ನನ್ನ ಕವಿತೆ ಹಿಂದಿನ ಕಥನ’ : ಕಲ್ಯಾಣ ನೆಲದಿಂದ ವಿಭಿನ್ನ ಪ್ರಯೋಗ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿಮೈಲಿಗಲ್ಲು’: ಪುಸ್ತಕ ಲೋಕಾರ್ಪಣೆ `ವಿಶೇಷ’

ಕಲಬುರಗಿ: ಏ.4 : ಲೇಖಕರೆ ಸೆಲೆಬ್ರಿಟಿಗಳಾದ ಕ್ಷಣವಿದು. ಅಪರೂಪ ಎನ್ನುವಂತಹ ಪುಸ್ತಕ ಮತ್ತು ಅದರ ಜನಾರ್ಪಣೆ ಕಾರ್ಯಕ್ರಮವೂ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಮೈಲಿಗಲ್ಲು. ಇಂತಹ ಕೃತಿ ಪ್ರಕಟವಾಗಿದ್ದು ಇದೇ ಮೊದಲು ಮತ್ತು ಈ ರೀತಿಯ ಬಿಡುಗಡೆ ಕಾರ್ಯಕ್ರಮವೂ ಸಹ ಅನುಕರಣೀಯವಾಗಿತ್ತು. ಹಾಗೆಯೇ, ಲೇಖಕರು ತಮ್ಮ ಮನೆಯಿಂದ ತಂದಿದ್ದ ಊಟದ ದೇಸಿ ಸಂಭ್ರಮ ನೀಡಿತ್ತು.
ಈ ಎಲ್ಲ ವಿಶೇಷಗಳು ನಡೆದಿದ್ದು, ಇಂದು ನಗರದ ಕಲಾಮಂಡಳ ಸಭಾಂಗಣದಲ್ಲಿ ಬೆಳಿಗ್ಗೆ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಸಂಪಾದಿಸಿರುವ ನನ್ನ ಕವಿತೆ ಹಿಂದಿನ ಕಥನ’ ಎಂಬ ಪುಸ್ತಕದ ಜನಾರ್ಪಣೆ ಸಮಾರಂಭದಲ್ಲಿ. ರಾಷ್ಟ್ರಕೂಟ ಪ್ರಕಾಶನದ ರತ್ನಕಲಾ ಎಂ.ರೆಡ್ಡಿ ಅವರು ಪುಸ್ತಕಗಳನ್ನು ಬಾಗಿನ ಅರ್ಪಿಸುವ ರೀತಿಯಲ್ಲಿ ವೇದಿಕೆಯಲ್ಲಿದ್ದ 21 ಜನ ಕವಿಗಳಿಗೆ ನೀಡಿದರು. ಅಷ್ಟೂ ಜನ ಕವಿಗಳು ಪುಸ್ತಕವನ್ನು ಲೋಕಾರ್ಪಣೆಗೊಳಿಸಿದ್ದು ವಿಶೇಷವಾಗಿತ್ತು. ಕಲ್ಯಾಣ ಕರ್ನಾಟಕದ 25 ಜನ ಕವಿಗಳು ತಮಗೆ ಕಾಡಿರುವ ಕವಿತೆಯನ್ನು ಮತ್ತು ಆ ಕವಿತೆಯ ಹಿಂದಿನ ಕಥನವನ್ನು ಬರೆದಿದ್ದು, ಇದೊಂದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೊದಲ ಪ್ರಯೋಗ ಎಂಬುದನ್ನು ಅಲ್ಲಿ ಸೇರಿದ್ದ ಅನೇಕ ಕವಿಗಳು ಪ್ರಾಂಜಲ ಮನಸಿನಿಂದ ಹೇಳಿದರು. ಇಂತಹದ್ದೊಂದು ಪ್ರಯೋಗಾತ್ಮಕ ಪುಸ್ತಕದಲ್ಲಿ ಹಿರಿಯರಾದ ಎ.ಕೆ.ರಾಮೇಶ್ವರ, ಪ್ರೊ. ವಸಂತ ಕುಷ್ಟಗಿ, ಡಾ.ಕಾಶಿನಾಥ ಅಂಬಲಗೆ, ಡಾ.ಬಸವರಾಜ ಸಬರದ, ಡಾ.