ನನ್ನ ಶ್ರಮದಿಂದ 371 ‘ಜೆ’ ಕಲಂ ವ್ಯಾಪ್ತಿಗೆ ಹರಪನಹಳ್ಳಿ


ಹರಪನಹಳ್ಳಿ.ಡಿ.೪;  ತಾಲ್ಲೂಕಿನ ಉಚ್ಚಂಗಿದುರ್ಗದಲ್ಲಿ ನೆಡದ ವಿಧಾನ ಪರಿಷತ್ ಚುನಾವಣೆ ಪ್ರಚಾರದಲ್ಲಿ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳಿಗೆ 371 ‘ಜೆ’ ಅನ್ವಯ ಲಭ್ಯವಾಗಿರುವ ಸೌಲಭ್ಯಗಳನ್ನು ಹರಪನಹಳ್ಳಿ ತಾಲ್ಲೂಕಿಗೆ ಕೊಡಿಸುವಲ್ಲಿ ನನ್ನ ಶ್ರಮ ಅಪಾರ ಎಂದು ಹೂವಿನ ಹಡಗಲಿ ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ ಹೇಳಿದರು.ಗ್ರಾಮದಲ್ಲಿ ಬಳ್ಳಾರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.ಬಳ್ಳಾರಿ ಜಿಲ್ಲೆ ಕಾಂಗ್ರೆಸ್ ಭದ್ರಕೋಟೆ ಆಗಿದ್ದು, ಪಕ್ಷದ ಅಭ್ಯರ್ಥಿ ಕೆ.ಸಿ. ಕೊಂಡಯ್ಯ ಗೆಲುವು ಸಾಧಿಸಲಿದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಚಿವನಾಗಿದ್ದಾಗ ಹರಪನಹಳ್ಳಿಗೆ ವಿಶೇಷ ಸ್ಥಾನಮಾನ ಕೊಡಿಸುವಲ್ಲಿ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಧ್ವನಿ ಎತ್ತಿದ್ದೇನೆ. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಇದರಿಂದ ಪಕ್ಷಕ್ಕೆ ಹಿನ್ನಡೆ ಯಾಗಬಹುದು ಎಂದು, ಶಾಮನೂರು ಶಿವಶಂಕರಪ್ಪ ಅವರ ನಿರ್ಧಾರವನ್ನು ಕೇಳಿದರು. ಅವರ ಒಪ್ಪಿಗೆ ಪಡೆದ ನಂತರ ಎಂ.ಪಿ.ರವೀಂದ್ರ ಅವರ ಅಭಿಪ್ರಾಯವನ್ನೂ ಕೇಳಲಾಗಿತ್ತು. ಈ ಕುರಿತು ನಾನು ನಡೆಸಿದ ಚರ್ಚೆ ವಿಧಾನಸೌಧದ ಕಡತದಲ್ಲಿದೆ. ಮಾಹಿತಿ ಕೊಡಲು ಸಿದ್ಧ ಎಂದು ಹೇಳಿದರು.ಈ ವಿಚಾರ ಮುಂದಿಟ್ಟು ಪ್ರಚಾರ ಪಡೆಯುವ ಗೀಳು ನನಗಿರಲಿಲ್ಲ. ಅಂದು ಇಲ್ಲದವರು ಈಗ ಈ ಸೌಲಭ್ಯದ ಬಗ್ಗೆ ಹೇಳಿಕೊಂಡು, ಕಾಂಗ್ರೆಸ್ ಹೆಸರಲ್ಲಿ ಹಗಲೊಂದು, ರಾತ್ರಿಯೊಂದು ಪಕ್ಷ ಮಾಡುತ್ತಿದ್ದಾರೆ ಎಂದು ದೂರಿದರು.ಅಭ್ಯರ್ಥಿ ಕೆ.ಸಿ. ಕೊಂಡಯ್ಯ ಮಾತನಾಡಿ ನನ್ನ 26 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ಕಪ್ಪುಚುಕ್ಕೆ ಇಲ್ಲದೇ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಗ್ರಾಮ ಪಂಚಾಯಿತಿ ಸದಸ್ಯರಿಗೂ ಸ್ಥಾನಮಾನ ದೊರಕಿಸಿಕೊಡುವ ನಿಟ್ಟಿನಲ್ಲಿ ನಿರಂತರ ಹೋರಾಟ ಮಾಡಿಕೊಂಡು ಬಂದಿದ್ದೇನೆ.ಗ್ರಾಮ ಪಂಚಾಯಿತಿ ಅಧಿಕಾರಿಗಳ ದಬ್ಬಾಳಿಕೆ ಮಟ್ಟಹಾಕಲು, ಅಭಿವೃದ್ಧಿಗಾಗಿ ಮತ ನೀಡುವ ಮೂಲಕ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು. ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಸೋಲುವ ಭೀತಿಯಿಂದಾಗಿ ಬಿಜೆಪಿ ನಾಯಕರು ಅಮಾಯಕ ಅಭ್ಯರ್ಥಿ ವೈ.ಎಂ. ಸತೀಶ್ ಅವರಿಂದ ಮತದಾರರಿಗೆ ₹ 50 ಸಾವಿರ ನೀಡುವ ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು. ಜಗಳೂರು ಮಾಜಿ ಶಾಸಕ ಎಚ್.ಪಿ.ರಾಜೇಶ್, ಮಾಜಿ ಶಾಸಕ ಅನಿಲ್ ಲಾಡ್, ಅಲ್ಲಂ ವೀರಭದ್ರಪ್ಪ ಮಾತನಾಡಿದರು. ಎಸ್ಟಿ ಘಟಕದ ರಾಜ್ಯಾಧ್ಯಕ್ಷ ಕೆ.ಪಿ. ಪಾಲಯ್ಯ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂ.ಪಿ. ವೀಣಾ, ಮುಖಂಡರಾದ ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ.ಲತಾಮಲ್ಲಿಕಾರ್ಜುನ್ , ಭೈರೇಶ್, ದೇವೇಂದ್ರಪ್ಪ, ಕೆ.ಎಂ. ಶಿವಕುಮಾರ್ ಸ್ವಾಮಿ, ಕಲ್ಲೇಶ್ ರಾಜ್ ಪಾಟೀಲ್, ಪಿ.ಟಿ. ಭರತ್, ಸಂಷೀರ್ ಅಹಮ್ಮದ್, ಯರಬಳ್ಳಿ ಉಮಾಪತಿ, ತಳವಾರ ಮಂಜಪ್ಪ,ಯುವ ಮುಖಂಡ ಯಶವಂತ ಗೌಡ, ಇತರರು ಇದ್ದರು.