ನನ್ನ ಹೆಣವೂ ಬಿಜೆಪಿಗೆ ಹೋಗಲ್ಲ

ಸಿಎಂ ಖಡಕ್ ನುಡಿ

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು, ಸೆ. ೧೧- ನನ್ನ ಹೆಣವೂ ಬಿಜೆಪಿಗೆ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಖಡಕ್ಕಾಗಿ ಹೇಳಿದ್ದಾರೆ.
ಮೈಸೂರಿನ ವಿಮಾನ ನಿಲ್ದಾಣದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಿಜೆಪಿ ಸೇರಲು ಹೋಗಿದ್ದೆ ಎಂಬ ಕುಮಾರಸ್ವಾಮಿ ಹೇಳಿಕೆ ನಗೆಪಾಟಿಲಿನ ಹೇಳಿಕೆ, ನಾನು ಬಿಜೆಪಿಗೆ ಹೋಗುತ್ತೇನೆ ಎಂದರೆ ಯಾರಾದರೂ ನಂಬುತ್ತಾರಾ. ಅಡ್ವಾಣಿ ಅವರನ್ನು ಯಾವುದೋ ಸಂದರ್ಭದಲ್ಲಿ ಭೇಟಿ ಮಾಡಿದೆ ಎಂದು ತಕ್ಷಣ ಬಿಜೆಪಿಗೆ ಸೇರಲು ಹೋಗಿದ್ದೆ ಎಂದೆಲ್ಲಾ ಹೇಳುವುದು ಸರಿಯಲ್ಲ. ಮೊನ್ನೆ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದೆ, ಹಾಗೆಂದು ಬಿಜೆಪಿ ಜತೆ ಸೇರುತ್ತೇನೆಯೇ ಎಂದು ಪ್ರಶ್ನಿಸಿದರು.
ಅಧಿಕಾರ ಇರಲಿ, ಇಲ್ಲದಿರಲಿ ನಾನು ಎಂದೂ ಕೋಮುವಾದಿ ಪಕ್ಷದ ಜತೆ ಹೋಗುವುದಿಲ್ಲ. ನನ್ನ ಇಡೀ ರಾಜಕಾರಣ ಕೋಮುವಾದ ಶಕ್ತಿಗಳ ವಿರುದ್ಧವೇ ನಡೆದಿದೆ ಎಂದರು.
ಕುಮಾರಸ್ವಾಮಿ ಯಾರೋ ಹೇಳಿದರು ಎಂದು ಏನನ್ನೋ ಹೇಳಿದ್ದಾರೆ. ನಾನು ಯಾವುದೇ ಕಾರಣಕ್ಕೂ ಕೋಮುವಾದಿ ಶಕ್ತಿಗಳ ಜತೆ ಹೋಗುವುದಿಲ್ಲ. ನನ್ನ ಹೆಣವೂ ಬಿಜೆಪಿಗೆ ಹೋಗಲ್ಲ ಎಂದು ಪುನರುಚ್ಚರಿಸಿದರು.ಕಾವೇರಿ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಸರ್ವ ಪಕ್ಷಗಳ ಸಭೆಯಲ್ಲಿ ರಾಜಕಾರಣ ಮಾಡಲ್ಲ ಎಂದು ಹೇಳಿದವರು ಈಗ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿ, ಬಿಜೆಪಿಯವರಿಗೆ ತಾಕತ್ತಿದ್ದರೆ ಮೇಕೆದಾಟು ಯೋಜನೆಗೆ ಕೇಂದ್ರದಿಂದ ಅನುಮತಿ ಕೊಡಿಸಲಿ ಎಂದು ಸವಾಲು ಹಾಕಿದರು.
ಕಾವೇರಿಗೆ ಸಂಬಂಧಿಸಿದಂತೆ ಸರ್ವಪಕ್ಷ ನಿಯೋಗ ಭೇಟಿಗೆ ಪ್ರಧಾನಿಗಳ ಸಮಯ ಕೇಳಿದ್ದೆ, ಇದುವರೆಗೂ ಉತ್ತರ ಬಂದಿಲ್ಲ. ಬಿಜೆಪಿ ನಾಯಕರು ಪ್ರಧಾನಿ ಜತೆ ಮಾತನಾಡಿ ಸಮಯ ಕೊಡಿಸಲಿ ಎಂದು ಹೇಳಿದರು.ರಾಜ್ಯದಲ್ಲಿ ಬಿಜೆಪಿಯ ೨೫ ಸಂಸದರಿದ್ದಾರೆ. ಇವರ್ಯಾರು ಕಾವೇರಿ ಬಗ್ಗೆ ಮಾತನಾಡುತ್ತಿಲ್ಲ. ನೀವು ಬೇಡ, ನಾನಾದರೂ ಮಾತನಾಡುತ್ತೇನೆ ಎಂದರೂ ಅದಕ್ಕೂ ಪ್ರಧಾನಿಯವರು ಸಮಯ ಕೊಡುತ್ತಿಲ್ಲ. ಬಿಜೆಪಿಯವರದ್ದು ರಾಜಕಾರಣ ಬಿಟ್ಟರೆ ಬೇರೆನೂ ಇಲ್ಲ ಎಂದರು.
ಮುಂದಿನ ಸಚಿವ ಸಂಪುಟದಲ್ಲಿ ಬರ ಘೋಷಣೆ
ರಾಜ್ಯದ ಬರಪೀಡಿತ ತಾಲ್ಲೂಕುಗಳ ಘೋಷಣೆಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಾಡುತ್ತೇವೆ. ಸದ್ಯ ೬೨ ತಾಲ್ಲೂಕುಗಳ ಪಟ್ಟಿಯಾಗಿವೆ. ಇನ್ನೂ ೧೩೪ ತಾಲ್ಲೂಕುಗಳ ಬರ ಸಮೀಕ್ಷೆ ನಡೆದಿದೆ. ಎಲ್ಲವನ್ನು ಸೇರಿಸಿ ಸಮಗ್ರ ವರದಿ ಬಂದ ನಂತರ ಮುಂದಿನ ಸಚಿವ ಸಂಪುಟದಲ್ಲಿ ಬರ ಪೀಡಿತ ತಾಲ್ಲೂಕುಗಳ ಘೋಷಣೆ ಆಗಲಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಒಂದು ದೇಶ ಒಂದು ಚುನಾವಣೆ ಅಸಾಧ್ಯ
ದೇಶದಲ್ಲಿ ಒಂದು ದೇಶ ಒಂದು ಚುನಾವಣೆ ನಡೆಸುವುದು ಅಸಾಧ್ಯ. ಇದು ಅವೈಜ್ಞಾನಿಕ ಕೂಡಾ. ಇದು ಆಗದ ಕ್ರಮ ಎಂದರು.
ಕರ್ನಾಟಕ ಚುನಾವಣೆ ಫಲಿತಾಂಶದಿಂದ ಪ್ರಧಾನಿ ಮೋದಿ ಧೃತಿಗೆಟ್ಟಿದ್ದಾರೆ. ಅವರು ಬಂದು ಪ್ರಚಾರ ಮಾಡಿದಲೆಲ್ಲಾ ಕಾಂಗ್ರೆಸ್ ಜಯ ಗಳಿಸಿದೆ. ಇದರಿಂದ ಹತಾಶರಾಗಿ ಒಂದು ರಾಷ್ಟ್ರ ಒಂದು ಚುನಾವಣೆ ಎಂದು ಹೇಳುತ್ತಿದ್ದಾರೆ. ಮುಂದೆ ಮೇ ತಿಂಗಳಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಹಾಗೆಂದು ವಿಧಾನಸಭೆಯನ್ನು ವಿಸರ್ಜಿಸಿ ಚುನಾವಣೆಗೆ ಹೋಗಲು ಸಾಧ್ಯವಾಗತ್ತದೆಯೇ ಎಂದು ಪ್ರಶ್ನಿಸಿದರು.
ಮೈಸೂರು ದಸರಾ ಆಚರಣೆ ಬಗ್ಗೆ ಪ್ರತಾಪ್ ಸಿಂಹ ಅವರ ಮಾತಿಗೆ ಉತ್ತರ ಕೊಡಲ್ಲ, ಆತನ ಮಾತುಗಳ ಬಗ್ಗೆ ನನ್ನನ್ನು ಪ್ರಶ್ನೆ ಕೇಳಬೇಡಿ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಗರಂ ಆಗಿ ಹೇಳಿದರು.

