ನನ್ನ ರಾಜಕೀಯ ಜೀವನದಲ್ಲಿ ಯಾವತ್ತು ಗಿಮಿಕ್ ಮಾಡಿಲ್ಲ:ಜಾಧವ

ಅಫಜಲಪುರ:ಸೆ.15: ನನ್ನ ರಾಜಕೀಯ ಜೀವನದಲ್ಲಿ ಯಾವತ್ತು ಸಹ ಗಿಮಿಕ್ ಮಾಡಿಲ್ಲ ಆದರೆ ಕಾಂಗ್ರೆಸ್ ನವರು ನನ್ನ ಮೇಲೆ ಸುಳ್ಳು ಆರೋಪವನ್ನು ಮಾಡಿ ಅಧರ್ಮದಿಂದ ಚುನಾವಣೆ ಗೆಲ್ಲಲು ಪ್ರಯತ್ನ ಮಾಡುತ್ತಿದ್ದಾರೆ.ಇದು ಎಂದಿಗೂ ಸಾಧ್ಯವಿಲ್ಲ ಎಂದು ಸಂಸದ ಡಾ.ಉಮೇಶ್ ಜಾಧವ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ತಿರುಗೇಟು ನೀಡಿದರು.ತಾಲೂಕಿನ ರೇವೂರ(ಬಿ) ಗ್ರಾಮದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಮಾತನಾಡಿದ ಅವರು ಕಳೆದ ಕೋವಿಡ್ ಹಾಗೂ ಪ್ರವಾಹ ಸಂದರ್ಭದಲ್ಲಿ ಸಾಕಷ್ಟು ಬಾರಿ ಈ ಕ್ಷೇತ್ರಕ್ಕೆ ಬಂದಿದ್ದೇನೆ.ಅಫಜಲಪುರ ಪಟ್ಟಣದ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲದಿದ್ದಾಗ ಸಿಲಿಂಡರ್ ತಂದು ರೋಗಿಗಳ ಜೀವವನ್ನು ಉಳಿಸಿದ್ದೇವೆ.ನೀಲೂರ ಬ್ರಿಜ್ ಸಲುವಾಗಿ ಹತ್ತಾರು ವರ್ಷಗಳಿಂದ ಅಲ್ಲಿನ ಜನರು ಹೋರಾಟ ನಡೆಸುತ್ತಿದ್ದರು ಆದರೆ ನಾನು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಅದನ್ನು ಮಂಜೂರು ಮಾಡಿಸಿದ್ದೇನೆ.ರೈತರು ಬೆಳೆದ ಹಣ್ಣು ಹಾಗೂ ತರಕಾರಿಗಳು ಬೆಲೆ ಇಲ್ಲದೆ ರಸ್ತೆ ಮೇಲೆ ಬೀಳುತ್ತಿದ್ದವು ಇದನ್ನು ಗಮನಿಸಿ ಕಲ್ಯಾಣ ಕರ್ನಾಟಕ ಭಾಗದಲ್ಲೇ ಮೊದಲ ಬಾರಿಗೆ ಕಲಬುರಗಿ ನಗರದಲ್ಲಿ ಬೃಹತ್ ಕೋಲ್ಡ್ ಸ್ಟೋರೇಜ್ ಸ್ಥಾಪನೆ ನಡೆದಿದೆ.ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾಳಾಗಿರುವ ಬೆಳೆಗಳಿಗೆ ಕೇಂದ್ರ ಸರ್ಕಾರ ವತಿಯಿಂದ ಪ್ರತಿ ಹೆಕ್ಟೇರ್ 6800 ರೂ. ಪರಿಹಾರ ವಿತರಣೆ ನಡೆಯುತ್ತಿದೆ.ಪ್ರತಿ ವರ್ಷ ರೈತರ ಖಾತೆಗಳಿಗೆ ಕೇಂದ್ರ ಸರ್ಕಾರದಿಂದ 6 ಸಾವಿರ ರೂ.ರಾಜ್ಯ ಸರ್ಕಾರದಿಂದ 4 ಸಾವಿರ ರೂ.ಜಮಾ ಮಾಡಲಾಗುತ್ತಿದೆ.15ನೇ ಹಣಕಾಸು ಜಾರಿಗೆ ತಂದಿದ್ದು ಕೇಂದ್ರ ಸರ್ಕಾರ ಇದರಿಂದ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.ಕೋವಿಡ್ ಸಂದರ್ಭದಲ್ಲಿ ಲಸಿಕೆ ಹಾಕಿಕೊಳ್ಳಬೇಡಿ ಎಂದು ಹೇಳುವ ಕಾಂಗ್ರೆಸ್ ನವರು ನಂತರದ ದಿನಗಳಲ್ಲಿ ಅವರೇ ಖುದ್ದಾಗಿ ಲಸಿಕೆ ಹಾಕಿಕೊಂಡಿದ್ದಾರೆ.