ನನ್ನ ಕ್ಷೇತ್ರದ ಚುನಾವಣೆಯ ಬಗ್ಗೆ ನಾನು ಯೋಚನೆಯೇ ಮಾಡಿಲ್ಲ: ಎಚ್.ಡಿ.ಕುಮಾರಸ್ವಾಮಿ

ಸಂಜೆವಾಣಿ ನ್ಯೂಸ್
ಭಾರತೀನಗರ:- ನನ್ನ ಕ್ಷೇತ್ರದ ಚುನಾವಣೆಯ ಬಗ್ಗೆ ನಾನು ಯೋಚನೆಯೇ ಮಾಡಿಲ್ಲ, ಏಕೆಂದರೆ ನನ್ನ ಚುನಾವಣೆಯನ್ನು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ನೋಡಿಕೊಳ್ಳುತ್ತಾರೆಂಬ ನಂಬಿಕೆ ನನಗಿತ್ತು ಎಂದು ಎನ್‍ಡಿಎ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಕೆ.ಎಂ.ದೊಡ್ಡಿಯ ಸಂತೋಷ್‍ತಮ್ಮಣ್ಣ ಅವರ ನಿವಾಸದಲ್ಲಿ ಉಪಹಾರ ಸೇವಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಮಂಡ್ಯಜಿಲ್ಲೆಯ ಚುನಾವಣೆಯ ಬಗ್ಗೆ ಗಮನಕೊಟ್ಟಿಲ್ಲ. ನನ್ನ ಕ್ಷೇತ್ರದ ಚುನಾವಣೆಯನ್ನು ಜನರೇ ತೀರ್ಮಾನಿಸುತ್ತಾರೆಂಬ ನಂಬಿಕೆ ನನ್ನಲ್ಲಿದೆ. ಹಾಗಾಗಿ 12 ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರವನ್ನು ನಾನು ಕೈಗೊಂಡಿದ್ದೆ ಎಂದರು.
ಕಾಂಗ್ರೆಸ್‍ನವರು ಎಷ್ಟೇ ಅಪಪ್ರಚಾರ ಮತ್ತು ಮತದಾರರಿಗೆ ಆಮಿಷವೊಡ್ಡಿದರೂ ಸಹ ಅದನ್ನು ಲೆಕ್ಕಿಸದೆ ಯೋಗ್ಯರಿಗೆ ಮತ ನೀಡಿದ್ದಾರೆಂಬ ನಂಬಿಕೆ ನನಗಿದೆ ಎಂದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಳಿಗಾಲ ಇಲ್ಲ ಎಂಬ ಭೀತಿಯಿಂದ ಗ್ಯಾರಂಟಿಗಳನ್ನು ನೀಡುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ.ಈಗಾಗಲೇ ರಾಜ್ಯದ ಅಭಿವೃದ್ದಿ ಕುಂಠಿತಗೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಜೆಡಿಎಸ್‍ನ ಮೂರು ಅಭ್ಯರ್ಥಿಗಳು ಗೆಲ್ಲಲ್ಲಿದ್ದಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಕಳೆದ ಭಾರಿಗಿಂತಲೂ ಈ ಭಾರಿ ಉತ್ತಮ ಮತದಾನವಾಗಿದೆ. ಇದರಿಂದ ಬಿಜೆಪಿ ಅಭ್ಯರ್ಥಿ ಡಾ.ಮಂಜುನಾಥ್ ಅವರು ಗೆಲ್ಲಲ್ಲಿದ್ದಾರೆ. ಕಾಂಗ್ರೆಸ್ ನಾಯಕರು ಇದರಿಂದ ಈಗಾಲೇ ಹತಾಶರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ, ಪುತ್ರ ಸಂತೋಷ್‍ತಮ್ಮಣ್ಣ, ಕವಿತಾಸಂತೋಷ್, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಹೊನ್ನೇಗೌಡ, ಮನ್ಮುಲ್ ನಿರ್ದೇಶಕ ಎಸ್.ಪಿ.ಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಮಾದನಾಯಕನಹಳ್ಳಿ ರಾಜಣ್ಣ ಸೇರಿದಂತೆ ಹಲವರಿದ್ದರು.