
ಸಂಜೆವಾಣಿ ವಾರ್ತೆ
ಶಿವಮೊಗ್ಗ, ಆ.೧೨; ಭಾರತ ಸರ್ಕಾರದ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಶಿವಮೊಗ್ಗ ಇವರ ವತಿಯಿಂದ 75 ನೇ ಸ್ವಾತಂತ್ರ್ಯೋತ್ಸವದ ಮುಕ್ತಾಯದ ಅಂಗವಾಗಿ ದೇಶಾದ್ಯಂತ ಏರ್ಪಡಿಸಲಾಗಿರುವ ‘ಮೇರಿ ಮಾಟಿ ಮೇರಾ ದೇಶ್’ – ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮದ ಪ್ರಯುಕ್ತ ಸಾಗರ ರಸ್ತೆಯ ಅಪ್ಪರ್ ತುಂಗಾ ಚಾನಲ್ ಪ್ರದೇಶದಲ್ಲಿ ಗಿಡಗಳನ್ನು ನೆಡಲಾಯಿತು ಹಾಗೂ ಮಾಜಿ ಸೈನಿಕರನ್ನು ಗೌರವಿಸಲಾಯಿತು.ಈ ಕಾರ್ಯಕ್ರಮವು ಆ.9 ರಿಂದ 15 ರವರೆಗೆ ಜಿಲ್ಲೆಯ ಎಲ್ಲಾ ಗ್ರಾ.ಪಂ ವ್ಯಾಪ್ತಿಯಲ್ಲಿ ನಡೆಯುತ್ತಿದ್ದು, ಕಾರ್ಯಕ್ರಮದಲ್ಲಿ 75 ಸಸಿಗಳನ್ನು ನೆಡುವುದು, ಸ್ವಾತಂತ್ರ್ಯ ಹೋರಾಟಗಾರರು/ಸೇನೆಯಲ್ಲಿ ನಿವೃತ್ತಿ ಹೊಂದಿರುವ ಯೋಧರಿಂದ ಗಿಡ ನೆಡಿಸುವುದು ಹಾಗೂ ಅವರನ್ನು ಸನ್ಮಾನಿಸಲಾಗುತ್ತಿದೆ.ಇಂದಿನ ಕಾರ್ಯಕ್ರಮವು ಜಿಲ್ಲಾಡಳಿತ, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಓಪನ್ ಮೈಂಡ್ ಸ್ಕೂಲ್ ಮತ್ತು ಡಿವಿಎಸ್ ಕಾಲೇಜ್ ಇವರ ಸಂಯುಕ್ತಾಶ್ರಯದಲ್ಲಿ ಜರುಗಿತು.ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು, ವಿದ್ಯಾರ್ಥಿಗಳು, ಯುವ ಕಾರ್ಯಕರ್ತರು ಮತ್ತು ರಾಷ್ಟ್ರೀಯ ಸೇವಾ ಯೋಜನೆ ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಒಟ್ಟು 75 ಗಿಡಗಳನ್ನು ನೆಡಲಾಯಿತು.ಜಿಲ್ಲಾ ಯುವ ಅಧಿಕಾರಿ ಕೆಟಿಕೆ ಉಲ್ಲಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ಮಾನ್ಯ ಪ್ರಧಾನ ಮಂತ್ರಿಗಳು ಭಾರತದ 75 ನೆಯ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಹರ್ ಘರ್ ತಿರಂಗಾ ಎಂಬ ಅಭಿಯಾನವನ್ನು ಮತ್ತು ಪಂಚಪ್ರಾಣ ಪ್ರತಿಜ್ಞೆಯನ್ನು ಯಶಸ್ವಿಯಾಗಿ ನೆರವೇರಿಸಿದ್ದಾರೆ. 76ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮೇರಿ ಮಿಟ್ಟಿ ಮೇರಾ ದೇಶ್ ಎಂಬ ಅಭಿಯಾನವನ್ನು ದೇಶದ ಹುತಾತ್ಮ ವೀರ ಯೋಧರಿಗೆ ಗೌರವವಿಸುವ ಉದ್ದೇಶದಿಂದ ಜಾರಿ ಮಾಡಿರುವ ಬಗ್ಗೆ ಮಾಹಿತಿ ನೀಡಿದರು.ಇದೇ ವೇಳೆ ಮಾಜಿ ಸೈನಿಕರಾದ ಜಗನ್ನಾಥ, ಜೆ.ರಾಮಕೃಷ್ಣ, ನಾಗರಾಜ.ಎಸ್.ಎನ್, ಮೇಜರ್ ಉದಯ ಕೆ.ಎಸ್, ಹವಾಲ್ದಾರ್ ಮತ್ತು ಸತ್ಯನಾರಾಯಣ ಇವರನ್ನು ಸನ್ಮಾನಿಸಲಾಯಿತು. ಹಾಗೂ ಪಂಚಪ್ರಾಣ್ ಪ್ರತಿಜ್ಞೆಯನ್ನು ಬೋಧಿಸಲಾಯಿತು.ಕಾರ್ಯಕ್ರಮದಲ್ಲಿ ಪರಿಸರ ಆಸಕ್ತರಾದ ಬಾಲಕೃಷ್ಣ, ಡಿ. ವಿ.ಎಸ್ ಕಾಲೇಜಿನ ಎನ್.ಎಸ್ .ಎಸ್ ಅಧಿಕಾರಿಗಳಾದ ಮಲ್ಲಿಕಾರ್ಜುನ ಮತ್ತು ಶಿವಶಂಕರ್, ಓಪನ್ ಮೈಂಡ್ ಶಾಲೆಯ ಸದಸ್ಯರಾದ ಶ್ರೀಮತಿ. ಮಮತ, ಯುವ ಕಾರ್ಯಕರ್ತರು, ವಿದ್ಯಾರ್ಥಿಗಳು, ಮಾಜಿ ಸೈನಿಕರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು.