ನನ್ನ ಗ್ರಾಮ ನನ್ನ ಹಕ್ಕು ತಂಡದಿಂದ ಕೊರೊನಾ ಜಾಗೃತಿ

ಚಾಮರಾಜನಗರ, ಮೇ.1- ದೇಶಾದ್ಯಂತ ಕೊರೊನಾ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿರುವ ಈ ಸಂದರ್ಭದಲ್ಲಿ ಗ್ರಾಮೀಣ ಭಾಗಗಳಲ್ಲಿ ಸಂಚರಿಸಿ ನನ್ನ ಗ್ರಾಮ ನನ್ನ ಹಕ್ಕು ತಂಡವು ಯಳಂದೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಎರಡು ದಿನಗಳಿಂದ 5 ಸಾವಿರಕ್ಕೂ ಹೆಚ್ಚು ಮಾಸ್ಕ್ ವಿತರಿಸಿ ಜನರಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿದೆ.
ಈ ಕುರಿತು ಮಾತನಾಡಿದ ನನ್ನ ಗ್ರಾಮ ನನ್ನ ಹಕ್ಕು ಸಂಸ್ಥೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಧನಂಜಯ್ ಅವರು ಕೊರೊನಾ ನಿಯಂತ್ರಣಕ್ಕೆ ಪ್ರತಿಯೊಬ್ಬರು ಸರ್ಕಾರದ ನಿರ್ದೇಶನಗಳನ್ನು ಅಗತ್ಯವಾಗಿ ಪಾಲಿಸಬೇಕು ಹಾಗೂ ಮಾಸ್ಕ್ ಅನ್ನು ಕಡ್ಡಾಯವಾಗಿ ಬಳಸುವ ಮೂಲಕ ವೈರಸ್ ಹೆಚ್ಚು ಹರಡದಂತೆ ತಡೆಯಬಹುದಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಯಳಂದೂರು ತಾಲ್ಲೂಕಿನ ಮಲ್ಲಿಗೆಹಳ್ಳಿ ಗ್ರಾಮದಲ್ಲಿ 2500, ಬೂದಿತಿಟ್ಟು ಗ್ರಾಮದಲ್ಲಿ 2000ಕ್ಕೂ ಹೆಚ್ಚು ಮಾಸ್ಕ್ ಗಳನ್ನು ಸಮಾಜ ಸೇವಕಿ ಕೆ.ಎಂ.ಲತಾಗೌಡ ಕಬ್ಬಳಿಗೆರೆ ಅವರ ಸಹಕಾರದಿಂದ ವಿತರಿಸಿ ಸ್ಥಳೀಯ ಗ್ರಾಮ ಪಂಚಾಯತಿ ಸದಸ್ಯರುಗಳ ಸಹಯೋಗದಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮದ್ದೂರು ಗ್ರಾ.ಪಂ ಅಧ್ಯಕ್ಷ ಪ್ರಕಾಶ್, ಸದಸ್ಯರಾದ ರಾಜಣ್ಣ, ನಾರಾಯಣ್, ಆಶಾ ಕಾರ್ಯಕರ್ತೆ ಅಂಬಿಕಾ. ಸಮಾಜ ಸೇವಕ ಸುರೇಶ್, ಅಶೋಕ್ ಇದ್ದರು.