ನಮಗೆ ನಮ್ಮ ಕಾರ್ಯಕರ್ತ ಮುಖ್ಯ: ತಿಪ್ಪರಾಜು

ರಾಯಚೂರು,ಏ.೨೬- ಬಿಜೆಪಿ ಸಕ್ರೀಯ ಕಾರ್ಯಕರ್ತ ರವಿಕುಮಾರ ಎಂಬುವರು ನಗರದ ಬೆಟ್ಟದೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ತಿಳಿಯುತ್ತಿದ್ದಂತೆ ರಾಯಚೂರು ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತಿಪ್ಪರಾಜು ಹವಲ್ದಾರ ಅವರು ಆಸ್ಪತ್ರೆಗೆ ಭೇಟಿ ನೀಡಿ ಕುಶಲೋಪರಿ ವಿಚಾರಿಸಿದರಲ್ಲದೇ ಅಗತ್ಯ ಚಿಕಿತ್ಸೆ ನೀಡಿ ಬೇಗ ಗುಣಮುಖರಾಗಲು ಸಹಕರಿಸುವಂತೆ ವೈದ್ಯರಿಗೆ ಮನವಿ ಮಾಡಿದರು.
ವಿಧಾನಸಭೆ ಚುನಾವಣೆ ಇನ್ನೂ ಕೆಲವೇ ದಿನಗಳು ಬಾಕಿ ಉಳಿದಿವೆ. ಎಲ್ಲಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಮತದಾರರ ಮನವೊಲಿಸಲು ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ. ರಾಯಚೂರು ಗ್ರಾಮೀಣ ಕ್ಷೇತ್ರದಲ್ಲೂ ಚುನಾವಣೆ ಪ್ರಚಾರ ದಿನ ದಿನಕ್ಕೆ ರಂಗೇರುತ್ತಿದೆ. ಇಂತಹ ಸಂದರ್ಭದಲ್ಲೂ ಅದ್ಯಾವುದನ್ನು ಲೆಕ್ಕಿಸದ ತಿಪ್ಪರಾಜು ಅವರು ತಮಗೆ ತಮ್ಮ ಕಾರ್ಯಕರ್ತ ಮುಖ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ.
ರಾಯಚೂರು ಗ್ರಾಮೀಣ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಜನರೊಂದಿಗೆ ಸಭೆಯಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ತಮ್ಮ ಕಾರ್ಯಕರ್ತ ಅನಾರೊಗ್ಯದಿಂದ ನಗರದ ಬೆಟ್ಟದೂರು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂಬ ವಿಷಯ ತಿಳಿಯಿತು. ತಕ್ಷಣವೇ ಅಲ್ಲಿನ ಜನರಿಗೆ ತಿಳಿಹೇಳಿ ತಕ್ಷಣವೇ ಸಭೆಯನ್ನು ಮೊಟಕುಗೊಳಿಸಿದ ತಿಪ್ಪರಾಜು ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರವಿಕುಮಾರ ಅವರ ಕುಶಲೋಪರಿ ವಿಚಾರಿಸಿದ ತಿಪ್ಪರಾಜು ಅವರು ಯಾವುದೇ ಕಾರಣಕ್ಕು ಚಿಂತೆ ಮಾಡಬೇಡಿ, ನಿಮ್ಮ ಜೊತೆ ನಾನಿದ್ದೇನೆ. ಧೈರ್ಯ ದಿಂದ ಇರಬೇಕು ಎಂದು ಸ್ಥೈರ್ಯ ತುಂಬಿದ ಅವರು, ಸ್ಥಳದಲ್ಲಿದ್ದ ವೈದ್ಯರೊಂದಿಗೆ ಮಾತನಾಡಿ, ಅಗತ್ಯ ಚಿಕಿತ್ಸೆಯನ್ನು ನೀಡಿ ಬೇಗ ಗುಣಮುಖರಾಗುವಂತೆ ಸಹಕರಿಸಲು ಮನವಿ ಮಾಡಿದರು.
ರವಿಕುಮಾರ ಅವರು ರಾಯಚೂರು ಗ್ರಾಮೀಣ ಕ್ಷೇತ್ರದ ಗಿಲ್ಲೇಸುಗೂರಿನಲ್ಲಿ ಸಕ್ರೀಯ ಕಾರ್ಯಕರ್ತನಾಗಿ ಶ್ರಮಿಸುತ್ತಿದ್ದಾರೆ. ಬಿಜೆಪಿ ಪರವಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ಕಾರ್ಯಕರ್ತರಿಗೆ ತೊಂದರೆಯಾದರೆ ನನಗೆ ತೊಂದರೆಯಾದಂತೆ. ರವಿಕುಮಾರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಷಯ ಕೇಳಿ ಆಸ್ಪತ್ರೆಗೆ ಬಂದಿರುವೆ ಎಂದು ತಿಪ್ಪರಾಜು ಸುದ್ದಿಗಾರರಿಗೆ ತಿಳಿಸಿದರು.
ಚುನಾವಣೆ ಪ್ರಚಾರದಲ್ಲಿ ಬಿಡುವಿಲ್ಲದೇ ಗ್ರಾಮಗಳಿಗೆ ಸುತ್ತಾಡುತ್ತಿದ್ದರೂ ತಮ್ಮ ಕಾರ್ಯಕರ್ತನೋರ್ವ ಅನಾರೊಗ್ಯದಿಂದ ಆಸ್ಪತ್ರೆಗೆ ಚಿಕತ್ಸೆಗಾಗಿ ದಾಖಲಾಗಿರುವ ವಿಷಯ ತಿಳಿದು ತಕ್ಷಣವೇ ಸಭೆ ಮೊಟಕಗೊಳಿಸಿ ಆಸ್ಪತ್ರೆಗೆ ಭೇಟಿ ನೀಡುವ ಮೂಲಕ ತಿಪ್ಪರಾಜು ಅವರು ಮಾನವೀಯತೆ ಮೆರೆದಿದ್ದಾರೆ. ಕಾರ್ಯಕರ್ತರ ನೋವಿನಲ್ಲೂ ತಾವು ಜೊತೆ ಇರುವುದಾಗಿ ಧೈರ್ಯ ನೀಡಿರುವುದು ಮತ್ತೊಬ್ಬರಿಗೆ ಮಾದರಿಯಾಗಿದೆ.
ಈ ಸಂದರ್ಭದಲ್ಲಿ ಮುಖಂಡರಾದ ಜಯಪೌಲ್, ಸಂಗಂ ಸೇರಿದಂತೆ ಇನ್ನಿತರರು ಇದ್ದರು.