ನಮ್ಮಲ್ಲಿಯೇ ಘಟಿಸಿದ ಸ್ವಾತಂತ್ರ್ಯ ಹೋರಾಟವನ್ನು ಗುರುತಿಸಬೇಕಿದೆ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ, ಆ18: “ಸ್ವಾತಂತ್ರ್ಯ ಸಮರದ ಇತಿಹಾಸ ಹೇಳುವಾಗ ದೂರ ದೂರದ ದೊಡ್ಡ ದೊಡ್ಡ ನಾಯಕರನಷ್ಟೇ ಹೆಸರಿಸುತ್ತೇವೆ.ಆದರೆ ನಮ್ಮ ನಡುವೆಯೇ ಇದ್ದ,ನಮ್ಮ ನೆಲದ ಹೋರಾಟಗಾರರನ್ನು ಇಂದು ನೆನೆಯಬೇಕಿದೆ.ಸ್ವಾತಂತ್ರ್ಯ ಸಮರದ ಅಮರ ಇತಿಹಾಸದಲ್ಲಿ ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ 35 ಕ್ಕೂ ಅಧಿಕ ಹೋರಾಟಗಾರರನ್ನು ನೀಡಿದ ಊರು.ಈ ಭಾಗದ ಕಿಚ್ಚು ಬ್ರಿಟಿಷರ ನಿದ್ದೆಗೆಡಿಸಿತ್ತು” ಎಂದು ಹಿರಿಯ ಸಾಹಿತಿ ಆರ್.ಎಂ.ಹೊನಕೇರಿ ಅಭಿಪ್ರಾಯಪಟ್ಟರು.
ಅವರು ಲಕ್ಷ್ಮೇಶ್ವರ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ `ಮಾಸದ ಮಾತು’ ಸರಣಿಯ ನಾಲ್ಕನೇ ಸಂಚಿಕೆಯಲ್ಲಿ
“ಲಕ್ಷ್ಮೇಶ್ವರ ತಾಲೂಕಿನಲ್ಲಿ ಸ್ವಾತಂತ್ರ್ಯ ಹೋರಾಟದ ಹೆಜ್ಜೆ ಗುರುತುಗಳು”ಎಂಬ ವಿಚಾರ ಸಂಕಿರಣದ ವಿಷಯ ಮಂಡಿಸಿ ಮಾತನಾಡುತ್ತಿದ್ದರು. ಉದ್ಘಾಟಕರಾಗಿ ಭಾಗವಹಿಸಿದ್ದ ಹಿರಿಯ ಸಾಹಿತಿ ಕೊತ್ತಲ ಮಹಾದೇವಪ್ಪ ಮಾತನಾಡಿ “ಸ್ವಾತಂತ್ರ್ಯದ ಹೋರಾಟವು ಅಂದು ಜನಪರ, ಜನಪದರ ಹೋರಾಟವಾಗಿತ್ತು. ಗ್ರಾಮೀಣರ ನಿತ್ಯ ಬದುಕಿನ ಜೊತೆಗೆ ಹೋರಾಟವೂ ಕೂಡ ಒಂದು ಭಾಗವಾಗಿತ್ತು. ಲಕ್ಷ್ಮೇಶ್ವರ ತಾಲೂಕಿನಲ್ಲಿ ಇಂತಹ ಹಲವಾರು ಹೋರಾಟದ ಹೆಜ್ಜೆ ಗುರುತುಗಳನ್ನು ನಾವು ಕಾಣಬಹುದಾಗಿದೆ” ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಲಕ್ಷ್ಮೇಶ್ವರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಮೆಡ್ಲೇರಿ ಮಾತನಾಡಿ “ಲಕ್ಷ್ಮೇಶ್ವರ ತಾಲೂಕಿನ ಶಿಗ್ಲಿ, ಸೂರಣಗಿ,ಬಾಲೆಹೊಸೂರು ಹಾಗೂ ಲಕ್ಷ್ಮೇಶ್ವರ ಮುಂತಾದ ಊರುಗಳಲ್ಲಿ ಸ್ವಾತಂತ್ರ್ಯದ ಹೋರಾಟದ ಕಿಚ್ಚು ತೀವ್ರವಾಗಿತ್ತು.ಮಹಿಳೆಯರು ಇದರಲ್ಲಿ ಪಾಲ್ಗೊಂಡಿದ್ದು ಗಮನಾರ್ಹ.ಆದರೆ ಇತಿಹಾಸದಲ್ಲಿ ಅವುಗಳಿಗೆ ಹೆಚ್ಚು ಪ್ರಾಧಾನ್ಯತೆ ಸಿಕ್ಕಿಲ್ಲ.ಇಂದಿನ ವಿದ್ಯಾರ್ಥಿಗಳು, ಯುವಕರಿಗೆ ಆ ಹೋರಾಟದ ಪರಿಚಯ ಮಾಡಿಕೊಡಲು ಕನ್ನಡ ಸಾಹಿತ್ಯ ಪರಿಷತ್ತು ಲಕ್ಷ್ಮೇಶ್ವರ ತಾಲೂಕ ಘಟಕದ ಸಣ್ಣ ಪ್ರಯತ್ನವೇ ಇಂದಿನ ವಿಚಾರ ಸಂಕಿರಣ” ಎಂದರು.
