ನನ್ನ ವ್ಯಕ್ತಿತ್ವ ಮಾರಿಕೊಂಡಿಲ್ಲ

ವಿಜಯಪುರ.ಫೆ೧೪: ನಾನು ಯಾವುದೇ ಪಕ್ಷದಿಂದ ಅಭ್ಯರ್ಥಿಯಾಗಿ ನಿಂತರೂ ಸಹ ನನ್ನನ್ನು ನಾನು ಯಾವುದೇ ಪಕ್ಷಕ್ಕೆ ಮಾರಾಟ ಮಾಡಿಕೊಂಡವನಲ್ಲ ಶಿಕ್ಷಕರು, ವಿದ್ಯಾರ್ಥಿಗಳು, ಶಿಕ್ಷಣ ಸಂಸ್ಥೆಗಳಿಗೆ ಯಾವಾಗಲೂ ಯಾವುದೇ ತೊಂದರೆಯಾದಲ್ಲಿ ನಾನು ಮುಂಚೂಣಿಯಲ್ಲಿ ನಿಂತು ಅವರುಗಳಿಗೆ ನ್ಯಾಯ ದೊರಕಿಸಿ ಕೊಡುವ ಕೆಲಸವನ್ನು ಕಳೆದ ೨೦ ವರ್ಷಗಳಿಂದಲೂ ಮಾಡಿಕೊಂಡು ಬಂದಿರುತ್ತೇನೆ ಎಂದು ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪುಟ್ಟಣ್ಣ ರವರು ತಿಳಿಸಿದರು. ಅವರು ಇಲ್ಲಿನ ಗಿರಿಜಾ ಶಂಕರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಶಿಕ್ಷಕರ ಸಮಾವೇಶದಲ್ಲಿ ಮಾತನಾಡುತ್ತಿದ್ದರು.
ಪ್ರತಿಯೊಬ್ಬ ಶಿಕ್ಷಕರು ಸ್ವಾಭಿಮಾನ ದಿಂದ ಬದುಕುವ ಕೆಲಸ ಮಾಡಿದ್ದೇನೆ ಇವತ್ತು ಯಾರಲ್ಲಿಯೂ ಒಂದು ನ್ಯಾಯ ಪೈಸೆ ತಾವು ಪಡೆದುಕೊಂಡಿರುವುದಿಲ್ಲವೆಂದು, ಪವಿತ್ರವಾದ ಶಿಕ್ಷಕರ ಕ್ಷೇತ್ರದಿಂದ ಈಗಾಗಲೇ ಐದು ಬಾರಿ ಗೆದ್ದಿದ್ದು ತಾವು ಉತ್ತಮವಾಗಿ ಶಿಕ್ಷಣ ಕ್ಷೇತ್ರದ ಪರವಾಗಿ ಕರ್ತವ್ಯ ನಿರ್ವಹಿಸಿದ್ದರೆ ತಮ್ಮ ಮತ ನನಗೆ ನೀಡಬೇಕೆಂದು ಪ್ರಾರ್ಥಿಸಿದರು.
ಅತಿ ಕಷ್ಟಕರವಾದಂತಹ ಕರೋನ ಸಂದರ್ಭದಲ್ಲಿಯೂ ಸರ್ಕಾರದಿಂದ ಖಾಸಗಿ ಶಾಲಾ ಶಿಕ್ಷಕರ ಗಳಿಗೆ ೧೦೩ ಕೋಟಿ ಹಣ ಬಿಡುಗಡೆ ಮಾಡಿಸಿರುವುದರೊಂದಿಗೆ ಅದನ್ನು ವಿತರಿಸಿ, ೬೫೦೦ ಕ್ಕೂ ಹೆಚ್ಚು ಫುಡ್ ಕಿಟ್‌ಗಳನ್ನು ಈ ಭಾಗದಲ್ಲಿ ವಿತರಿಸಿ, ಯಾವುದೇ ಕಾರಣಕ್ಕೂ ಯಾವುದೇ ಶಿಕ್ಷಕರುಗಳಿಗೆ ಫುಡ್ ಕಿಟ್ ನೀಡುವ ಫೋಟೋ ತೆಗೆಯಬಾರದೆಂದು ನಿರ್ದೇಶನ ನೀಡಿದ್ದಾಗಿ ತಿಳಿಸಿದರು.
ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶಶಿಕುಮಾರ್ ರವರು ಮಾತನಾಡಿ ಪುಟ್ಟಣ್ಣ ರವರು ನೇರ, ನಿಷ್ಠುರವಾದಿಯಾಗಿ ಮಾತನಾಡುವುದರೊಂದಿಗೆ, ಬದ್ಧತೆಯಿಂದ ಶಿಕ್ಷಣ ಕ್ಷೇತ್ರದಲ್ಲಿ ಹೋರಾಡಬಲ್ಲಂತಹ ವ್ಯಕ್ತಿಯಾಗಿದ್ದು, ಎಲ್ಲಾ ಶಿಕ್ಷಕರು ತಮ್ಮ ಪ್ರಾಶಸ್ತ ಮತವನ್ನು ಒಂದು ಸಂಖ್ಯೆ ಎಳೆಯುವ ಮೂಲಕ ಪುಟ್ಟಣ್ಣನವರಿಗೆ ಮತ ನೀಡಬೇಕೆಂದು ಯಾವುದೇ ಮತವು ಕುಲಗೆಡದಂತೆ ನೋಡಿಕೊಳ್ಳಬೇಕೆಂದು ತಿಳಿಸಿದರು.
ಪ್ರಗತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಎಂ.ಸತೀಶ್ ಕುಮಾರ್‌ರವರು ಮಾತನಾಡಿ, ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರಕಾರವು ನೀಡುತ್ತಿರುವ ಹಿಂಸೆಗಳಿಂದ ಹತ್ತು-ಹಲವು ರೀತಿಗಳಲ್ಲಿ ಹೊರಬರಲು ಪುಟ್ಟಣ್ಣರವರಂತಹ ಶಿಕ್ಷಣ ಹಾಗೂ ಶಿಕ್ಷಕ ಪ್ರೇಮಿ ಇರುವುದರಿಂದ ಸಾಧ್ಯವಾಗಿದ್ದು, ಎಲ್ಲಾ ಶಿಕ್ಷಕರುಗಳು ಒಗ್ಗಟ್ಟಾಗಿ ಪುಟ್ಟಣ್ಣರವರಿಗೆ ತಮ್ಮ ಪ್ರಾಶಸ್ತ್ಯ ಮತವನ್ನು ನೀಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಹಾಗೂ ಸಂಸ್ಥೆಗಳ ಮುಖ್ಯಸ್ಥರುಗಳು ಭಾಗವಹಿಸಿದ್ದರು.