ನಮಗೆ ಬಿಜೆಪಿ ಮಾರ್ಗದರ್ಶನ ಬೇಕಾಗಿಲ್ಲ: ಡಿಕೆಶಿ

ಮೈಸೂರು,ಸೆ.15:- ಭಾರತ್ ಜೋಡೋ ಯಾತ್ರೆಗೆ ವ್ಯಂಗ್ಯವಾಡಿರುವ ಭಾರತೀಯ ಜನತಾ ಪಕ್ಷಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿರುಗೇಟು ನೀಡಿದರು.
ಮೈಸೂರಿನಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು ನಮಗೆ ಬಿಜೆಪಿ ಮಾರ್ಗದರ್ಶನ ಬೇಕಾಗಿಲ್ಲ. ನಾವು ಸೋತಿರಬಹುದು ಆದರೆ ನಮ್ಮಲ್ಲಿ ಬಿರುಕಿಲ್ಲ. ಕಾಂಗ್ರೆಸ್ ನ ಅಂತರಾಳ ಬಿಜೆಪಿಗೆ ಏನೂ ಗೊತ್ತು? ಗಾಂಧಿ ಹೆಸರು ನಮಗೆ ಸದಾ ಶಕ್ತಿ. ಕಾಂಗ್ರೆಸ್‍ನ್ನು ಜೋಡಿಸುವಂತಹದು ಏನಾಗಿದೆ? ಭಾರತ್ ಜೋಡೋ ಯಾತ್ರೆ ರಾಜ್ಯದ ಮಟ್ಟಿಗೆ ಬಹಳ ಪ್ರಾಮುಖ್ಯತೆ ಇದೆ. ಯಾರು ಬೇಕಾದರೂ ಎಷ್ಟು ಬೇಕಾದರೂ ಟೀಕೆ ಮಾಡಬಹುದು. ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇರುತ್ತಾನೆ ಎಂದರು.
ಭಾರತ್ ಜೋಡೋ ಯಾತ್ರೆ ಈ ಭಾಗದಿಂದ ನಡೆಯುತ್ತಿದೆ. ನಿನ್ನೆ ನಾನು ನಾಲ್ಕು ವಿಧಾನ ಸಭಾ ಕ್ಷೇತ್ರದಲ್ಲೂ ಕೂಡ ಕಾರ್ಯಕರ್ತರ ಜೊತೆ ಚರ್ಚೆ ಮಾಡಿ ಪ್ರತಿ ಮನೆಗೂ ಕೂಡ ಆಹ್ವಾನ ಕೊಡಬೇಕು ಎಂದು ಕಾರ್ಯಕರ್ತರಿಗೆ ಹೇಳಿದ್ದೇನೆ. ಪ್ರತಿ ಪಂಚಾಯತ್ ನಲ್ಲೂ ಸಭೆ ನಡೆಯಬೇಕು. ಪ್ರತಿ ಮನೆಗೂ ಪಾಂಪ್ಲೆಟ್ ನೀಡಬೇಕು. ಪಕ್ಷ, ಜಾತಿ, ಧರ್ಮ ನೋಡಲು ಹೋಗಬೇಡಿ. ರಾಜ್ಯ,ರಾಷ್ಟ್ರದ ಅನೇಕ ಸಮಸ್ಯೆಗಳಿಗಾಗಿ ಇಂದು ನಾವು, ರಾಹುಲ್ ಗಾಂಧಿಯವರು ಭಾರತದ ಐಕ್ಯತಾ ಯಾತ್ರೆ ಮಾಡುತ್ತಿರುವುದಾಗಿ ತಿಳಿಸಿದರು. ಅವರಿಗೆಲ್ಲ ಜವಾಬ್ದಾರಿ ನೀಡಿದ್ದೇನೆ. ರಾಗುಲ್ ಗಾಂಧಿಯವರು ಎಲ್ಲೂ ತಂಗಲ್ಲ. ಅವರ ವಾಹನದಲ್ಲಿಯೇ ತಂಗುತ್ತಾರೆ. ಇಂದು ನಾನು ಬದನವಾಳು, ಆದಿ ಚುಂಚನಗಿರಿಗೆ ಹೋಗುತ್ತಿದ್ದೇನೆ ಎಂದರು. ಕರ್ನಾಟಕದಲ್ಲಿ ಬಳ್ಳಾರಿಯಲ್ಲಿ ಸಮಾವೇಶ ನಡೆಯಲಿದೆ. ನಮ್ಮ ರಾಷ್ಟ್ರೀಯ ನಾಯಕರು ಇಲ್ಲಿ ನಡೆಯುತ್ತಿದ್ದಾರೆ ಎಂದರೆ ನಮಗೆ ಒಂದು ಶಕ್ತಿ. ಸಾವಿರಾರು ಜನ ಟೀಕೆ ಮಾಡಬಹುದು ಎಂದರು.
