
ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಮೇ.14: ಚುನಾವಣೆಯಲ್ಲಿ ಮತದಾರರು ನೀಡಿರುವ ಜನಾದೇಶಕ್ಕೆ ತಲೆ ಬಾಗುವೆ ಎಂದು ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಪಿ.ಟಿ.ಪರಮೇಶ್ವರನಾಯ್ಕ ಹೇಳಿದರು.
ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಸೋಲಿಗೆ ನಾನು ಯಾರನ್ನೂ ಹೊಣೆ ಮಾಡುವುದಿಲ್ಲ. ಸೋಲಿನ ಹೊಣೆಯನ್ನು ನಾನೇ ಹೊರುವೆ. ನಾನು ಈ ಹಿಂದೆ ಎರಡು ಬಾರಿ ಗೆದ್ದಿರುವುದಕ್ಕಿಂತ ಈ ಬಾರಿ ಹೆಚ್ಚು ಮತ ಗಳಿಸಿದ್ದೇನೆ. ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿರುವ ಕಾರ್ಯಕರ್ತರ ಜತೆ ನಾನಿರುತ್ತೇನೆ. ಯಾರೂ ಎದೆಗುಂದುವ ಅವಶ್ಯಕತೆ ಇಲ್ಲ ಎಂದರು.
ಕ್ಷೇತ್ರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಕೆಲಸಗಳಿಗೆ ಮತದಾರರು ಮನ್ನಣೆ ನೀಡಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಕ್ಷೇತ್ರದಲ್ಲಿ ಪಕ್ಷಕ್ಕೆ ಸೋಲಾಗಿರುವುದಕ್ಕೆ ಬೇಸರವಾಗಿದೆ. ಪ್ರಜಾಪ್ರಭುತ್ವದಲ್ಲಿ ಮತದಾರರು ನೀಡಿರುವ ತೀರ್ಪನ್ನು ಒಪ್ಪಿಕೊಳ್ಳಲೇಬೇಕು ಎಂದು ತಿಳಿಸಿದರು.