ನನ್ನ ಪತಿಯನ್ನು ಕೊಲ್ಲಲು ಮೋದಿ ಯತ್ನ

ರಾಂಚಿ,ಏ.೨೨- ಜಾರ್ಖಂಡ್‌ನ ರಾಂಚಿಯಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಪ್ರಚಾರ ಸಭೆಯಲ್ಲಿ ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್ ಮತ್ತು ಹೇಮಂತ್ ಸೋರೆನ್ ಅವರಿಗೆ ಎರಡು ಖಾಲಿ ಕುರ್ಚಿಗಳಲ್ಲಿ ಅವರ ಭಾವಚಿತ್ರ ಇಟ್ಟು ಲೋಕಸಭೆ ಚುನಾವಣಾ ಪ್ರಚಾರ ನಡೆಸುವ ಮೂಲಕ ಬಿಜೆಪಿ ಮತ್ತು ನರೇಂದ್ರ ಮೋದಿ ವಿರುದ್ದ ಹರಿಹಾಯ್ದಿದ್ದಾರೆ.ಚುನಾವಣಾ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್, ಆರ್‍ಜೆಡಿಯ ತೇಜಸ್ವಿ ಯಾದವ್ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್ ಪತ್ನಿ, ಸುನೀತಾ ಕೇಜ್ರಿವಾಲ್ ಮತ್ತು ಹೇಮಂತ್ ಸೊರೇನ್ ಪತ್ನಿ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಈ ವೇಳೆ ಮಾತನಾಡಿದ ಸುನೀತಾ ಕೇಜ್ರಿವಾಲ್, ಜೈಲಿನಲ್ಲಿರುವ ತಮ್ಮ ಪತಿ ಅರವಿಂದ್ ಕೇಜ್ರಿವಾಲ್ ಅವರನ್ನು ಕೊಲ್ಲಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸಂಚು ರೂಪಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.ಪತಿ ಮಧುಮೇಹದಿಂದ ಬಳಲುತ್ತಿದ್ದಾರೆ. ಅವರಿಗೆ ತಿಹಾರ್ ಜೈಲಿನಲ್ಲಿ ಇನ್ಸುಲಿನ್ ನಿರಾಕರಿಸಲಾಗಿದೆ. ಇದು ಅತ್ಯಂತ ಕೊಳಕು ರಾಜಕೀಯ ದೆಹಲಿ ಮತ್ತು ದೇಶದ ಜನ ಈ ರೀತಿಯ ಕೆಟ್ಟ ರಾಜಕಾರಣ ಸಹಿಸುವುದಿಲ್ಲ ಎಂದು ಗುಡುಗಿದ್ದಾರೆ.ಪತಿ ಅರವಿಂದ್ ಕೇಜ್ರಿವಾಲ್ ಇರುವ ಕೊಠಡಿಯಲ್ಲಿ ಅವರು ಬಳಸುವ ಆಹಾರದ ಮೇಲೆ ನಿಗಾ ಇಡಲು ಕ್ಯಾಮೆರಾವನ್ನು ಜೋಡಿಸಲಾಗಿದೆ, ಪ್ರತಿ ಆಹಾರದ ಮೇಲೆ ನಿಗಾ ಇಡಲಾಗಿದೆ, ಇದು ನಾಚಿಕೆಗೇಡಿನ ಸಂಗತಿ. ಅವರು ಮಧುಮೇಹಿ ಮತ್ತು ಕಳೆದ ೧೨ ವರ್ಷಗಳಿಂದ ೫೦ ಯೂನಿಟ್ ಇನ್ಸುಲಿನ್ ಅನ್ನು ನೀಡುತ್ತಿದ್ದಾರೆ. ಆದರೆ ಜೈಲಿನೊಳಗೆ ಅವರಿಗೆ ಯಾವುದನ್ನೂ ನೀಡಿಲ್ಲ. ಅವರು ಅವನನ್ನು ಕೊಲ್ಲಲು ಬಯಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಗುಡುಗಿದ ಮೈತ್ರಿಕೂಟ
ಪ್ರಸ್ತುತ ಸಾರ್ವತ್ರಿಕ ಚುನಾವಣೆಯು “ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ” ಹೋರಾಟವಾಗಿದೆ ಎಂದು ಇಂಡಿಯಾ ಮೈತ್ರಿಕೂಟ ಗುಡುಗಿದೆ.ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಜಾರ್ಖಂಡ್ ಮಾಜಿ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಕಂಬಿ ಹಿಂದೆ ಹಾಕುವಂತಹ ತೋಳ್ಬಲದ ತಂತ್ರಗಳಿಂದ ವಿರೋಧ ಪಕ್ಷ ಬೆದರುವುದಿಲ್ಲ ಎಂದು ಹೇಳಿದೆ