ನಮಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಿ : ಬೇಡ ಜಂಗಮರ ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜು.21: ಬೇಡ ಜಂಗಮ ಸಮಾಜಕ್ಕೆ ಭಾರತದ ಸಂವಿಧಾನಾತ್ಮಕವಾಗಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಬೇಕೆಂದು ಆಗ್ರಹಿಸಿ ಇಂದು ನಗರದಲ್ಲಿ ಬಳ್ಳಾರಿ ಜಿಲ್ಲಾ ಬೇಡ ಜಂಗಮ ಸಮಾಜದಿಂದ ಬೃಹತ್ ಜನಾಂದೋಲನ ನಡೆಸಿ ಮುಖ್ಯ ಮಂತ್ರಿಗಳಿಗೆ ಬರೆದ ಮನವಿ ‌ಪತ್ರವನ್ನು ಎಡಿಸಿ ಮಂಜುನಾಥ್ ಅವರಿಗೆ ಸಲ್ಲಿಸಲಾಯಿತು.
ಹರಗಿನದೋಣಿ ಶ್ರೀಗಳಾದ ಸಿದ್ದಲಿಂಗ ಶಿವಾಚಾರ್ಯರು, ಸಮಾಜದ ಮುಖಂಡರಾದ ಜೆ.ಎಸ್.ಬಸವರಾಜ ಸ್ವಾಮಿ, ಬಿ.ಎಂ.ಎರ್ರಿಸ್ವಾಮಿ ಹೆಚ್.ಕೆ.ಗೌರಿ ಶಂಕರ್, ಮಹೇಶ್ವರ ಸ್ವಾಮಿ, ಹೆಚ್.ಎಂ.ಕಿರಣ್ ಕುಮಾರ್, ಕೊಟ್ರಯ್ಯಸ್ವಾಮಿ ಮೋರಿಗೇರಿ, ಗೋವಿಂದವಾಡ ಮಂಜುನಾಥ ಸ್ವಾಮಿ, ಚಾ.ಮ.ಗಂಗಾಧರಯ್ಯ, ನಟರಾಜ್ ಹಿರೇಮಠ್, ಬಸವರಾಜ್ ಜಿ.ಎಂ. ಶಂಕರಮೂರ್ತಿ, ಮೃತ್ಯುಂಜಯಸ್ವಾಮಿ, ಜೆ.ಎಂ.ಮಂಜುನಾಥ, ಶಿವಾನಂದ ಕೆ.ಎಂ. ಮೂದಲಾದವರು ಸೇರಿದಂತೆ ನೂರಾರು ಜನರು ನಗರದ ನಾರಾಯಣ ರಾವ್ ಪಾರ್ಕ್ ನಿಂದ ಬೃಹತ್ ಮೆರವಣಿಗೆ ಆರಂಭಿಸಿ ಕೆಲ ಹೊತ್ತು ಗಡಿಗೆ ಚೆನ್ನಪ್ಪ ಸರ್ಕಲ್ ನಲ್ಲಿ ಸರ್ಕಾರಕ್ಕೆ ಬೇಡಿಕೆಯ ಘೋಷಣೆ ಕೂಗಲಾಯಿತು.
ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ. ಬೇಡ ಜಂಗಮ ಜಾತಿಯನ್ನು ಸಂವಿಧಾನದ ಪ್ರಕಾರ 341ನೇ ಪರಿಚ್ಛೇದದಡಿಯಲ್ಲಿ ಸೇರ್ಪಡೆಗೊಳಿಸಲಾಗಿದ್ದು ಇದಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿರುತ್ತಾರೆ. ಜಾತಿ ಜನಗಣತಿಯ ಕ್ರಮ ಸಂಖ್ಯೆ 19ರಲ್ಲಿ ಬೇಡ ಜಂಗಮ ಜಾತಿಯನ್ನು ನಮೂದಿಸಲಾಗಿದೆ. ಅದರಂತೆ ಬೇಡ ಜಂಗಮ ಜಾತಿಯ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವೀರಶೈವ ಜಂಗಮರೇ ಬೇಡ ಜಂಗಮ ರೆಂದು ಗೆಜೆಟಿಯರ್ ಆದೇಶವನ್ನು ಹೊರಡಿಸಿವೆ.
ಇತಿಹಾಸ ತಜ್ಞರಾದ ಸೂರ್ಯನಾಥ ಕಾಮತ್ ಅವರು ವೀರಶೈವ ಜಂಗಮರೇ ಬೇಡ ಜಂಗಮರೆಂದು ಸರ್ಕಾರಕ್ಕೆ ವರದಿ ನೀಡಿರುತ್ತಾರೆ. ಆ ಪ್ರಕಾರವಾಗಿ ಬೇಡ ಜಂಗಮರಿಗೆ ಸರ್ಕಾರದಿಂದ ಇಲ್ಲಿಯವರೆಗೆ ಜಾತಿ ಪ್ರಮಾಣ ಪತ್ರವನ್ನು ನೀಡಿಲ್ಲ. ಇದು ಕಳೆದ  33ವರ್ಷಗಳಿಂದ ನಮ್ಮ ಬೇಡ ಜಂಗಮ ಜಾತಿಗೆ ವಿವಿಧ ಸರ್ಕಾರಗಳು ಮಾಡಿರುವ ಅನ್ಯಾಯವಾಗಿದೆ.
ನಮ್ಮ ಮನವಿ ಪತ್ರಕ್ಕೆ ಸ್ಪಂದಿಸಿ ಆದಷ್ಟು ಶೀಘ್ರವಾಗಿ ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ನೀಡಿ ನ್ಯಾಯ ಒದಗಿಸಬೇಕೆಂದು ಮನವಿ ಸಲ್ಲಿಸಲಾಯಿತು.