ನನ್ನ ಆಸ್ತಿ ನನ್ನ ಬಂಡೆ ಎಚ್‌ಡಿಕೆಗೆ ಡಿಕೆಶಿ ಟಾಂಗ್

(ಸಂಜೆವಾಣಿ ಪ್ರತಿನಿಧಿಯಿಂದ)
ಬೆಂಗಳೂರು,ಏ.೧೬:ಕಲ್ಲು ಬಂಡೆ ಹೊಡೆದು ಕದ್ದು ವಿದೇಶಕ್ಕೆ ಮಾರಿರುವುದೇ ಡಿ.ಕೆ ಶಿವಕುಮಾರ್ ಅವರ ಸಾಧನೆ ಎಂದು ಆರೋಪಿಸಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ತಿರುಗೆಟು ನೀಡಿರುವ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನನ್ನ ಜಮೀನಿನ ಬಂಡೆ ಹೊಡೆದು ಬದುಕಿದ್ದೇನೆ. ನನ್ನ ಆಸ್ತಿ ನನ್ನ ಬಂಡೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ನನಗೆ ವೈಯಕ್ತಿಕವಾಗಿ ಗೌರವವಿದೆ. ಆದರೆ, ಅವರು ಬಂಡೆ ಹೊಡೆದ, ಬಂಡೆ ಕದ್ದು ಮಾರಿದ್ದ ಎಂದು ಹೇಳೋದು ಹೆಣ್ಣು ಮಕ್ಕಳ ಆಸ್ತಿ ಬರಿಸಿಕೊಂಡಿದ್ದಾರೆ ಎಂದೆಲ್ಲ ಹೇಳುವುದು ಸರಿಯಲ್ಲ. ಅವರ ವಿರುದ್ಧ ವಯಕ್ತಿಕವಾಗಿ ನನಗೆ ಏನೂ ಇಲ್ಲ ಎಂದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಂಡೆ ಹೊಡೆದ, ಚೂರಿ ಹಾಕಿದ, ವಿಷ ಹಾಕಿದ ಎಂದೆಲ್ಲ ಹೇಳೋದು ಸರಿಯಲ್ಲ. ಅವರು ಚರ್ಚೆಗೆ ಬರದಿದ್ದರೆ ಬಿಡಿ, ಮುಂದೆ ವಿಧಾನಸಭಾ ಅಧಿವೇಶನ ಇರುತ್ತದೆ ಅಲ್ಲಿ ಮಾತನಾಡೋಣ. ಚುನಾವಣೆ ನಂತರ ಅವರ ಪಾರ್ಟಿ ಏನಾಗುತ್ತದೆ ನೋಡೋಣ.ನಮ್ಮಂತವರನ್ನು ಅವರು ಕಳೆದುಕೊಳ್ಳಬಾರದು. ಸಮುದಾಯಕ್ಕಾಗಿ ನಾನು ಅವರಿಗೆ ಗೌರವ ಕೊಡುತ್ತೇನೆ ಆದರೆ ವೈಯಕ್ತಿಕವಾಗಿ ದಾಳಿ ಮಾಡೋದು ಸರಿಯಲ್ಲ ಎಂದರು.
ಜೆಡಿಎಸ್-ಬಿಜೆಪಿಯವರಿಗೆ ಮಾತನಾಡಲು ಬೇಕಲ್ಲ. ವಿಷಯಾಂತರ ಮಾಡಲು ನನ್ನ ವಿರುದ್ಧ ಈ ರೀತಿ ಮಾತನಾಡುತ್ತಿದ್ದಾರೆ. ತಾಯಂದಿರ ಬಗ್ಗೆ ಮಾತನಾಡುವಾಗ ಎಚ್ಚರವಿರಬೇಕು. ಮಾತನಾಡಲು ನಾನು ಹೇಳಿದ್ದೇನೆಯೇ ಎಂದು ಅವರು ಪ್ರಶ್ನಿಸಿದರು.