ನನ್ನ ವಿರುದ್ಧ ಷಡ್ಯಂತ್ರ: ಸಂಸದ ಪ್ರತಾಪಸಿಂಹ ಆರೋಪ

ಸಂಜೆವಾಣಿ ನ್ಯೂಸ್
ಮೈಸೂರು: ಡಿ.28:- ನನ್ನ ವಿರುದ್ಧ ರಾಜಕೀಯ ಪಿತೂರಿ ನಡೆಯುತ್ತಿದೆ. ಮುಖ್ಯಮಂತ್ರಿಗಳು ಮೈಸೂರು ಜಿಲ್ಲೆಯವರಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಎಂಪಿ ಸ್ಥಾನ ಸೋತರೆ ಅವರ ಮುಖ್ಯಮಂತ್ರಿ ಸ್ಥಾನ ಅಲುಗಾಡುತ್ತದೆ. ಹೀಗಾಗಿ ವ್ಯವಸ್ಥಿತವಾಗಿ ನನ್ನ ಮೇಲೆ ಪಿತೂರಿ ಮಾಡುತ್ತಿದ್ದಾರೆ ಎಂದು ಸಂಸದ ಪ್ರತಾಪಸಿಂಹ ಕಿಡಿ ಕಾರಿದರು.
ಸಿಎಂ ಸಿದ್ದರಾಮಯ್ಯ ಅವರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟಿಸಿ, ಎಫ್‍ಐಆರ್ ದಾಖಲಿಸಿದ ಹಿನ್ನೆಲೆಯಲ್ಲಿ ಪ್ರತಾಪಸಿಂಹ ಫೇಸ್‍ಬುಕ್ ಲೈವ್‍ನಲ್ಲಿ ತಿರುಗೇಟು ನೀಡಿದರು. ನಾನು ಎಲ್ಲರಂತೆ ಸೋಮಾರಿ ಸಿದ್ದನ ರೀತಿ ಕೂತಿಲ್ಲ. ಜಾತಿ ರಾಜಕಾರಣ ಮಾಡದೆ ಅಭಿವೃದ್ಧಿ ರಾಜಕಾರಣ ಮಾಡಿದ್ದೇನೆ ಎಂದು ಹೇಳಿದ್ದೇನೆ. ಈ ಬಗ್ಗೆ ಕಾಂಗ್ರೆಸ್‍ನವರಿಗೆ ರಾತ್ರಿ 8 ಗಂಟೆ ಮೇಲೆ ಜ್ಞಾನೋದಯ ಆಗಿದೆ. ನಂತರ ರಸ್ತೆ ತಡೆ ಮಾಡಿ ಪ್ರತಿಭಟಿಸಿದ್ದಾರೆ. ನಾನು ಸೋಮಾರಿ ಸಿದ್ಧ ಎನ್ನುವ ಪದವನ್ನು ಸಿದ್ದರಾಮಯ್ಯ ಅವರಿಗೆ ಬಳಸಿದ್ದೇನೆ ಎಂದು ತಿರುಚಲಾಗಿದೆ ಎಂದರು.
ಸೋಮಾರಿ ಸಿದ್ದ ಎಂಬ ಪದವನ್ನು ವ್ಯಕ್ತಿ ನಿರ್ದಿಷ್ಟವಾಗಿ ಬಳಸಿಲ್ಲ. ಸಿದ್ದರಾಮಯ್ಯ ಅವರ ಮೇಲೆ ಗೌರವವಿದೆ. ಆದರೆ, ಅವರು ಮೈಸೂರು ಮಹಾರಾಜರು, ಪ್ರಧಾನಿ ಮೋದಿ ಅವರನ್ನೂ ಏಕವಚನದಲ್ಲೇ ಕರೆಯುತ್ತಾರೆ. ಅವರೇ ಸಭ್ಯ ಭಾಷೆ ಬಳಸಿ ಮೇಲ್ಪಂಕ್ತಿ ಹಾಕಿಕೊಡಲಿ ಎಂದು ತಿರುಗೇಟು ನೀಡಿದರು.