ಸ್ವಾಮಿರಾವ ಕುಲಕರ್ಣಿ, ಚಂದ್ರಕಾಂತ ಕರದಳ್ಳಿ, ಗವೀಶ ಹಿರೇಮಠ, ಲಿಂಗಾರೆಡ್ಡಿ ಶೇರಿ, ಸಂಧ್ಯಾ ಹೊನಗುಂಟಿಕರ್, ಪಿ.ಎಂ.ಮಣ್ಣೂರ, ಶಂಕರಯ್ಯ ಘಂಟಿ, ಎಸ್.ಪಿ.ಸುಳ್ಳದ್, ಪ್ರಭಾಕರ ಜೋಶಿ, ಸಿದ್ದರಾಮ ಹೊನ್ಕಲ್, ಡಾ.ಎಸ್.ಎಸ್.ಗುಬ್ಬಿ, ಪ್ರೇಮಾ ಹೂಗಾರ, ಗುರುಶಾಂತಯ್ಯ ಭಂಟನೂರು, ಗಿರೀಶ ಜಕಾಪುರೆ, ಮಂಡಲಗಿರಿ ಪ್ರಸನ್ನ, ಪರವೀನ್ ಸುಲ್ತಾನಾ, ಡಾ.ರಾಜಶೇಖರ ಮಾಂಗ್, ಡಿ.ಎಂ.ನದಾಫ್, ಬಾಬು ಜಾಧವ, ಸಾಕ್ಷಿ ಶಿವರಂಜನ್ ಸತ್ಯಂಪೇಟೆ ಮತ್ತು ಮಹಿಪಾಲರೆಡ್ಡಿ ಮುನ್ನೂರ್ ಅವರು ಕವಿತೆಗಳ ಹಿಂದಿನ ಕಥನದ ಜಾಡು ಹಿಡಿದಿದ್ದಾರೆ. ಜಿಲ್ಲೆಯ ಸೇಡಂ ತಾಲೂಕಿನರಾಷ್ಟ್ರಕೂಟ ಪುಸ್ತಕ ಮನೆ’ ವತಿಯಿಂದ ಪ್ರಕಟಿಸಿರುವ `ನನ್ನ ಕವಿತೆಯ ಹಿಂದಿನ ಕಥನ’ ಎಂಬ ವಿಶಿಷ್ಟ ಮತ್ತು ವಿಭಿನ್ನ ಪ್ರಯೋಗದ ಪುಸ್ತಕ ಜನಾರ್ಪಣೆ ಕಾರ್ಯಕ್ರಮದಲ್ಲಿ ಉದ್ಘಾಟಕರು, ಮುಖ್ಯ ಅತಿಥಿಗಳು, ಪುಸ್ತಕ ಬಿಡುಗಡೆ ಮಾಡುವವರು, ಕೃತಿ ಬಗ್ಗೆ ಮಾತಾಡುವವರು, ಸಮಾರಂಭದ ಅಧ್ಯಕ್ಷತೆ ವಹಿಸುವವರು ಯಾರೂ ಇರಲಿಲ್ಲ. ಆದರೆ, 21 ಜನ ಕವಿಗಳು ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಇಂತಹ ಹೊಸತನದೊಂದಿಗೆ ಕೂಡಿದ್ದ ಕಾರ್ಯಕ್ರಮದಲ್ಲಿ ಸಂವಾದದ ರೂಪದಲ್ಲಿ ತಮ್ಮ ಅನಿಸಿಕೆಗಳನ್ನು ಹೇಳಿದರು. ವಿಜಯಲಕ್ಷ್ಮೀ ಸುಜಿತಕುಮಾರ ಪ್ರಾರ್ಥನೆ ಗೀತೆ ಹಾಡಿದರು. ಮಹಿಪಾಲರೆಡ್ಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಶಿವಯ್ಯ ಸ್ವಾಮಿ ಬಿಬ್ಬಳ್ಳಿ, ಡಾ.ಶ್ರೀಶೈಲ ಬಿರಾದಾರ, ಶರಣಗೌಡ ಪಾಟೀಲ ಪಾಳಾ, ಸುರೇಶ ಬಡಿಗೇರ್, ಬಿ.ಎಚ್.ನಿರಗುಡಿ, ವಿಜಯಕುಮಾರ ತೇಗಲತಿಪ್ಪಿ, ಡಾ. ಲಕ್ಷ್ಮಿ ಶಂಕರ ಜೋಶಿ, ಶಿವಲೀಲಾ ಡೆಂಗಿ, ಪ್ರೊ.ವಿಜಯಕುಮಾರ ರೋಣದ, ಡಾ.ಮಲ್ಲಿನಾಥ ತಳವಾರ ಸೇರಿದಂತೆ ಅನೇಕರು ಭಾಗವಹಿಸಿದ್ದರು.


