4 ಪರಿಷತ್ , 2 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ: ಅಶ್ವತ್ಥನಾರಾಯಣ್ ವಿಶ್ವಾಸ

ಕಲಬುರಗಿ:ಅ.26: ಈಶಾನ್ಯ ವಲಯ ಶಿಕ್ಷಣ ಕ್ಷೇತ್ರದಲ್ಲಿನ ಸ್ಪರ್ಧಿ ಶಶೀಲ್ ಜಿ. ನಮೋಶಿ ಅವರೂ ಸೇರಿದಂತೆ ರಾಜ್ಯದ ನಾಲ್ಕು ವಿಧಾನ ಪರಿಷತ್ ಸ್ಥಾನಗಳಿಗೆ ಜರುಗಲಿರುವ ಚುನಾವಣೆಯಲ್ಲಿ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ರಾಜ್ಯ ವಿಧಾನ ಪರಿಷತ್ ಮಾಜಿ
ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ್ ಅವರು ಹೇಳಿದರು.
ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಕೆಲವು ಗೊಂದಲದಿಂದಾಗಿ ನಮೋಶಿ ಅವರು ಪರಾಭವಗೊಂಡಿದ್ದರು. ಅವರಿಗೆ ಈಗ ಪ್ರಾಯಶ್ಚಿತವಾಗಿದೆ. ಶಿಕ್ಷಕರು ಈ ಬಾರಿ ನಮೋಶಿ ಅವರನ್ನು ಆಯ್ಕೆಗೊಳಿಸುವರು ಎಂದರು.
ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಎಸ್.ವಿ. ಸಂಕನೂರು, ಆಗ್ನೇಯ ಪದವೀದರ ಕ್ಷೇತ್ರದಲ್ಲಿ ಚಿದಾನಂದ್ ಎಂ. ಗೌಡ, ಬೆಂಗಳೂರು ಕ್ಷೇತ್ರದಲ್ಲಿ ಪುಟ್ಟಣ್ಣ ಅವರು ಸಹ ಗೆಲುವು ಸಾಧಿಸಲಿದ್ದಾರೆ. ಅದೇ ರೀತಿ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮುನಿರತ್ನ ಮತ್ತು ಶಿರಾ ಕ್ಷೇತ್ರದಲ್ಲಿ ರಾಜೇಶಗೌಡ ಅವರ ಗೆಲುವು ನಿಶ್ಚಿತ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ. ಇದರಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ ಆಗಲಿದೆ. ಈ ಸಂಬಂಧ ರಾಜ್ಯ ಸರ್ಕಾರವು ಸಂಪೂರ್ಣ ಅನುಷ್ಠಾನಕ್ಕೆ ತರಲು ಮುಂದಿನ ಮೂರು ವರ್ಷಗಳಲ್ಲಿ ಆರು ಸಂಶೋಧನಾ ವಿಶ್ವವಿದ್ಯಾಲಯಗಳು ಮತ್ತು 10 ಬೋಧನಾ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಿದೆ ಎಂದರು.
ರಾಜ್ಯದಲ್ಲಿ ಹೊಸದಾಗಿ 5,388 ಶಿಕ್ಷಕರ ನೇಮಕಾತಿಗೆ ಸರ್ಕಾರ ಅನುಮೋದನೆ ನೀಡಿದೆ. ಅತಿಥಿ ಉಪನ್ಯಾಸಕರ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು. 8,9,10ನೇ ತರಗತಿಗಳಿಗೆ ಪಾಠ ಪ್ರವಚನದ ದೃಷ್ಟಿಯಿಂದ ಪ್ರತ್ಯೇಕ ವಾಹಿನಿಯೊಂದನ್ನು ಆರಂಭಿಸಲು ದೂರದರ್ಶನ ಚಂದನ್‍ದಲ್ಲಿ ಎಲ್ಲ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅವರು ಮಾತನಾಡಿ, ನಾನು ಕ್ಷೇತ್ರದ ಎಲ್ಲೆಡೆ ಸಂಚರಿಸಿದ್ದು, ಶಿಕ್ಷಕರು ವ್ಯಾಪಕ ಬೆಂಬಲ ವ್ಯಕ್ತಪಡಿಸಿದ್ದಾರೆ. ನನ್ನ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೆಲ್ಕೂರ್, ರಾಜ್ಯ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಪಕ್ಷದ ಗ್ರಾಮಾಂತರ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ, ಪಕ್ಷದ ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಯುವ ಮುಖಂಡ ಚಂದು ಪಾಟೀಲ್ ಮುಂತಾದವರು ಉಪಸ್ಥಿತರಿದ್ದರು.