ನನ್ನ ಸೇವೆ ಪರಿಗಣಿಸಿ ಮತ್ತೊಮ್ಮೆ ಆಯ್ಕೆ ಮಾಡಲು ಮರಿತಿಬ್ಬೇಗೌಡ ಮನವಿ

ಸಂಜೆವಾಣಿ ನ್ಯೂಸ್
ಮೈಸೂರು.ಜೂನ್.02:- ದಕ್ಷಿಣ ಶಿಕ್ಷಕರ ಕ್ಷೇತ್ರದಲ್ಲಿ ನನ್ನನ್ನು ನಾಲ್ಕು ಬಾರಿ ಆಯ್ಕೆ ಮಾಡಿದ್ದಾರೆ. ಈ ಅವಧಿಯಲ್ಲಿ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನ ಪರಿಗಣಿಸಿ ನನ್ನನ್ನು ಮತ್ತೊಮ್ಮೆ ಗೆಲ್ಲಿಸಿ ಎಂದು ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಮನವಿ ಮಾಡಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕು ಬಾರಿ ಗೆದ್ದಾಗಲೂ ನಾನು ಶಿಕ್ಷಕರ ಧ್ವನಿಯಾಗಿ ನಾನು ಕೆಲಸ ಮಾಡಿದ್ದೇನೆ. ಕೆಲ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿವೆ, ಆದರೆ ಕೆಲ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ನನ್ನನ್ನು ಆಯ್ಕೆ ಮಾಡಿದ ಶಿಕ್ಷಕ ಸಮುದಾಯಕ್ಕೆ ಅಪಕೀರ್ತಿ ತರುವಂತಹ ಕೆಲಸ ಮಾಡಿಲ್ಲ. ನಾಲ್ಕು ಬಾರಿ ಆಯ್ಕೆಗೊಂಡಾಗಲೂ ವಿರೋಧ ಪಕ್ಷದಲ್ಲಿ ಇದ್ದುಕೊಂಡು ಕೆಲಸ ಮಾಡಿದ್ದೇನೆ. ಆದರೆ, ಈಗ ಸುವರ್ಣಾವಕಾಶ ಆಡಳಿತ ಪಕ್ಷದ ಪರವಾಗಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ. ಇದ್ದರಿಂದ ಶಿಕ್ಷಕರ ಮತ್ತಷ್ಟು ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಬಹುದು ಎಂದರು.
ಮೊದಲ ಬಾರಿ ಕಾಂಗ್ರೆಸ್‍ನಿಂದ ಸ್ಪರ್ಧೆ ಮಾಡಿ ಗೆದ್ದಿದ್ದೆ. ಆ ನಂತರ ಒಮ್ಮೆ ಸ್ವತಂತ್ರವಾಗಿ, ಎರಡು ಬಾರಿ ಜೆಡಿಎಸ್ ನಿಂದ ಆಯ್ಕೆಯಾಗಿದ್ದೇನೆ. ಇದೀಗ ಮತ್ತೆ ಕಾಂಗ್ರೆಸ್ ನಿಂದ ಸ್ಪರ್ಧೆಗಿಳಿದಿದ್ದೇನೆ. ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ಒತ್ತಾಯಿಸಿ ಹೋರಾಟ ಮಾಡುತ್ತಿದ್ದೇನೆ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಕಾರಣ ಶಿಕ್ಷಕರ ಬಹುಕಾಲದ ಬೇಡಿಕೆಗಳನ್ನು ಈಡೇರಿಸುವ ಅವಕಾಶವಿದೆ. ಹಾಗಾಗಿ ನನ್ನ ಸೇವೆಯನ್ನು ಪರಿಗಣಿಸಿ ಮತ್ತೊಮ್ಮೆ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ದಕ್ಷಿಣ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಪ್ರತಿಯೊಂದೂ ಮತಕ್ಕೂ ಸುಮಾರು ಒಂಭತ್ತು ಸಾವಿರ ಹಂಚುತ್ತಿದ್ದಾರೆಂಬ ಆರೋಪ ಕೇಳಿಬಂದಿದೆ. ಜೊತೆಗೆ ಇವರು ಉಡುಗೊರೆ, ಪಾರ್ಟಿಗಳನ್ನೂ ಮಾಡುತ್ತಿದ್ದಾರೆಂದು ವದಂತಿ ಹರಡಿದೆ. ಆದರೆ ಶಿಕ್ಷಕ ವೃಂದ ಇವುಗಳಿಂದಾಗಿ ತಮ್ಮ ಆತ್ಮಗೌರವ ಕಳೆದುಕೊಳ್ಳುವುದಿಲ್ಲ. ಕಳೆದ 24 ವರ್ಷಗಳ ಅವಧಿಯಲ್ಲಿ ನಾನು ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಕ್ಷೇತ್ರಕ್ಕಾಗಿ ನಡೆಸಿದ ಹೋರಾಟ, ಅವುಗಳಿಂದ ದೊರೆತ ಪ್ರತಿಫಲ ಗಮನಿಸಿ ತಮಗೆ ಮೊದಲ ಪ್ರಾಶ್ಯಸ್ತ ಮತ ನೀಡುವರು ವಿಶ್ವಾಸವಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಸುಧಾರಣೆ ತರಲು ಇದೊಂದು ಪರ್ವ ಕಾಲವಾಗಿದೆ. ಆರನೇ ವೇತನ ಆಯೋಗವನ್ನು ಸಿದ್ದರಾಮಯ್ಯ ಅವರು ಈ ಹಿಂದೆ ಯಥಾವತ್ತಾಗಿ ಜಾರಿಗೊಳಿಸಿದ್ದಾರೆ. ಏಳೆನೇ ವೇತನ ಆಯೋಗ ಜಾರಿ ಭರವಸೆ ಇದೆ. ಬಡ್ತಿ ಪಡೆದ ಶಿಕ್ಷಕರಿಗೆ ಕಡಿಮೆ ವೇತನ ದೊರೆಯುತ್ತಿದೆ. ಹಳೇ ಪಿಂಚಣಿ ವ್ಯವಸ್ಥೆ ಜಾರಿಗೆ ತರಬೇಕಾಗಿದೆ. ಅನುದಾನಿತ ಶಿಕ್ಷಣ ಸಂಸ್ಥೆಯ ಬೋಧಕ, ಬೋಧಕೇತರರಿಗೂ ಆರೋಗ್ಯ ವಿಮೆ ಮೊದಲಾದವನ್ನು ದೊರಕಿಸಿಕೊಡಬೇಕಾಗಿದೆ. ಹೀಗಾಗಿ ತಾವು ಆಡಳಿತ ಪಕ್ಷದಿಂದ ಆಯ್ಕೆಯಾದರೆ ಇದು ಸುಲಭವಾಗುತ್ತದೆ. ಆದ್ದರಿಂದ ತಮ್ಮ ಅನುಭವ, ಇದುವರೆಗೆ ಈ ವರ್ಗಕೆ ಮಾಡಿರುವ ಹೋರಾಟ, ದೊರೆತ ಪ್ರತಿಫಲ ಗಮನಿಸಿ ತಮ್ಮನ್ನು ಇನ್ನೊಮ್ಮೆ ಚುನಾಯಿಸಬೇಕೆಂದು ಕೋರಿದರು.
ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ಮಾತನಾಡಿ, ಶಿಕ್ಷಕರ ಬೇಡಿಕೆ ಈಡೇರಿಸಲು ಇದು ಸಕಾಲವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಶಿಕ್ಷಣ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ಇನ್ನು ಮರಿತಿಬ್ಬೇಗೌಡರು ಸದನದ ಒಳಗೆ, ಹೊರಗೆ ಈ ನಿಟ್ಟಿನಲ್ಲಿ ಹೋರಾಟ ನಡೆಸಿದ್ದಾರೆ. ಹೀಗಾಗಿ ಇನ್ನಷ್ಟು ಹೋರಾಟ ನಡೆಸಲೆಂದು ಮತ್ತೆ ಪ್ರಥಮ ಪ್ರಾಶ್ಯಸ್ತ ಮತ ನೀಡಬೇಕೆಂದು ಶಿಕ್ಷಕ ವೃಂದಕ್ಕೆ ಮನವಿ ಮಾಡಿದರು.
ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ವರ್ಗ, ಪರಿಶಿಷ್ಟ ಜಾತಿಗಳ ಪರ ಸದಾ ಇದೆ. ಹೀಗಾಗಿ ಮರಿತಿಬ್ಬೇಗೌಡ ಆಯ್ಕೆಯಾದರೆ ಇನ್ನಷ್ಟು ಅನುಕೂಲವಾಗಲಿದೆ. ಆದ್ದರಿಂದ ಈ ವರ್ಗದ ಮತದಾರರು ಮರೆಯದೇ ಮರಿತಿಬ್ಬೇಗೌಡರಿಗೆ ಪ್ರಥಮ ಪ್ರಾಶ್ಯಸ್ತ ಮತ ನೀಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಮುಡಾ ಮಾಜಿ ಅಧ್ಯಕ್ಷ ಹೆಚ್.ವಿ.ರಾಜೀವ್, ಮುಖಂಡರಾದ ಕೆ.ವಿ.ಮಲ್ಲೇಶ್, ಪೆÇ್ರ.ಜಯರಾಮಯ್ಯ ಉಪಸ್ಥಿತರಿದ್ದರು.