ಖಾಸಗಿ ಸಾರಿಗೆಯವರ ಬೇಡಿಕೆ ಈಡೇರಿಕೆ ಅಸಾಧ್ಯ
ಖಾಸಗಿ ಸಾರಿಗೆ ಬಸ್‌ಗಳ ಮಾಲೀಕರ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ಅವರು ಅಸಾಧ್ಯವಾದ ಬೇಡಿಕೆಗಳನ್ನು ಇಟ್ಟಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದರು.
ಮೈಸೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆಯನ್ನು ಜಾರಿ ಮಾಡಿದೆ. ಇದರಿಂದ ನಮಗೆ ನಷ್ಟವಾಗುತ್ತಿದೆ. ಸರ್ಕಾರ ನಷ್ಟ ಭರಿಸಿ ಕೊಡಬೇಕು. ಪರಿಹಾರ ಕೊಡಿ ಎಂದರೆ ಕೊಡಲು ಸಾಧ್ಯವಾ ಎಂದರು.
ಖಾಸಗಿ ಸಾರಿಗೆಯವರ ಸಾಧ್ಯವಾದ ಬೇಡಿಕೆಗಳನ್ನು ಈಡೇರಿಸುತ್ತೇವೆ. ಅಸಾಧ್ಯವಾದ ಬೇಡಿಕೆ ಈಡೇರಿಕೆ ಕಷ್ಟ. ಈಗಾಗಲೇ ಅವರ ಜತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಾನು ಮಾತನಾಡಿದ್ದೇವೆ. ವಸ್ತುಸ್ಥಿತಿಗೆ ಹತ್ತಿರವಾದ ಬೇಡಿಕೆ ಇದ್ದರೆ ಈಡೇರಿಸುತ್ತೇವೆ. ಶಕ್ತಿ ಯೋಜನೆಯಿಂದ ನಷ್ಟವಾಗಿರುವುದಕ್ಕೆ ಹಣ ಕೊಡಿ ಎಂದರೆ ಅದು ಆಗದ ಮಾತು ಎಂದರು.