ವಿಶ್ವದಲ್ಲಿಯೇ 75 ದೇಶಗಳಿಗೆ ಭಾರತ ದೇಶದಿಂದ ಕೋವಿಡ್ ಲಸಿಕೆ ರಫ್ತು ಮಾಡಲಾಗಿದೆ.ಈ ಕ್ಷೇತ್ರದಲ್ಲಿ ನನಗೆ 36 ಸಾವಿರ ಮತಗಳ ಮುನ್ನಡೆಯನ್ನು ನೀಡಿದೆ.ಹೀಗಾಗಿ ನನ್ನ ಏಳು ಜನ್ಮದಲ್ಲೂ ಸಹ ಈ ಋಣವನ್ನು ತೀರಿಸಲು ಸಾಧ್ಯವಾಗುವುದಿಲ್ಲ.ಈ ಹಿಂದೆ ಇರುವ ಸಂಸದರು ಯಾವ ಬಡ ಜನರ ಕೈಗೂ ಸಿಗುತ್ತಿರಲಿಲ್ಲ ಆದರೆ ನಾನು ನಿಮ್ಮ ಮಧ್ಯೆ ಇದ್ದು ನನ್ನ ಕೈಲಾದಷ್ಟು ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಮಾಜಿ ಸಚಿವ ಮಾಲಿಕಯ್ಯಾ ಗುತ್ತೇದಾರ್ ಮಾತನಾಡಿ ಶಾಸಕ ಎಂ.ವೈ.ಪಾಟೀಲ್ ಪುತ್ರ ಅರುಣಕುಮಾರ ಪಾಟೀಲ್ ಪಿಎ??? ಹಗರಣದಲ್ಲಿ ನೇರವಾಗಿ ಭಾಗಿಯಾಗಿ ತಮ್ಮ ಗನ್ ಮ್ಯಾನ್ ನೇಮಕಗೊಳ್ಳುವಂತೆ ಡೀಲ್ ಕುದುರಿಸಿದ್ದರು.ಆದರೆ ಇವತ್ತು ಅದನ್ನು ಸಹ ತನಿಖೆಯಲ್ಲಿ ಬೆಳಕಿಗೆ ಬಂದಿದೆ.ಹೀಗಿರುವಾಗ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ನಮ್ಮ ಸಂಸದರ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ.ಶಾಸಕರು ಒಂದು ಕಾಮಗಾರಿಗೆ ಎರಡೆರಡು ಬಾರಿ ಬಿಲ್ ಪಡೆಯುವಂತೆ ಗುತ್ತಿಗೆದಾರರಿಗೆ ಸಹಕರಿಸಿರುವ ಸಂಪೂರ್ಣ ಮಾಹಿತಿ ಇದೆ.ನಾನು ಸಹ ಕಳೆದ ಅವಧಿಯಲ್ಲಿ ಕ್ಷೇತ್ರಕ್ಕೆ 2 ಸಾವಿರ ಕೋಟಿ ರೂ. ಅನುದಾನ ತಂದಿದ್ದೇನೆ.ಅದರಲ್ಲಿ ಒಂದೇ ಒಂದು ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದ್ದರೆ ರಾಜಕೀಯ ಜೀವನದಿಂದ ನಿವೃತ್ತಿಯಾಗುತ್ತೇನೆ. ಬೇಕಿದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಕಾಂಗ್ರೆಸ್ ಮುಖಂಡರಿಗೆ ಸವಾಲ್ ಹಾಕಿ ಆಹ್ವಾನ ನೀಡಿದರು.ನಾವು ಬಡಜನರ ಸೇವೆ ಮಾಡಲು ಬಂದಿದ್ದೇವೆ ನಿಮ್ಮ ಹಾಗೆ ಕೀಳುಮಟ್ಟದ ರಾಜಕೀಯ ಮಾಡಲು ಬಂದಿಲ್ಲ.ಕಳೆದ ಸಮಿಶ್ರ ಸರ್ಕಾರದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಅನುದಾನ ನೀಡದೆ ನಿರ್ಲಕ್ಷ ತೋರಿದರು.ಆದರೆ ನಮ್ಮ ಸರ್ಕಾರ ಬಂದ ನಂತರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 3 ಸಾವಿರ ಕೋಟಿ ರೂ.