ನನ್ನ ಅಭಿವೃದ್ಧಿ ಕಾರ್ಯಗಳಿಗೆ ಜನತೆ ಪ್ರಶಂಸೆ ನೀಡಿದ್ದಾರೆ: ಭೈರತಿ ಸುರೇಶ್

ಬೆಂಗಳೂರು, ಮೇ. ೪- ಹೆಬ್ಬಾಳ ಕ್ಷೇತ್ರದಲ್ಲಿ ಕಳೆದ ೩೦ ವರ್ಷಗಳಲ್ಲಿ ಆಗದಿರುವ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇನೆ. ನನ್ನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಕ್ಷೇತ್ರದ ಜನತೆ ಅತೀವ ಪ್ರಶಂಸೆ ವ್ಯಕ್ತಪಡಿಸುತ್ತಿದ್ದು, ಚುನಾವಣಾ ಪ್ರಚಾರಕ್ಕೆ ತೆರಳಿದಲ್ಲೆಡೆ ಜನತೆ ಸಂತಸದಿಂದ ನನ್ನೊಂದಿಗೆ ಪಾಲ್ಗೊಳ್ಳುತ್ತಿದ್ದಾರೆ ಎಂದು ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೈರತಿ ಸುರೇಶ್ ಹೇಳಿದ್ದಾರೆ.
ಹೆಬ್ಬಾಳ ಕ್ಷೇತ್ರ ವ್ಯಾಪ್ತಿಯ ಗಂಗಾನಗರ, ನಾಗೇನಹಳ್ಳಿಯ ಪಟೇಲ್, ಮುನಿಯಪ್ಪ ಲೇಔಟ್, ಸೀತಪ್ಪ ಲೇಔಟ್, ಹೆಬ್ಬಾಳ, ಚಾಮುಂಡಿನಗರ ಸೇರಿ ವಿವಿಧ ಬಡಾವಣೆಗಳಲ್ಲಿ ಬುಧವಾರ ಮನೆ ಮನೆ ಪ್ರಚಾರ ಕೈಗೊಂಡು ಮತಯಾಚನೆ ನಡೆಸಿ ಮಾತನಾಡಿದರು.
ಹೆಬ್ಬಾಳ ಕ್ಷೇತ್ರದ ಜನತೆ ನನ್ನನ್ನು ತಮ್ಮ ಮನೆಯ ಓರ್ವ ಸದಸ್ಯನಂತೆ, ಅಣ್ಣ-ತಮ್ಮನಂತೆ ಭಾವಿಸಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ಸದಾ ಅಭಾರಿಯಾಗಿರುತ್ತೇನೆ. ಕ್ಷೇತ್ರದಲ್ಲಿ ಎಲ್ಲ ಜಾತಿ, ಧರ್ಮ, ವರ್ಗದ ಜನತೆಯ ಶ್ರೇಯೋಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಶ್ರಮಿಸಿದ್ದೇನೆ. ಪ್ರಚಾರದ ವೇಳೆ ಪಕ್ಷದ ಮುಖಂಡರಾದ ಮುನಿರಾಮಣ್ಣ, ಮೋಹನ್ ರೆಡ್ಡಿ, ಮತ್ತಿತರರು ಭಾಗವಹಿಸಿದ್ದರು.
ಪತ್ನಿ-ಪುತ್ರ ಮತಯಾಚನೆ
ಭೈರತಿ ಸುರೇಶ್ ಅವರ ಪತ್ನಿ ಪದ್ಮಾವತಿ ಹೆಬ್ಬಾಳ ಕ್ಷೇತ್ರದ ದಿನ್ನೂರು, ಸಂಜಯನಗರದ ಭೋವಿ ಕಾಲನಿ, ಗೌಡರ ಕಾಲನಿ, ಗುಂಡಪ್ಪ ರಸ್ತೆ, ಗೋವಿಂದಪ್ಪ ಬಡಾವಣೆ, ರಾಮಕೃಷ್ಣ ಬಡಾವಣೆಗಳಲ್ಲಿ ಮನೆ ಮನೆಗೆ ತೆರಳಿ ಪತಿಯ ಪರವಾಗಿ ಮತಯಾಚಿಸಿದರು. ಭೈರತಿ ಸುರೇಶ್ ಪುತ್ರ ಸಂಜಯ್ ಕ್ಷೇತ್ರದ ಕನಕನಗರದಲ್ಲಿ ಮತಯಾಚನೆ ನಡೆಸಿದರು.

ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೈರತಿ ಸುರೇಶ್‌ರವರು ಕ್ಷೇತ್ರದ ವಿವಿಧ ಕಡೆ ಪಾದಯಾತ್ರೆ ನಡೆಸಿ ಮತಯಾಚನೆ ಮಾಡಿದರು. ಪಕ್ಷದ ಮುಖಂಡರಾದ ಮುನಿರಾಮಣ್ಣ, ಮೋಹನ್ ರೆಡ್ಡಿ, ಮತ್ತಿತರರ ಮುಖಂಡರು ಭಾಗವಹಿಸಿದ್ದರು.