ಆಡುಮಾತಿನಲ್ಲಿ ಸೋಮಾರಿ ಸಿದ್ದ, ಉಂಡಾಡಿಗುಂಡ, ಖಾಲಿಪೀಲಿ ಎಂತೆಲ್ಲ ಹೇಳುತ್ತೇವೆ. ಆ ತರಹವೇ, ನಾನೂ ಒಂದು ಪರಿಸ್ಥಿತಿಯ ಗುಣ ಸೂಚಿಸಲು ಬಳಸಿದ್ದೇನೆ. ವೈಯಕ್ತಿಕವಾಗಿಯಲ್ಲ. ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯಾರೇ ಹಿರಿಯರು ಸಿಕ್ಕಿದರೂ ಕೊಡಗಿನ ಸಂಸ್ಕೃತಿಗೆ ಪೂರಕವಾಗಿಯೇ ಕಾಲಿಗೆ ನಮಸ್ಕಾರ ಮಾಡುತ್ತೇನೆ. ಆದರೆ, ಸಿದ್ದರಾಮಯ್ಯ ಅವರು ದೇವೇಗೌಡ, ಯಡಿಯೂರಪ್ಪ ಅವರನ್ನು ಏಕವಚನದಲ್ಲೇ ತುಚ್ಛವಾಗಿ ಮಾತನಾಡುತ್ತಾರೆ. 2006ರ ಮೊದಲು ಸೋನಿಯಾ ಗಾಂಧಿ ಅವರನ್ನು ಅವಳು, ಇವಳು ಎಂದೆಲ್ಲ ಹೇಳಿದ್ದಾರೆ ಎಂದರು.
ಸೋಮಾರಿ ಎಂದು ಬಳಸಿದ ಕೂಡಲೇ ಕಾಂಗ್ರೆಸ್ಸಿಗರಿಗೆ ಜ್ಞಾನೋದಯವಾಗಿ ನನ್ನ ಹೇಳಿಕೆ ತಿರುಚುವ ಪ್ರಯತ್ನ ನಡೆಸಿದ್ದರು. ಸಿದ್ದರಾಮಯ್ಯ ಅವರೇ ನಿಮ್ಮ ಬಾಲಬಡುಕರು ನಿಮ್ಮನ್ನು ಮೆಚ್ಚಿಸಲು ಮುಂದಾಗಿದ್ದಾರೆ. ನನ್ನ ವಿರುದ್ಧದ ಅಭ್ಯರ್ಥಿ ಯಾರೆಂದು ಘೋಷಿಸಿ, ನಿಗಮ ಮಂಡಳಿಗೆ ನೇಮಕ ಮಾಡಿ ಪುನರ್ವಸತಿ ಕಲ್ಪಿಸಿಬಿಡಿ. ಆಗಲಾದರೂ ಅವರು ಬೊಬ್ಬೆ ಹಾಕುವುದು ನಿಲ್ಲುತ್ತದೆ ಎಂದು ಹರಿಹಾಯ್ದರು.
ಪ್ರತಾಪಸಿಂಹ ನಾಡಗಳ್ಳ, ಅವನ ತಮ್ಮ ಕಾಡುಗಳ್ಳ ಎಂದು ಕೆಪಿಸಿಸಿ ಪೆÇೀಸ್ಟ್‍ನಲ್ಲಿ ಹಾಕಲಾಗಿದೆ. ನನ್ನ ಮೇಲೆ ಕಲ್ಲನ್ನು ಬೀಸಿದರೆ ಮಾವು ನೀಡುವವ ನಾನಲ್ಲ. ನಾನೂ ಕಲ್ಲನ್ನೇ ವಾಪಸ್ ಬೀಸುತ್ತೇನೆ. ವೈಯಕ್ತಿಕ ದಾಳಿ ಬಿಟ್ಟು ನೇರ ರಾಜಕಾರಣ ಮಾಡಿ. ನನ್ನ ಸೋದರ ಮರಕಡಿದಿದ್ದರೆ ತನಿಖೆಗೆ ಸಚಿವ ಈಶ್ವರ ಖಂಡ್ರೆ ಅವರನ್ನೂ ಕಳುಹಿಸಿ ಎಂದು ಪ್ರತಿಕ್ರಿಯಿಸಿದರು.