ಇಂಧನ ಇಲಾಖೆ ಅಧಿಕಾರಿಗಳಿಗೆ ದಾಖಲೆ ತರುವಂತೆ ಹೆದರಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ ಅವರು ಈ ಬಗ್ಗೆ ಕೆಲ ಅಧಿಕಾರಿಗಳು ನನಗೆ ಕರೆ ಮಾಡಿದ್ದರು. ನನ್ನ ಅವಧಿಯ ದಾಖಲೆ ತರುವಂತೆ ಒತ್ತಡ ಹಾಕಲಾಗುತ್ತಿದೆ. ನಾನು ಎಲ್ಲಾ ದಾಖಲೆಗಳನ್ನು ಕೊಡಿ ಎಂದು ಹೇಳಿದ್ದೇನೆ. ಈ ಮೂಲಕ ಕಾಂಗ್ರೆಸ್ ಮತ್ತು ನನ್ನನ್ನು ಹೆದರಿಸಲು ಬಿಜೆಪಿ ಮುಂದಾಗಿದೆ. ನಾನು ಯಾವುದಕ್ಕೂ ಹೆದರುವವನಲ್ಲ. ಏನು ಬೇಕಾದರೂ ತನಿಖೆ ಮಾಡಿಕೊಳ್ಳಲಿ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ ಸಮಗ್ರ ತನಿಖೆ ಹೇಳಿಕೆಗೆ ವ್ಯಂಗ್ಯವಾಡಿ ಚಡ್ಡಿ, ಪ್ಯಾಂಟು, ಹಾಸಿಗೆ, ಮೊಟ್ಟೆ ಇತ್ಯಾದಿ ಇತ್ಯಾದಿ ಎಲ್ಲಾ ತನಿಖೆ ಮಾಡಲಿ. ನಾನು ಎಲ್ಲದಕ್ಕೂ ಸಿದ್ದನಾಗಿದ್ದೇನೆ. ಮೂರು ವರ್ಷ ಬೇಕಿತ್ತಾ ತನಿಖೆ ಆರಂಭಿಸಲು ಎಂದು ಪ್ರಶ್ನಿಸಿದರು. ಇಂದು ಪರಿಷತ್ ನಲ್ಲಿ ಮತಾಂತರ ನಿಷೇಧ ಕಾಯ್ದೆ ಮಂಡನೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿ ರಾಜ್ಯದಲ್ಲಿ ಎಲ್ಲಿ ಮತಾಂತರ ನಡೆಯುತ್ತಿದೆ ? ಪ್ರಚಾರಕ್ಕಾಗಿ ಬಿಜೆಪಿ ಮಂಡನೆ ಮಾಡುತ್ತಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ಅಲ್ಪಸಂಖ್ಯಾತರಿಗೆ ಭಯ ಹುಟ್ಟಿಸಲು ಕಾಯ್ದೆ ಮಂಡಿಸಲಾಗುತ್ತಿದೆ. ಭಾವನಾತ್ಮಕ ವಿಚಾರವನ್ನು ಕೆರಳಿಸಲು ಮಂಡನೆ ಮಾಡಲಾಗುತ್ತಿದೆ. ಕಾಯ್ದೆ ಈ ಹಿಂದೆಯೇ ಇತ್ತು. ದೇಶ ರಾಜ್ಯ ವಿಭಜನೆ ಮಾಡಲು ಬಿಜೆಪಿ ಮುಂದಾಗಿದೆ. ಜಾತಿ ಧರ್ಮವನ್ನು ಒಡೆಯಲು ಹುನ್ನಾರ ನಡೆಸುತ್ತಿದೆ. ಹಿಂದೂ ಧರ್ಮದ ಓಲೈಕೆ ಹಾಗೂ ಹೈ ಕಮಾಂಡ್ ಮೆಚ್ಚಿಸಲು ಈ ಕಾಯ್ದೆ ಮಂಡನೆ ಮಾಡಲಾಗುತ್ತಿದೆ ಎಂದರು.
ಅ.2ರಂದು ಬದನವಾಳು ಗ್ರಾಮಕ್ಕೆ ರಾಹುಲ್ ಗಾಂಧಿ ಆಗಮನ ಹಿನ್ನೆಲೆಯಲ್ಲಿ ಇಂದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಬದನವಾಳು ಗ್ರಾಮಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿ ನೀಡಿದರು. ಗ್ರಾಮದಲ್ಲಿ ಸಿದ್ಧತೆ ಪರಿಶೀಲನೆ ನಡೆಸಿದರು. ಈ ವೇಳೆ 1927ರಲ್ಲಿ ಮಹಾತ್ಮಾ ಗಾಂಧಿಯವರು ಈ ಕೇಂದ್ರಕ್ಕೆ ಭೇಟಿ ನೀಡಿದ್ದರ ಸ್ಮರಣಾರ್ಥದ ಛಾಯಾಚಿತ್ರವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದರು.
ಗ್ರಾಮಾಂತರಜಿಲ್ಲಾ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ವಿಧಾನ ಪರಿಷತ್ ಸದಸ್ಯ ರವಿ, ಕೆಪಿಸಿಸಿ ಕಾರ್ಯಾದ್ಯಕ್ಷ ಆರ್.ಧೃವನಾರಾಯಣ್,ಮಾಜಿಶಾಸಕ ಕಳಲೇ ಕೇಶವಮೂರ್ತಿ,ಮತ್ತಿತರರು ಜೊತೆಗಿದ್ದರು. ಭಾರತ್ ಜೋಡೋ ಯಾತ್ರೆಯಲ್ಲಿ ಭಾಗಿಯಾಗಲು ರಾಹುಲ್ ಗಾಂಧಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ.