ನನ್ನ  ಬಾನೆತ್ತರದ ಗಾಳಿಪಟದ ಸೂತ್ರ ಜನತೆ ಕೈಯಲ್ಲಿ
 ಬಳ್ಳಾರಿ ಉತ್ಸವದಲ್ಲಿ ಶ್ರೀರಾಮುಲು ಅನಿಸಿಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜ.22: ಶ್ರೀರಾಮುಲು ಎಂಬ ಗಾಳಿಪಟವನ್ನು ಬಳ್ಳಾರಿ ಜನರು  ಉತ್ತಂಗಕ್ಕೆ ಏರಿಸಿದ್ದಾರೆ. ಬಾನಲ್ಲಿ ಹಾರಾಡುತ್ತಿರುವ ನನ್ನ ಸೂತ್ರ ಬಳ್ಳಾರಿ ಜನತೆ ಕೈಯಲ್ಲಿದೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ಅವರು ನಿನ್ನೆ ಸಂಜೆ ಪ್ರಥವಮಾಗಿ ನಗರದ ಮುನಿಷಿಪಲ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಬಳ್ಳಾರಿ ಉತ್ಸವಕ್ಕೆ ರಾಘವ ವೇದಿಕೆಯಲ್ಲಿ ಚಾಲನೆ ನೀಡಿ ಮಾತನಾಡುತ್ತಿದ್ದರು.
ಬಳ್ಳಾರಿ ಜನತೆ ನನಗೆ ರಾಜಕೀಯವಾಗಿ ನನಗೆ ಪುನರ್ಜನ್ಮ ನೀಡಿದ್ದೀರಿ. ನಾಯಕ ಜನಾಂಗದಲ್ಲಿ ಹುಟ್ಟಿದ ನಾನು ಎಲ್ಲಾ ಜನಾಂಗದ ಪ್ರೀತಿ ಅಭಿಮಾನಗಳಿಸಿದ್ದೇನೆ. ಬಳ್ಳಾರಿ ಜಿಲ್ಲೆ ಋಣ ತೀರಿಸುವ ಕೆಲಸ ಮಾಡುತ್ತೇನೆ.  ಜಿಲ್ಲೆಯ ವಿಭಜನೆಯ ನಂತರ                  
ಮೊದಲ ಬಾರಿಗೆ  ಆಯೋಜಿಸಲಾಗಿರುವ ಬಳ್ಳಾರಿ ಉತ್ಸವವನ್ನು ನಾಡ ಹಬ್ಬವಾಗಿ ಶಾಶ್ವತವಾಗಿ ಹಮ್ಮಿಕೊಳ್ಳಲಿದೆಂದ ಅವರು ಈ  ಉತ್ಸವದ ರಥವನ್ನು ಮುಂದಿನ ದಿನಗಳಲ್ಲಿಯೂ ಮುನ್ನಡೆಸಬೇಕೆಂದರು.
ನಾಡಿನ ಹಂಪಿ ಕದಂಬ, ಲಕ್ಕುಂಡಿ, ಚಾಲುಕ್ಯ, ಧಾರವಾಡ ಉತ್ಸವದ ಸಾಲಿಗೆ ಬಳ್ಳಾರಿ ಉತ್ಸವ ಸೇರಿದೆ.  ಹಂಡೆ ಹನುಮಪ್ಪ ನಾಯಕ ಉಕ್ಕಿನಂಥ ಕೋಟೆಯನ್ನು ಬಳ್ಳಾರಿಯಲ್ಲಿ ನಿರ್ಮಿಸಿದ್ದಾರೆ. ರಾಜ್ಯದಲ್ಲಿ ಮಾತ್ರವಲ್ಲ ದೇಶದ ಭೂಪಟದಲ್ಲಿ ಬಳ್ಳಾರಿ ಜಿಲ್ಲೆಯನ್ನು ಸುವರ್ಣ ಅಕ್ಷರದಲ್ಲಿ ಗುರುತಿಸಲಾಗುತ್ತಿದೆ. ಜಿಲ್ಲೆಯ ಕಲೆ ಹಾಗೂ ಸ್ವಾಭಿಮಾನದ ಪ್ರತೀಕವಾಗಿ ಬಳ್ಳಾರಿ ಉತ್ಸವ ಆಯೋಜಿಸಲಾಗಿದೆಂದರು.
ಜಿಲ್ಲೆಯ ಅಭಿವೃದ್ಧಿ ಬಗ್ಗೆ ವಿವರಿಸುತ್ತ. ಶತಮಾನದ ಇತಿಹಾಸ ಇರುವ  ಹಗರಿಯ ಕೃಷಿ ಸಂಶೋಧನ ಕೇಂದ್ರದಲ್ಲಿ ಬಳ್ಳಾರಿಯ ಕೃಷಿ ಪದವಿ  ಕಾಲೇಜಿಗೆ ರೂ.25. ಕೋಟಿ ಮಂಜೂರು ಮಾಡಲಾಗಿದೆ. ಜೀನ್ಸ್ ಉತ್ಪಾದನಾ ಉದ್ಯಮಕ್ಕೆ 50 ಎಕರೆ ಜಮೀನು ನೀಡಿ ಟೆಕ್ಸ್ ಟೈಲ್ ಪಾರ್ಕ್ ನಿರ್ಮಿಸಲು ಸರ್ಕಾರ ರೂ100 ಕೋಟಿ ಬಿಡುಗಡೆ ಮಾಡಲಾಗಿದೆ. 2008 ರಲ್ಲಿ ಪ್ರಾರಂಭಿಸಿದ ವಿಮಾನ ನಿಲ್ದಾಣ ಕಾಮಗಾರಿಗೆ ಹೆಚ್ಚುವರಿಯಾಗಿ 40 ಕೋಟಿ ನೀಡಿಲಾಗಿದೆ. ನಗರದಲ್ಲಿ 20 ಎಕರೆ ವಿಸ್ತೀರ್ಣ ಅಂತರಾಷ್ಟ್ರೀಯ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ. 23 ಎಕರೆ ಪ್ರದೇಶದಲ್ಲಿ   ಮೆಣಸಿನಕಾಯಿ ಮಾರುಕಟ್ಟೆ ಹಾಗೂ ಸಂಸ್ಕರಣಾ ಘಟಕ ನಿರ್ಮಿಸಲಾಗುತ್ತಿದೆ. ಒಲಂಪಿಕ್ ಕ್ರೀಡೆಗಳಲ್ಲಿ ಜಿಲ್ಲೆಯ ಕ್ರೀಡಾಪಟುಗಳಿಗೆ ತರಬೇತಿ ನೀಡಲು ಅನುಕೂಲವಾಗುವಂತೆ ಸಿಂಥಟಿಕ್ ಟ್ರಾಕ್ ನಿರ್ಮಿಸಲಾಗಿದೆ. ನಗರದಲ್ಲಿ ಹಾಕಿ ಕ್ರೀಡಾಂಗಣ ನಿರ್ಮಿಸಿದೆಂದು ಹೇಳಿದರು.
ನಟ ರಾಘವೇಂದ್ರ ರಾಜ ಕುಮಾರ ಅವರು  ಜಿಲ್ಲೆಯ ಪ್ರವಾಸಿ ತಾಣಗಳ ಕೈಪಿಡಿ ಬಿಡುಗಡೆ ಮಾಡಿ. ಈ ಬಳ್ಳಾರಿ ಉತ್ಸವ ಒಂದು ರೀತಿಯಲ್ಲಿ ಬಳ್ಳಾರಿಯ ದಸರಾ ಆಗಿ ಆಚರಣೆ ಮಾಡಲಾಗುತ್ತಿದೆ ಎಂದರು.
ಪುನೀತ್ ರಾಜಕುಮಾರ್ ಅವರನ್ನು ಅಭಿಮಾನಿಗಳು ಸ್ಟಾರ್ ಆಗಿ ನೋಡುತ್ತಿದ್ದರು. ಆದರೆ ಈಗ ಅವರನ್ನು ಪುತ್ಥಳಿ ಯ ರೂಪದಲ್ಲಿ ನೋಡುವಂತಾಗಿದೆ. ಪುನೀತ್ ಮೇಲೆ ಅಭಿಮಾನಿಗಳು ಇಟ್ಟಿರುವ ಅಭಿಮಾನ ಅಜರಾಮರ ಎಂದು ಪುನೀತ ಅವರ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ನೀನೇ ರಾಜಕುಮಾರ ಎಂಬ ಹಾಡು ಹೇಳಿ ಮಾತು ಮುಗಿಸಿದರು.
ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ, ಕರ್ನಾಟಕ ರಾಜ್ಯ ಜವಳಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಗುತ್ತಿಗನೂರು ವಿರುಪಾಕ್ಷ ಗೌಡ,ಮಹಾನಗರ ಪಾಲಿಕೆ ಮೇಯರ್ ಎಂ.ರಾಜೇಶ್ವರಿ, ಬುಡಾ ಅಧ್ಯಕ್ಷ ಸರ್ವಶೆಟ್ಟಿ ಮಾರುತಿ ಪ್ರಸಾದ್,  ಚಲನಚಿತ್ರ ನಿರ್ಮಾಪಕಿ ಅಶ್ವಿನ್ ಪುನೀತ್ ರಾಜಕುಮಾರ್, ಡೊಸಿ ಪವನ್ ಕುಮಾರ್ ಮಾಲಪಾಟಿ, ಎಸ್ಪಿ ರಂಜಿತ್ ಕುಮಾರ್ ಬಂಡಾರು, ಜಿಪಂ ಸಿಇಒ ಜಿ.ಲಿಂಗಮೂರ್ತಿ, ಪಾಲಿಕೆ ಆಯುಕ್ತ ಜಿ.ರುದ್ರೇಶ್, ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ, ಸಹಾಯಕ ಆಯುಕ್ತ ಹೇಮಂತ್  ಮತ್ತಿತರು ಉಪಸ್ಥಿತರಿದ್ದರು.
ಗೈರು:
ಜಿಲ್ಲೆಯ ಬಿಜೆಪಿ ಶಾಸಕ ಸೋಮಲಿಂಗಪ್ಪ, ಸಂಸದ ದೇವೇಂದ್ರಪ್ಪ, ಎಂಎಲ್ ಸಿ ವೈಎಂ.ಸತೀಶ್, ಮತ್ತು ಕಾಂಗ್ರೆಸ್ ಶಾಸಕರಾರು ಸಮಾರಂಭಕ್ಕೆ ಗೈರು ಹಾಜರಾಗಿದ್ದರು.
ಶ್ರೀರಾಮುಲು ತಪ್ಪು ಹೇಳಿಕೆ;
1998 ರಲ್ಲಿ ಎಸ್.ಆರ್.ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ  ಎಂ.ಪಿ.ಪ್ರಕಾಶ್ ನೇತೃತ್ವದಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಯ ಹಂಪಿ ಉತ್ಸವ ಆರಂಭಿಸಲಾಯಿತು. ಜಿಲ್ಲೆ ವಿಭಜನೆಯ ನಂತರ ಎಸ್.ಆರ್. ಬೊಮ್ಮಾಯಿ ಮಗ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಇರುವ ಸಂದರ್ಭದಲ್ಲಿ ಬಳ್ಳಾರಿ ಉತ್ಸವವನ್ನು ಪ್ರಾರಂಭಿಸಲಾಗಿದೆ ಎಂದು ತಪ್ಪು ಮಾಹಿತಿಯನ್ನು ಜನತೆಗೆ ತಿಳಿಸಿದರು.
1998 ರಲ್ಲಿ ಮುಖ್ಯ ಮಂತ್ರಿ ಇದ್ದುದು ಜೆ.ಹೆಚ್.ಪಟೇಲರು. ಆಗ ಎಸ್ ಆರ್  ಬೊಮ್ಮಾಯಿ ಅವರು ಮುಖ್ಯ ಕೇಂದ್ರ ಸರ್ಕಾರದಲ್ಲಿ ಮಾನವ ಸಂಪನ್ಮೂಲಗಳ ಸಚಿವರಾಗಿದ್ದರು. ಎಸ್ ಆರ್ ಬೊಮ್ಮಾಯಿಅವರು ಮುಖ್ಯ  ಮಂತ್ರಿಯಾಗಿದ್ದುದ್ದು ಅ13, 1998 ರಿಂದ ಎ 21,1989 ರ ವರೆಗೆ 281 ದಿನಗಳ ಕಾಲ. ಅವರ ಸರ್ಕಾರವನ್ನು ಅಂದಿನ  ಕೇಂದ್ರದ ಕಾಂಗ್ರೆಸ್ ಸರ್ಕಾರ ಬಹುಮತ ಇಲ್ಲ ಎಂದು ಪದಚ್ಯುತಿಗೊಳಿಸಿತ್ತು.
ಇವರು ಮುಖ್ಯ ಮಂತ್ರಿ ಇದ್ದಾಗಲೂ ಹಂಪಿ ಉತ್ಸವ ನಡೆದಿತ್ತು. ಆದರೆ ಅದೇ ಮೊದಲ ಹಂಪಿ ಉತ್ಸವ ಆಗಿರಲಿಲ್ಲ. ಹಂಪಿ ಉತ್ಸವವನ್ನು ಮೊದಲ ಬಾರಿಗೆ ಉದ್ಘಾಟಿಸಿದ್ದು ಮುಖ್ಯ ಮಂತ್ರಿ ರಾಮಕೃಷ್ಣ ಹೆಗಡೆ ಅವರು.
ದೊಡ್ಡನಗೌಡರ ವೇದಿಕೆ ನೀಡದ ಮಹತ್ವ:
ವೇದಿಕೆಗಳಿಗೆ ಹೆಸರನ್ನು ಬರೆದಿಲ್ಲ. ಕನಿಷ್ಟ ಉತ್ಸವದ ಹೆಸರೂ ಇಲ್ಲ. ಕಲಾವಿದರು ಎಲ್ಲಿ ಪ್ರದರ್ಶನ ನೀಡಿದರು ಎಂಬಂತಿದೆ.