ಅನುದಾನ ನೀಡಿ ಅಭಿವೃದ್ಧಿಗೆ ಸಹಕರಿಸಿದ್ದಾರೆ.ಶಾಸಕ ಎಂ.ವೈ.ಪಾಟೀಲ್ ಅವರು ಬಡದಾಳ ಗ್ರಾಮಕ್ಕೆ ಹೋಗುವ 4 ಪ್ರಮುಖ ರಸ್ತೆಗಳು ಇದ್ದರೂ ಸಹ ಒಂದೇ ಒಂದು ರಸ್ತೆ ಅಭಿವೃದ್ಧಿ ಮಾಡಿಲ್ಲ. ಹೀಗಿರುವಾಗ ಸಂಸದರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನವರಿಗೆ ಇಲ್ಲ.ಇವತ್ತು ಕೇಂದ್ರ ಸರ್ಕಾರ ಚವಡಾಪುರ,ಅಫಜಲಪುರ,ಬಳೂರ್ಗಿ ರಿಂಗ್ ರೋಡ್ ಕಾಮಗಾರಿಗೆ ಸರ್ಕಾರ ಅನುಮತಿ ನೀಡಿದೆ.ಇದೇ ರೀತಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಮ್ಮ ಸರಕಾರ ಕೈಗೊಂಡಿದೆ.ಅಧಿಕಾರಿಗಳು ಶಾಸಕರ ಮಾತು ಕೇಳಿ ಬೋಗಸ್ ಬಿಲ್ ಮಾಡಿದ್ದೆ ಆದರೆ ನಿಮ್ಮ ತೆಲೆದಂಡಾಗುತ್ತದೆ ಹೀಗಾಗಿ ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿ ನಿಮ್ಮ ಹಿಂದೆ ನಮ್ಮ ಸರ್ಕಾರಿ ಇದೆ.ಯಾರು ಏನು ಮಾಡುತ್ತಾರೆ ನೋಡೇ ಬಿಡೋಣ ಎಂದು ಅಧಿಕಾರಿಗಳಿಗೆ ಆತ್ಮಸ್ಥೈರ್ಯ ತುಂಬಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಸಂಜೀವಕುಮಾರ ದಾಸರ,ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಪಿ, ಸಹಾಯಕ ಕೃಷಿ ನಿರ್ದೇಶಕ ಎಚ್.ಎಸ್.ಗಡಗೀಮನಿ, ಸಹಾಯಕ ತೋಟಗಾರಿಕೆ ನಿರ್ದೇಶಕ ಸುರೇಂದ್ರನಾಥ ಹೊನ್ನಪ್ಪಗೋಳ, ಲೋಕೋಪಯೋಗಿ ಎಇಇ ಹೊನ್ನೇಶ ಅಳ್ಳಗಿ,ಪಶು ಸಂಗೋಪನಾ ಇಲಾಖೆ ಅಧಿಕಾರಿ ಕೆ.ಎಂ.ಕೋಟೆ, ಜೆಸ್ಕಾಂ ಎಇಇ ಸಂಜೀವಕುಮಾರ್ ಚವ್ಹಾಣ, ಮುಖಂಡರಾದ ಗುರು ಸಾಲಿಮಠ, ದೇವಿಂದ್ರ ಜಮಾದಾರ, ಸುಭಾಷಚಂದ್ರ ರಾಠೋಡ್, ಚಂದಮ್ಮ ಪಾಟೀಲ್,ರಮೇಶ ದುತ್ತರಗಿ,ದತ್ತಾತ್ರೇಯ ದೇವರನಾದಗಿ,ಗಿರೀಶ್ ಚಕ್ರೆ,ಸರಳಾ ದೊಡ್ಮನಿ, ಬಸಮ್ಮ ಗುತ್ತೇದಾರ,ನಬಿಲಾಲ ಮಾಶಾಳಕರ,ಆಂಜನೇಯ ಕುಲಕರ್ಣಿ,ಮೋತಿರಾಮ ರಾಠೋಡ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.ದೇವಲ ಗಾಣಗಾಪುರ,ತೆಲ್ಲೂರ,ಆನೂರ,ದೇಸಾಯಿ ಕಲ್ಲೂರ,ಘತ್ತರಗಾ,ಬಳೂರ್ಗಿ,ಬಡದಾಳ ಗ್ರಾಪಂ ಕೇಂದ್ರ ಸ್ಥಾನಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಿದರು.