ನಮೋ ನಗರವು ಮುಂಬರುವ ದಿನಗಳಲ್ಲಿ ಒಂದು ಆದರ್ಶ ನಗರವಾಗಿ ರೂಪಗೊಳ್ಳಲಿಃ ವಸತಿ ಸಚಿವ ವಿ.ಸೋಮಣ್ಣ

ವಿಜಯಪುರ, ನ.12-ಪ್ರಧಾನಿಗಳ ಹೆಸರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ನಮೋ ನಗರವು ಮುಂಬರುವ ದಿನಗಳಲ್ಲಿ ಸುಸಜ್ಜಿತ ರಸ್ತೆ ನಿರ್ಮಾಣ ಸೇರಿದಂತೆ ಇನ್ನೀತರ ಮೂಲಭೂತ ಸೌಕರ್ಯಗಳೊಂದಿಗೆ ಒಂದು ಅವಿಸ್ಮರಣೀಯ ನಗರವಾಗಿ ರೂಪಗೊಳ್ಳಬೇಕು ಎಂದು ರಾಜ್ಯ ವಸತಿ ಇಲಾಖೆ ಸಚಿವರಾದ ಶ್ರೀ ವಿ.ಸೋಮಣ್ಣ ಅವರು ಹೇಳಿದರು.
ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಫೋರ್ಡೆಬಲ್ ಹೌಸಿಂಗ್ ಇನ್ ಪಾರ್ಟ್‍ನರ್‍ಶಿಪ್ ಉಪ ಘಟಕದಡಿ ವಿಜಯಪುರ ನಗರದ ಸರ್ವೆ ನಂ:709, ಅಲ್ ಅಮೀನ್ ಆಸ್ಪತ್ರೆ ಹಿಂದುಗಡೆ ಮಹಾಲಬಾಗಾಯತ ರಿಸ.ನಂ 709 ರಲ್ಲಿ 1493 (ಜಿ+1) ಮಾದರಿಯ ಗುಂಪು ಮನೆಗಳನ್ನು ನಿರ್ಮಿಸುವ ಕಾಮಗಾರಿಯ ಶಂಕುಸ್ಥಾಪನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಅದರಂತೆ ಇಲ್ಲಿ ಇನ್ನುಳಿದ ಮನೆಗಳ ನಿರ್ಮಾಣಕ್ಕೂ ಶೀಘ್ರದಲ್ಲೇ ಅಧಿಕಾರಿಗಳಿಗೆ ಆದೇಶ ನೀಡಿ, ಟೆಂಡರ್ ಮೂಲಕ ಅದನ್ನೂ ಪೂರ್ಣಗೊಳಿಸಲಾಗುವುದು. ಅವುಗಳನ್ನು ಅರ್ಹ ಬಡವರಿಗೆ ನೀಡಲಾಗುತ್ತದೆ. ಹೀಗೆ ಬಡವರಿಗೆ ಕಡಿಮೆ ದರದಲ್ಲಿ ಮನೆಗಳನ್ನು ನಿರ್ಮಿಸಿಕೊಡುತ್ತಿರುವ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಕಾರ್ಯ ಶ್ಲಾಘನೀಯ ಎಂದರು.
ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡಿರುವ ವಿಜಯಪುರ ಜಿಲ್ಲೆಯು ಮುಂಬರುವ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲಿದ್ದು, ಅರ್ಹ ಫಲಾನುಭವಿಗಳು ಮನೆಗಳನ್ನು ಇನ್ನೊಬ್ಬರಿಗೆ ಮಾರಾಟ ಮಾಡದಂತೆ ಅವರು ವಿನಂತಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಸತಿ ಇಲಾಖೆಗೆ ಮೂಲಭೂತ ಸೌಕರ್ಯಗಳಿಗಾಗಿಯೂ ಅಗತ್ಯ ನೆರವು ನೀಡುತ್ತಿದ್ದು, ಪ್ರಸ್ತುತ ಸರ್ಕಾರದ ಅವಧಿಯಲ್ಲಿ ಇಲಾಖೆಯಿಂದ ಗಮನಾರ್ಹ ಕಾರ್ಯಗಳಾಗಿವೆ. ಅಂತೆಯೇ ರಾಜ್ಯದ ಪ್ರತಿ ಬಡವರಿಗೂ ಹಕ್ಕು ಪತ್ರ ವಿತರಿಸುವ ಕ್ರಾಂತಿಕಾರಕ ನಿರ್ಧಾರವನ್ನೂ ಸರ್ಕಾರ ತಗೆದುಕೊಂಡಿದೆ. ಇತ್ತೀಚೆಗೆ ನೆರೆ ಪ್ರವಾಹದಿಂದ ಹಾನಿಗೊಳಗಾದ ಮನೆಗಳಿಗೂ ಸರ್ಕಾರದಿಂದ ಧನ ಪರಿಹಾರ ಒದಗಿಸಲಾಗಿದೆ ಎಂದು ಹೇಳಿದರು.
