿ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ನಮ್ಮ ಶಿಕ್ಷಕರ ಆಯ್ಕೆ ಪಾರದರ್ಶಕವಾಗಿ ನಡೆದಿದೆ. ಈ ಎಲ್ಲಾ ಶಿಕ್ಷಕರೂ ರಾಜ್ಯ ಮಟ್ಟದ ಉತ್ತಮ ಶಿಕ್ಷಕರಾಗಿ ಆಯ್ಕೆಯಾಗಬೇಕು ಎನ್ನುವುದು ನಮ್ಮ ಮಹದಾಸೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೌಢಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ದತ್ತಾತ್ರಿ ಕಾಟಕರ, ಜಿಲ್ಲಾ ಮತ್ತು ರಾಜ್ಯಮಟ್ಟದ ಉತ್ತಮ ಶಿಕ್ಷಕರಾಗಿ ಆಯ್ಕೆಯಾಗಲು ಗ್ರಾಮೀಣ ಭಾಗದಲ್ಲಿ ಕನಿಷ್ಟ 5 ವರ್ಷ ಸೇವೆ ಸಲ್ಲಿಸಿರಬೇಕು. ಇಲಾಖೆವತಿಯಿಂದ ಎಲ್ಲಾ ತರಹದ ತಪಾಸಣೆ ನಡೆಸಿ ಉತ್ತಮ ಶಿಕ್ಷಕ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ಇದರಲ್ಲಿ ಯಾವುದೇ ತರಹದ ಒತ್ತಾಯ ಇರುವುದಿಲ್ಲ. ಹೀಗಾಗಿ ಉತ್ತಮ ಶಿಕ್ಷಕರು ತಮ್ಮ ಪ್ರತಿಭೆ ತೋರಿಸಲು ದಾಖಲೆಗಳನ್ನು ಸಂಗ್ರಹಿಸಿ ಇಲಾಖೆಗೆ ಸಲ್ಲಿಸಿ ಉತ್ತಮ ಶಿಕ್ಷಕರ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರಾಜೆಪ್ಪ ಪಾಟೀಲ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ ಉತ್ತಮ ಶಿಕ್ಷಕರಿಗೆ ಸನ್ಮಾನಿಸಿ ಮಾತನಾಡಿದರು. ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಸೇರಿದಂತೆ ವಿವಿಧ ಸಂಘಟನೆಯ ಪದಾಧಿಕಾರಿಗಳು ಉತ್ತಮ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಿದರು. ನಿವೃತ್ತ ಶಿಕ್ಷಕ ಶಿವಕುಮಾರ ಘಂಟೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಬಿರಾದಾರ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಜಯರಾಜ ದಾಬಶೆಟ್ಟಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಅಶೋಕ ಕುಂಬಾರ, ಕಿರಣಕುಮಾರ ಭಾಟಸಿಂಗೆ, ಪುಸ್ಪಾವತಿ ಚಕುರ್ತೆ, ಬಸವರಾಜ ನೇಳಗೆ, ಬಿಆರ್‍ಪಿ ಶಕುಂತಲಾ ಸಾಲಮನಿ, ಸಂತೋಷಕುಮಾರ ವಾಡೆ, ಸಂತೋಷ ಬಿರಾದಾರ, ಮಿಲಿಂದ, ಪಿ.ಎಸ್.ಬಿರಾದಾರ, ಮಲ್ಲಿಕಾರ್ಜುನ ಪಾಟೀಲ, ಬಸವರಾಜ ಮಡಿವಾಳ, ಜಾಲಿಂದರ, ಸಿಂಧೆ, ಖಲೀಲ ಅಹಮದ, ಸರಿತಾ ಕುಮಾರ, ಶೋಭಾವತಿ, ತುಕಾರಾಮ ಪಾಟೀಲ, ಉಪಸ್ಥಿತರಿದ್ದರು.ಶಿಕ್ಷಕಿ ಪ್ರಣಾಲಿ ಸ್ವಾಗತಿಸಿದರು. ವಿಠಲರಾವ ನಿರೂಪಿಸಿದರು. ಕಲ್ಪನಾ ವಂದಿಸಿದರು.