ನಮ್ಮವರೇ ನಮ್ಮವರ ಸೋಲಿಗೆ ಕಾರಣರಾಗಬೇಡಿ

ಹರಪನಹಳ್ಳಿ ಡಿ 21 : ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕನಿಷ್ಠ 20 ಜನ ಕಾರ್ಯಕರ್ತರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎನ್ನುವವರು ಮುಂದೆ ಬನ್ನಿ. ಕಾರ್ಯಕರ್ತರು ಬೆನ್ನಿಗಿದ್ದಾಗ ಮಾತ್ರ ಮುಖಂಡರಾಗಲು ಸಾಧ್ಯ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಗ್ರಾ.ಪಂ ಗ್ರಾ.ಪಂ ಚುನಾವಣೆ ಉಸ್ತುವಾರಿ ಅಲ್ಲಂ ವೀರಭದ್ರಪ್ಪ ಹೇಳಿದರು.
ಪಟ್ಟಣದ ಪಟ್ಟಣದ ಆರ್‍ಎಸ್‍ಎಸ್‍ಎನ್ ಶಾಲೆ ಆವರಣದಲ್ಲಿ ಭಾನುವಾರ ಗ್ರಾಮ ಪಂಚಾಯ್ತಿ ಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷದವತಿಯಿಂದ ಆಯೋಜಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಯಾರಿಗೆ ಟಿಕೆಟ್ ಕೊಡುತ್ತದೆಯೋ ಗೊತ್ತಿಲ್ಲ, ಗುಂಪುಗಾರಿಕೆ ಮಾಡಿದರೆ ಶಾಸಕರರಾಗಲು ಸಾಧ್ಯವಿಲ್ಲ, ಎಲ್ಲರನ್ನು ಪ್ರೀತಿ, ವಿಶ್ವಾಸದಿಂದ ಕಾಣಬೇಕು, ನಮ್ಮವರೇ ನಮ್ಮವರನ್ನು ಸೋಲಿಸಲು ಪ್ರಯತ್ನಿಸಬಾರದು ಎಂದರು.
ರಾತ್ರೋರಾತ್ರಿ ಯಾರು ಲೀಡರ್ ಆಗಲು ಆಗಲ್ಲ. ಜನರ ಸೇವೆ ಮಾಡಿದರೆ ಪಕ್ಷ ಗುರುತಿಸುತ್ತದೆ. ಹೀಗಾಗಿ ಎಲ್ಲಾ ಮುಖಂಡರು ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಕಾರ್ಯಕರ್ತರನ್ನು ಗೆಲ್ಲಿಸಿಕೊಂಡು ಬನ್ನಿ ಎಂದ ಅವರು ಗ್ರಾ.ಪಂ ಚನಾವಣೆಗಳು ಕಾರ್ಯಕರ್ತರ ಚುನಾವಣೆಯಾಗಿದ್ದು, ಅವರ ಗೆಲುವಿಗೆ ಶ್ರಮಿಸಬೇಕು. ಕೆಲವೆಡೆ ಮುನಿಸಿಕೊಂಡು ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರೂ ಚುನಾವಣೆ ನಂತರ ನಮ್ಮ ಜೊತೆಗೆ ಬರುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಎಸ್ಸಿ-ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಅನುದಾನವನ್ನು ಅನ್ಯ ಕಾಮಗಾರಿಗೆ ಬಳಸುವ ಮೂಲಕ ತಳಸಮುದಾಯಗಳಿಗೆ ಬಿಜೆಪಿ ನಾಯಕರು ವಂಚನೆ ಮಾಡುತ್ತಿದ್ದಾರೆ. ಬಿಜೆಪಿಯವರಿಗೆ ನಿಜವಾಗಿಯೂ ಬಡವರ ಬಗ್ಗೆ ಕಾಳಜಿಯಿಲ್ಲ, ರಾಜ್ಯ ಬಿಜೆಪಿ ಸರ್ಕಾರದಲ್ಲಿ ಒಬ್ಬನೇ ಒಬ್ಬ ಅಲ್ಪಸಂಖ್ಯಾತ ಸಮುದಾಯದ ಮಂತ್ರಿ ಇಲ್ಲ. ಇಂತಹ ಸರ್ಕಾರಕ್ಕೆ ಮತ ಹಾಕಬಾರದು ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಯೋಗಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮಂತರ ಪ್ರದೇಶದ ಜನರಿಗೆ ಕಾಂಗ್ರೆಸ್ ಪಕ್ಷ ಉದ್ಯೋಗದ ಖಾತ್ರಿ ನೀಡಿದೆ. ಬಿಜೆಪಿ ಪಕ್ಷದಿಂದ ಬಡವರ ಬಗ್ಗೆ ಒಂದೂ ಕಾರ್ಯಕ್ರಮವಿಲ್ಲ, ಕೇವಲ ಭಾವನಾತ್ಮಕವಾಗಿ ಮಾತನಾಡುತ್ತಾರೆ. ಪಕ್ಷದ ಕಾರ್ಯಕರ್ತರಿಗೆ ಅದಿಕಾರ ಸಿಕ್ಕಲ್ಲಿ ಕಾಂಗ್ರೆಸ್ ಪಕ್ಷ ಬಲವರ್ಧನೆಗೊಳ್ಳುತ್ತದೆ ಎಂದರು.
ಕಾಂಗ್ರೆಸ್ ಹರಪನಹಳ್ಳಿ ಕ್ಷೇತ್ರದ ವೀಕ್ಷಕ ವಿಜಯಕುಮಾರ್, ಜಿ.ಪಂ ಸದಸ್ಯ ಹೆಚ್.ಬಿ.ಪರುಶುರಾಮಪ್ಪ, ಹೂವಿನಹಡಗಲಿ ಪುರಸಭೆ ಅಧ್ಯಕ್ಷ ವಾರದಗೌಸ್, ಪುರಸಭೆ ಮಾಜಿ ಅಧ್ಯಕ್ಷ ಹೆಚ್.ಕೆ.ಹಾಲೇಶ್, ಮುಖಂಡರಾದ ಶಶಿಧರ ಪೂಜಾರ್, ಪಿ.ಎಲ್.ಪೋಮ್ಯನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಲೂರು ಅಂಜಪ್ಪ, ಕಮ್ಮತ್ತಹಳ್ಳಿ ಮಂಜುನಾಥ, ಎಂ.ಪಿ.ವೀಣಾ ಮಹಾಂತೇಶ್, ಪಿ.ಪ್ರೇಮಕುಮಾರ್ ಮತ್ತಿತರರು ಉಪಸ್ಥಿತರಿದ್ದರು.