ಸರ್ಕಾರದ ಇಂತಹ ಮಹತ್ವಾಕಾಂಕ್ಷಿ ಯೋಜನೆಗಳನ್ನು ಅಧಿಕಾರಿಗಳು ತಕ್ಷಣವೇ ಜಾರಿಗೊಳಿಸಬೇಕು. ಆ ಮೂಲಕ ಆಶ್ರಯ ಮನೆಗಳ ಯೋಜನೆಗೆ ಪ್ರಾಮಾಣಿಕವಾಗಿ ಶ್ರಮಿಸುವಂತೆ ಅವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಸನಗೌಡ ಪಾಟೀಲ್ (ಯತ್ನಾಳ) ಅವರು ಮಾತನಾಡಿ 2022 ರೊಳಗಾಗಿ ದೇಶದಲ್ಲಿನ ಸರ್ವರಿಗೂ ಸೂರು ಒದಗಿಸುವುದು ಪ್ರಧಾನಿಗಳ ಆಶಯವಾಗಿದ್ದು, ಹಾಗೆಯೇ ಪ್ರತಿಯೊಬ್ಬ ವಸತಿ ರಹಿತರಿಗೂ ಮನೆ ಸೌಲಭ್ಯ ನೀಡುವುದು ರಾಜ್ಯ ಸರ್ಕಾರದ ಆಶಯವಾಗಿದೆ. ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಕಾರದೊಂದಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಫೋರ್ಡೆಬಲ್ ಹೌಸಿಂಗ್ ಇನ್ ಪಾರ್ಟ್‍ನರ್‍ಶಿಪ್ ಉಪ ಘಟಕದಡಿ ವಿಜಯಪುರ ನಗರದ ಸರ್ವೆ ನಂ:709, ಅಲ್ ಅಮೀನ್ ಆಸ್ಪತ್ರೆ ಹಿಂದುಗಡೆ ಮಹಾಲಬಾಗಾಯತ ರಿಸ.ನಂ 709 ರಲ್ಲಿ 1493 (ಜಿ+1) ಮಾದರಿಯ ಗುಂಪು ಮನೆಗಳನ್ನು ನಿರ್ಮಿಸುವ ಕಾಮಗಾರಿಯು ಬಡವರಿಗೆ ಮನೆಗಳನ್ನು ನೀಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಹತ್ವಾಕಾಂಕ್ಷೆಯಾಗಿದೆ ಎಂದರು.
ಹೀಗೆ ಒಟ್ಟು 1493 ಮನೆಗಳನ್ನು ನಿರ್ಮಿಸುತ್ತಿದ್ದು, ಅದರಲ್ಲಿ ಪರಿಶಿಷ್ಟ ಜಾತಿ ಫಲಾನುಭವಿಗಳ ಸಂಖ್ಯೆ 381, ಪರಿಶಿಷ್ಟ ಪಂಗಡಗಳ ಫಲಾನುಭವಿಗಳ ಸಂಖ್ಯೆ, ಇತರೆ ಹಿಂದುಳಿದ, ಸಾಮಾನ್ಯ ವರ್ಗದ ಫಲಾನುಭವಿಗಳ ಸಂಖ್ಯೆ 905 ಮತ್ತು ಅಲ್ಪಸಂಖ್ಯಾತ ಫಲಾನುಭವಿಗಳ ಸಂಖ್ಯೆ 181 ಆಗಿರುತ್ತದೆ.
ಯೋಜನೆಯ ಮೊತ್ತದಲ್ಲಿ ಕೇಂದ್ರ ಸರ್ಕಾರದ ಪಾಲು 22.39 ಕೋಟಿ ರೂ.ಆಗಿದ್ದು, ರಾಜ್ಯ ಸರ್ಕಾರದ ಪಾಲು 21.17 ಕೋಟಿ ರೂ. ಫಲಾನುಭವಿಗಳ ಪಾಲು 44.07 ಕೋಟಿ ಹಾಗೂ ಮಹಾನಗರ ಪಾಲಿಕೆ ಪಾಲು 7.23 ಕೋಟಿ ರೂ. ಆಗಿರುತ್ತದೆ ಎಂದು ತಿಳಿಸಿದರು.
ಯೋಜನೆಯ ಒಟ್ಟು ಮೊತ್ತ 94.93 ಕೋಟಿ ರೂ. ಆಗಿದ್ದು, ಅದರಲ್ಲಿ ಮನೆ ನಿರ್ಮಾಣಕ್ಕೆ 87.70 ಕೋಟಿ ರೂ ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗಾಗಿ 7.23 ಕೋಟಿ ರೂ.ಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿ ಮನೆಯ ನಿರ್ಮಾಣದ ಮೊತ್ತ 5.87 ಲಕ್ಷ ಆಗಿರುತ್ತದೆ.
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಪ್ರತಿ ಮನೆಗೆ ಕೇಂದ್ರ ಸರ್ಕಾರದ ಪಾಲು 1.50 ಲಕ್ಷ ಹಾಗೂ ರಾಜ್ಯ ಸರ್ಕಾರದ ಪಾಲು 2.00 ಲಕ್ಷ ರೂ. ಆಗಿದ್ದು, ಉಳಿದ 2.37 ಲಕ್ಷ ಆಯ್ಕೆಗೊಂಡ ಫಲಾನುಭವಿಗಳ ಪಾಲು ಆಗಿರುತ್ತದೆ.
ಇತರೆ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಪ್ರತಿ ಮನೆಗೆ ಕೇಂದ್ರ ಸರ್ಕಾರದ ಪಾಲು 1.50 ಲಕ್ಷ ಹಾಗೂ ರಾಜ್ಯ ಸರ್ಕಾರದ ಪಾಲು 1.20 ಲಕ್ಷ ರೂ. ಆಗಿದ್ದು, ಉಳಿದ 3.17 ಲಕ್ಷ ಆಯ್ಕೆಗೊಂಡ ಫಲಾನುಭವಿಗಳ ಪಾಲು ಆಗಿರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಎಂ.ಸಿ ಮನಗೂಳಿ, ದೇವಾನಂದ ಚವಾಣ್, ಎ.ಎಸ್ ಪಾಟೀಲ್ (ನಡಹಳ್ಳಿ) ವಿಡಿಎ ಅಧ್ಯಕ್ಷರಾದ ಶ್ರೀಹರಿ ಗೊಳಸಂಗಿ, ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಜಿ.ಪಂ ಸಿಇಒ ಗೋವಿಂದ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.