ವಿಶ್ರಾಂತ ಶಿಕ್ಷಕ,ಸಾಹಿತಿ ಎಸ್.ಬಿ ಕೊಣ್ಣೂರ, ಕರಾವಿಪ ಜಿಲ್ಲಾಧ್ಯಕ್ಷ ಆರ್.ಎಫ್.ರಿತ್ತಿ, ಹಿರಿಯ ಸಾಹಿತಿ ಸಿ.ಜಿ.ಹಿರೇಮಠ ಮುಖ್ಯಅತಿಥಿಗಳಾಗಿ ಭಾಗವಹಿಸಿ ವಿಚಾರ ಸಂಕಿರಣದಲ್ಲಿ ತಮ್ಮ ವಿಚಾರ ಮಂಡಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಂ.ಕೆ.ಕಳ್ಳಿಮಠ, ಪ್ರಧಾನ ವಿಷಯ ಮಂಡನೆ ಮಾಡಿದ ಆರ್.ಎಂ. ಹೊನಕೇರಿ, ಉದ್ಘಾಟಕರಾದ ಕೊತ್ತಲ ಮಹದೇವಪ್ಪ ರವರನ್ನು ಸನ್ಮಾನಿಸಲಾಯಿತು.
ಶ್ರೀಮತಿ ನಂದಿನಿ ಮಾಳವಾಡ, ಕುಮಾರಿ ಪಂಚಮಿ ಅಂಬಿಗೇರ ದೇಶಭಕ್ತಿ ಗೀತೆ ಕಾರ್ಯಕ್ರಮ ನಡೆಸಿಕೊಟ್ಟರು.
ಶ್ರೀಮತಿ ವೀಣಾ ಹತ್ತಿಕಾಳ ಪ್ರಾರ್ಥಿಸಿದರು.ಕದಳಿ ಮಹಿಳಾ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಅಶ್ವಿನಿ ಅಂಕಲಕೋಟಿ ಸ್ವಾಗತಿಸಿದರು. ಕ.ಸಾ.ಪ ತಾಲೂಕ ಗೌರವ ಕಾರ್ಯದರ್ಶಿ ಮಂಜುನಾಥ ಚಾಕಲಬ್ಬಿ ನಿರೂಪಿಸಿದರು. ಎಸ್.ಬಿ.ಅಣ್ಣಿಗೇರಿ ವಂದಿಸಿದರು. ಪದಾಧಿಕಾರಿಗಳಾದ ನಾಗರಾಜ ಮಜ್ಜಿಗುಡ್ಡ,ಎಚ್.ಎಮ್ ಗುತ್ತಲ,ನಾಗರಾಜ ಶಿಗ್ಲಿ,ಎಸ್.ವಿ ಕನೋಜ,ಎನ್.ಎಸ್.ಗೊರವರ,ಗಂಗಾಧರ ಅರಳಿ,ವಿ.ಎಂ.ಹೂಗಾರ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಮಂಜುನಾಥ ಗೊರವರ,ಷಣ್ಮುಖ ಕುಂಬಾರ, ಈರಣ್ಣ ಅಕ್ಕೂರ,ಮುರಳೀಧರ ಹುಬ್ಬಳ್ಳಿ,ಎನ್.ಆರ್.ಸಾತಪುತೆ ವಿ.ವಿ.ಗೊಲ್ಲರ,ನಿಂಗಪ್ಪ ತಹಸೀಲ್ದಾರ,ನಿರ್ಮಲಾ ಅರಳಿ,ರತ್ನಾ ಕರ್ಕಿ ಇತರರು ಉಪಸ್ಥಿತರಿದ್ದರು.