ಇನ್ನು ನಗರದ ಮಲ್ಲೇಶ್ವರ ದೇವಸ್ಥಾನದ ಆವರಣದಲ್ಲಿನ ದೊಡ್ಡನಗೌಡರ ಹೆಸರಿನ ವೇದಿಕಡ ಬೇಕಾ ಬಿಟ್ಟಿಯಾಗಿ ನಿರ್ಮಿಸಿದೆ. ವೇದಿಕೆ ಹಿಂಭಾಗದಲ್ಲಿ ಇಷ್ಟು ಚಿಕ್ಕ ಎಲ್.ಇ.ಡಿ. ಪರದೆ ಇಟ್ಟಿರುವುದೇಕೆ? ದೂರ ಕುಳಿತ ಪ್ರೇಕ್ಷಕರಿಗೆ ಸ್ಪಷ್ಟವಾಗಿ ಕಾಣಲೆಂದು ಕಲಾವಿದರಿಗಿಂತ ದೊಡ್ಡ ಅಳತೆಯ ಎಲ್.ಇ.ಡಿ. ಪರದೆ ಇಡುವುದು ವಾಡಿಕೆ. ಆದರೆ ಲೈವ್ ಗಿಂತ ಚಿಕ್ಕ ಪರದೆ ಇಟ್ಟಿರುವುದೇಕೆ ಎಂಬುದನ್ನು ಬಲ್ಲವರೇ ಹೇಳಬೇಕು.
ವಾಡಿಕೆಯಂತೆ ಕಲಾವಿದರ ಪೂರ್ವಭಾವಿ ಸಭೆ ಕರೆಯಬೇಕೆಂಬ ಸಂಪ್ರದಾಯ ಬಿಟ್ಟು ಕೇವಲ ಕೆಲವು ಸಂಘಟನೆಗಳ ಸಭೆ ಕರೆದ ಉದ್ದೇಶ ಸಹ ಯಾರಿಗೂ ಅರ್ಥವಾಗಲಿಲ್ಲ. ಪ್ರಥಮ ಬಳ್ಳಾರಿ ಉತ್ಸವ ಇನ್ನೂ ವಿಜೃಂಭಣೆಯಿಂದ ಆಗಬೇಕಿತ್ತು ಎಂದಿದ್ದಾರೆ ನಗರದ  ಹಿರಿಯ ರಂಗಕರ್ಮಿ ಕೆ.ಜಗದೀಶ್.
 ಜನ ಸಾಗರ:
ನಿರೀಕ್ಷೆಗೂ ಮೀರಿ ಜನರು ಉತ್ಸವ ಕಾರ್ಯಕ್ರಮಗಳ ವೀಕ್ಷಣೆಗೆ ಮುನಿಷಿಪಲ್ ಹೈಸ್ಕೂಲ್ ಮೈದಾನಕ್ಕೆ ಹರಿದು ಬಂದಿತ್ತು. ಮೈದಾನದ ಜಾಗ ಸಾಕಾಗದೆ,  ಸುತ್ತಮುತ್ತಲಿನ ಕಟ್ಟಡಗಳ‌ ಮೇಲೆ ಕುಳಿತು ಕಾರ್ಯಕ್ರಮ ವೀಕ್ಷಿಸಿದರು.
ಪಾಸ್ ಗೆ ಬೆಲೆ ಇರಲಿಲ್ಲ:
ಉತ್ಸವದ ಕಾರ್ಯಕ್ರಮ ವೀಕ್ಷಣೆಗೆ ನೀಡಿದ್ದ ವಿಐಪಿ, ವಿವಿಐಪಿ ಪಾಸ್ ಗಳಿಗೆ ಬೆಲೆ ಇಲ್ಲದಂತಾಗಿತ್ತು.  ಸಿಗ ಬಾರದವರ ಕೈಗೆ ವಿವಿಐಪಿ  ಪಾಸ್ ಸಿಕ್ಕಿದ್ದವು, ವಿವಿಐಪಿಗಳೇ ಪಾಸ್ ಹಿಡಿದು ಬಂದಾಗ   ಜಾಗ ಇರಲಿಲ್ಲ. 
ಸರಿಯಾಗಿ ಕರ್ತ್ಯವ್ಯ ಮಾಡುತ್ತಿದ್ದ
ಪೊಲೀಸರು ಮಾತ್ರ ಜನರನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದರು. ಸೋಮಾರಿಗಳು ಸೆಲ್ಫಿ, ಕಾರ್ಯಕ್ರಮವನ್ನು ಮೊಬೂಲ್ ನಲ್ಲಿ ಸೆರೆ ಹಿಡಿಯುವುದು, ಇಲ್ಲ ಹರಟೆ ಹೊಡೆಯುತ್ತ ಒಂದಡೆ ಗುಂಪಾಗಿ ಕುಳಿತಿರುತ್ತಿದ್ದುದು ಕಂಡು ಬಂತು.