ನಮ್ಮ ಅವಧಿಯಲ್ಲೇ ದತ್ತಪೀಠಕ್ಕೆ ಮುಕ್ತಿ


ಚಿಕ್ಕಮಗಳೂರು, ಡಿ.೨೮- ಹೇಗೆ ರಾಮ ಮಂದಿರದ ಕಲ್ಪನೆ ಇತ್ತೋ ಅದು ಇಂದು ಸಕಾರಗೊಂಡಿದೆ. ಅದೇ ರೀತಿ ನಮ್ಮ ದತ್ತಪೀಠದಲ್ಲಿ ದತ್ತಮಂದಿರ ನಿರ್ಮಾಣವಾಗುತ್ತೆ. ನಮ್ಮ ಸರ್ಕಾರದ ಅವಧಿಯಲ್ಲೇ ಈ ಸಮಸ್ಯೆ ಬಗೆಹರಿಯುತ್ತೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ದತ್ತ ಜಯಂತಿಯ ಮೊದಲ ದಿನವಾದ ನಿನ್ನೆ ಅನುಸೂಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ನಗರದ ಬೋಳರಾಮೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಕಾಮಧೇನು ಗಣಪತಿ ದೇವಾಲಯದವರೆಗೂ ಮೆರವಣಿಗೆ ಬಡಡೆಸಲಾಯಿತು. ಬಳಿಕ ಶೋಭಾ ಕರಂದ್ಲಾಜೆ ಮಾಧ್ಯಮಗಳ ಜೊತೆ ಮಾತನಾಡಿದರು. ಇದೊಂದು ವಿಶೇಷ ದಿನ. ವಿಶ್ವಾದ್ಯಂತ ದತ್ತ ಭಕ್ತರಿದ್ದಾರೆ. ಆದರೆ ದತ್ತ ಪಾದುಕೆ ಇರುವುದು ನಮ್ಮ ಚಿಕ್ಕಮಗಳೂರಿನಲ್ಲಿ ಮಾತ್ರ. ದತ್ತ ಪೀಠ ನಮ್ಮದು. ಮುಂದಿನ ದಿನಗಳಲ್ಲಿ ದತ್ತ ಪೀಠ ನಮ್ಮದಾಗುತ್ತದೆ ಎಂಬ ವಿಶ್ವಾಸವಿದೆ. ಈ ದೇಶದಲ್ಲಿ ಸುಭೀಕ್ಷೆ ನೆಲೆಸಬೇಕು. ಅದಕ್ಕಾಗಿ ದತ್ತಾತ್ರೇಯನ ಪ್ರಾರ್ಥನೆ ಸಲ್ಲಿಸುತ್ತೇವೆ. ನಮ್ಮ ಅವಧಿಯಲ್ಲೇ ದತ್ತಪೀಠದ ಸಮಸ್ಯೆ ಬಗೆಹರಿಯುತ್ತೇ ಎಂಬ ವಿಶ್ವಾಸವಿದೆ ಎಂದು ಕರಂದ್ಲಾಜೆ ತಿಳಿಸಿದರು.