ಕ್ಯಾನ್ಸರ್‍ಗೆ ತುತ್ತಾಗಿದ್ದ ತಮ್ಮ ಪತ್ನಿಯನ್ನು ಮಲ್ಪೆ ಬಂದರಿಗೆ ಕರೆದುಕೊಂಡು ಹೋದಾಗ ಬರೆದಿದ್ದ ಕವಿತೆಯನ್ನು, ಇದೀಗ ಅದರ ಹಿಂದಿನ ಕಥನ ಬರೆಯುವಾಗ ಎಲ್ಲ ಕ್ಷಣಗಳು ನೆನಪಾದವು. ಈ ಕೃತಿ ಕನ್ನಡ ಸಾಹಿತ್ಯದಲ್ಲಿ ಮೈಲಿಗಲ್ಲು ಆಗಿದೆ.

  • ಪ್ರೊ. ವಸಂತ ಕುಷ್ಟಗಿ, ಹಿರಿಯ ಸಾಹಿತಿಗಳು

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೊದಲ ಕೃತಿ ಇದು. ಇದೂವರೆಗೂ ಇಂತಹ ಪುಸ್ತಕ ಪ್ರಕಟವಾಗಿಲ್ಲ. ಚರಿತ್ರೆಯಲ್ಲಿ ಕಲ್ಯಾಣ ಕರ್ನಾಟಕದಿಂದ ಪ್ರಕಟವಾದ ಈ ಕೃತಿ ದಾಖಲೆ ಮಾಡಿದೆ.

  • ಡಾ.ಬಸವರಾಜ ಸಬರದ, ಹಿರಿಯ ವಿದ್ವಾಂಸರು.

ಪಂದ್ರಾ ಆಗಸ್ಟ್ ಸಂದರ್ಭದಲ್ಲಿ ಪ್ರಭಾತ್ ಫೇರಿ ನಡೆಯುವುದರ ಬಗ್ಗೆ ಕವಿತೆ ಬರೆದಿದ್ದೆ. ಅವತ್ತು ಬೋಲೋ ಭಾರತ ಮಾತಾ ಕೀ ಜೈ ಎಂದಿದ್ದೆ. ದೂರದಲ್ಲಿ ನಿಂತಿದ್ದ ಅಕ್ಕನ ಮಗಳು ಖುಷಿಗೊಂಡಿದ್ದಳು. ಅವಳೆ ಬಾಳಸಂಗಾತಿಯಾದಳು. ಅಂತಹ ಕಥನ ಹೊಂದಿರುವ ಈ ಕೃತಿ ಪ್ರಕಟವಾಗಿದ್ದು ಶ್ಲಾಘನೀಯ.

  • ಡಾ.ಸ್ವಾಮಿರಾವ ಕುಲಕರ್ಣಿ, ಹಿರಿಯ ಲೇಖಕರು

ತುಂಬಾ ಕ್ರಿಯಾಶೀಲವಾಗಿ ಈ ಪುಸ್ತಕ ಹೊರಬಂದಿದೆ. ಇಡೀ ಕನ್ನಡ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಈ ಕೊಡುಗೆ ಅಪರೂಪ. ಪ್ರತಿಭೆಗಳು ನಮ್ಮಲ್ಲಿವೆ. ಅದಕ್ಕೆ ಸಾಕ್ಷಿಪ್ರಜ್ಞೆ ಎಂದರೆ, ಮಹಿಪಾಲರೆಡ್ಡಿ.

  • ಡಾ.ಕಾಶೀನಾಥ ಅಂಬಲಗೆ, ಹಿರಿಯ ಲೇಖಕರು

ಚಿಂಚೋಳಿ ತಾಲೂಕಿನ ಕೊಂಚಾವರಂ ಪ್ರದೇಶದಲ್ಲಿ ಮಕ್ಕಳ ಮಾರಾಟವು ಮನುಷತ್ವ ಲೋಕಕ್ಕೊಂದು ಕಪ್ಪುಚುಕ್ಕೆ. ಅದನ್ನು ಕವಿತೆಯಾಗಿಸಿ, ನನ್ನೊಡಲಿನ ಸಂಕಟ ಹೊರಹಾಕಿದ್ದೆ. ಇದೀಗ ಕಥನ ಬರೆಸಿ ರೆಡ್ಡಿಯವರು, ಹೊಸ ದಾಖಲೆಯನ್ನು ಸ್ಥಾಪಿಸಿದ್ದಾರೆ. ಪುಸ್ತಕ ಮನಸಿಗೆ ಹಿಡಿಸಿತು.

  • ಪರವೀನ್ ಸುಲ್ತಾನಾ, ಯುವ ಕವಯಿತ್ರಿ