ನಮ್ಮಲ್ಲಿ ಯಾವುದೇ ಒಳ ಜಗಳ ಇಲ್ಲ: ಸುನೀಲ್ ಬೋಸ್

ಸಂಜೆವಾಣಿ ನ್ಯೂಸ್
ಮೈಸೂರು:ಮಾ.31:- ನಮ್ಮಲ್ಲಿ ಯಾವುದೇ ಒಳಜಗಳ, ಬಣ ರಾಜಕೀಯ ಇಲ್ಲ, ಚುನಾವಣೆಯಲ್ಲಿ ರಾಜ್ಯ ಸರ್ಕಾರದ ಸಾಧನೆಗಳನ್ನು ಇಟ್ಟುಕೊಂಡು ಪ್ರಚಾರಕ್ಕೆ ಹೋಗುತ್ತೇನೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್ ಹೇಳಿದರು.
ನಗರದ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‍ನಲ್ಲಿ ಯಾವುದೇ ಗೊಂದಲ ಇಲ್ಲ. ಎಲ್ಲೆಡೆ ಟಿಕೆಟ್ ಘೋಷಣೆ ಮಾಡಿ ಕೊನೆಯಲ್ಲಿ ನಮ್ಮ ಕ್ಷೇತ್ರದ ಟಿಕೆಟ್ ಘೋಷಣೆಯಾಗಿದೆ ಅಷ್ಟೇ. ಕ್ಷೇತ್ರದಲ್ಲಿರುವ ಬರುವ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ 7 ಕಡೆಗಳಲ್ಲಿ ಕಾಂಗ್ರೆಸ್ ಶಾಸಕರಿದ್ದು, ಹನೂರಿನಲ್ಲಿ ಕೂಡ ನಮ್ಮ ಬಲ ಹೆಚ್ಚಿದೆ. ಇದು ನನ್ನ ಗೆಲುವಿಗೆ ಅನುಕೂಲ ಆಗಲಿದ್ದು, ಕಳೆದ ಬಾರಿ ಕೂಡ ನಾವು ಕಡಿಮೆ ಅಂತರದಲ್ಲಿ ಸೋತಿದ್ದೇವೆ ಎಂದರು.
ನಮ್ಮಲ್ಲಿ ಯಾವುದೇ ಒಳ ಜಗಳ, ಬಣ ರಾಜಕೀಯ ಇಲ್ಲ. ಬಣಗಳು ಇದ್ದಿದ್ದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ದರ್ಶನ್ ಧ್ರುವನಾರಾಯಣ್45 ಸಾವಿರ ಮತದಿಂದ ಗೆಲ್ಲುತ್ತಿರಲಿಲ್ಲ. ಈಗ ಶಾಸಕ ದರ್ಶನ್ ಧ್ರುವನಾರಾಯಣ್ ಅವರ ಮುಂದಾಳತ್ವದಲ್ಲೇ ಕ್ಷೇತ್ರದಲ್ಲಿ ಪ್ರಚಾರ ಮಾಡಲಾಗುವುದು ಎಂದ ಅವರು, ದರ್ಶನ್ ಕೂಡ ನಮಗೆ ಲೀಡ್ ಕೊಡಿಸುವ ಜವಾಬ್ದಾರಿ ಹೊತ್ತಿದ್ದಾರೆ ಎಂದ ಅವರು, ಸಿದ್ದರಾಮಯ್ಯ ಅವರ ಸರ್ಕಾರದ ಸಾಧನೆಗಳನ್ನು ಇಟ್ಟುಕೊಂಡು ನಾನು ಪ್ರಚಾರಕ್ಕೆ ಹೋಗುತ್ತೇನೆ ಎಂದು ಹೇಳಿದರು.
ಕೇಂದ್ರದಲ್ಲಿ ಹತ್ತು ವರ್ಷಗಳ ಕಾಲ ಬಿಜೆಪಿ ಏನು ಮಾಡಿದೆ? ರಾಮಮಂದಿರ ಕಟ್ಟಿದ್ದೇ ಸಾಧನೆಯೇ?. ದೇಶದಲ್ಲಿ ಅಣ್ಣ-ತಮ್ಮಂದಿರಂತೆ ಬದುಕುವವರ ಮಧ್ಯೆ ಬಿಜೆಪಿ ಹಿಂದುತ್ವದ ವಿಷ ಬೀಜ ಬಿತ್ತಿದೆ.
ಆ ಮೂಲಕ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವುದೇ ಅವರ ಸಾಧನೆಯಾಗಿದ್ದು, ಹಿರಿಯ ರಾಜಕಾರಣಿ ವಿ. ಶ್ರೀನಿವಾಸ್ ಪ್ರಸಾದ್ ಬೆಂಬಲ ಕೋರಿದ್ದೇನೆ. ಅವರ ಬೆಂಬಲ ಸಿಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಮಾಡಿ ಅವರಿಂದ ಭಿ ಫಾರಂ ಪಡೆದರು.
ಕೋಟ್
ಚಾಮರಾಜನಗರ ಕ್ಷೇತ್ರದಲ್ಲಿ ಸ್ಥಳಿಯವಾಗಿ ಕೆಲವು ಭಿನ್ನಾಭಿಪ್ರಾಯ ಇರಬಹುದು. ಹಾಗಂತ ಯಾರೂ ಸಹ ಮನೆ ಒಡೆಯುವ ಕೆಲಸ ಮಾಡುವುದಿಲ್ಲ.
ಸುನೀಲ್ ಬೋಸ್, ಕಾಂಗ್ರೆಸ್ ಅಭ್ಯರ್ಥಿ.