ನನ್ನ ನಡೆ ಮತಗಟ್ಟೆ ಕಡೆ ಜಾಗೃತಿ ಕಾರ್ಯಕ್ರಮ


ಬಾಗಲಕೋಟೆ, ಏ. 29 :ನನ್ನ ನಡೆ ಮತಗಟ್ಟೆ ಕಡೆ ಕಾರ್ಯಕ್ರಮದಡಿ ನವನಗರದ ಮೊರಾರ್ಜಿ ದೇಸಾಯಿ ವಸತಿ ವಿಜ್ಞಾನ ಪದವಿ ಪೂರ್ವ ಕಾಲೇಜನಲ್ಲಿರುವ ಮತಗಟ್ಟೆಯಲ್ಲಿ ಚುನಾವಣಾ ಹಬ್ಬದ ಧ್ವಜಾರೋಹಣ ಕಾರ್ಯಕ್ರಮ ರವಿವಾರ ನೆರವೇರಿತು.
ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯಾದ್ಯಂತ ಎಲ್ಲ ಮತಗಟ್ಟೆಗಳಲ್ಲಿ ಹಮ್ಮಿಕೊಂಡ ನನ್ನ ನಡೆ ಮತಗಟ್ಟೆ ಕಡೆ ಕಾರ್ಯಕ್ರಮದ ಧ್ವಜಾರೋಹಣವನ್ನು ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ನೆರವೇರಿಸಿ ಮಾತನಾಡಿದ ಅವರು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರಸಕ್ತ ಲೋಕಸಭಾ ಚುನಾವಣೆಗೆ ಮೇ 7 ರಂದು ಮತದಾನ ನಡೆಯಲಿದ್ದು, ಮತದಾರರಲ್ಲಿ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಲಾಗುತ್ತಿದೆ ಎಂದರು.
ಮತದಾನ ದಿನ ಮತಗಟ್ಟೆಗಳನ್ನು ಹುಡುಕಾಡುವ ಬದಲು ಮತದಾನದ ಪೂರ್ವದಲ್ಲಿಯೇ ತಮ್ಮ ಮತಗಟ್ಟೆ ಯಾವುದೆಂಬುದನ್ನು ಖಚಿತಪಡಿಸಿಕೊಳ್ಳುವುದು ಅವಶ್ಯವಾಗಿದೆ. ಇದಕ್ಕಾಗಿಯೇ ರಾಜ್ಯದ 14 ಲೋಕಸಭಾ ಮತಕ್ಷೇತ್ರಗಳಲ್ಲಿ ಪ್ರತಿ ಮತಗಟ್ಟೆಗಳಲ್ಲಿ ನನ್ನ ನಡೆ ಮತಗಟ್ಟೆ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮತದಾನ ಜಾಗೃತಿಯಲ್ಲಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಹಾಗೂ ಅವರಿಗೆ ನೀಡಿರುವ ಮತಗಟ್ಟೆಗಳಿಗೆ ತೆರಳಿ ಖಚಿತಪಡಿಸಿಕೊಳ್ಳಬೇಕು ಎಂದರು.
ಅಲ್ಲದೇ ಮತಗಟ್ಟೆಗಳಲ್ಲಿ ನೀಡಲಾಗಿರುವ ಸೌಲಭ್ಯಗಳ ಬಗ್ಗೆಯೂ ಮತದಾರರಲ್ಲಿ ಅರಿವು ಮೂಡಿಸಲು ಮತದಾರರ ಪಟ್ಟಿ ಹಾಗೂ ಮತಗಟ್ಟೆಗಳ ಬಗ್ಗೆ ಸಮಸ್ಯೆಗಳಿದ್ದಲ್ಲಿ 1950 ಸಹಾಯವಾಣಿ ಮೂಲಕ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಮತದಾರರ ಪ್ರತಿಯೊಂದು ಮತ ಅಮೂಲ್ಯವಾಗಿದ್ದು, ಪ್ರತಿಯೊಬ್ಬರೂ ಮತ ಚಲಾಯಿಸಬೇಕು ಎಂದರು.
ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರು ಆಗಿರುವ ಜಿ.ಪಂ ಸಿಇಓ ಶಶಿಧರ ಕುರೇರ ಮಾತನಾಡಿ ನನ್ನ ನಡೆ ಮತಗಟ್ಟೆ ಕಡೆ ಕಾರ್ಯಕ್ರಮವನ್ನು ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲಿ ನರೆವೇರಿಸಲಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ, ಗ್ರಾಮ ಪಂಚಾಯತ ಮಟ್ಟದಲ್ಲಿ ಪಿಡಿಓ ನೇತೃತ್ವದಲ್ಲಿ, ತಾಲೂಕಾ ಮಟ್ಟದಲ್ಲಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಹಾಗೂ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮತದಾನ ಜಾಗೃತಿಯ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಅಲ್ಲದೇ ಭಾರತ ಚುನಾವಣಾ ಆಯೋಗದ ನಾ ಭಾರತ ಗೀತೆಯನ್ನು ಪ್ರಸಾರ ಮಾಡಲಾಯಿತು. ಕಾರ್ಯಕ್ರಮ ಪೂರ್ವದಲ್ಲಿ ವಿವಿಧ ಜಾನಪದ ಕಲಾತಂಡಗಳ ಮೂಲಕ ಮೆರವಣಿಗೆ ನಡೆಸಲಾಯಿತು. ಅಲ್ಲದೇ ಕಾಂiÀರ್iಕ್ರಮದಲ್ಲಿ ಮತದಾನ ಜಾಗೃತಿ ಸಂದೇಶವುಳ್ಳ ರಂಗು ರಂಗಿನ ಚಿತ್ತಾರವುಳ್ಳ ರಂಗೋಲಿ ಬಿಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಶಶಿಕಾಂತ ಶಿವಪೂರೆ, ನಗರಸಭೆ ಪೌರಾಯುಕ್ತ ವಾಸಣ್ಣ ಆರ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.