ನನಸಾಗದ ಮುಷ್ಟೂರ ಹಾಸ್ಟೆಲ್ ಕನಸು

ಬಾಬುಅಲಿ ಕರಿಗುಡ್ಡ
ದೇವದುರ್ಗ.ವ.೧೧-ತಾಲೂಕಿನ ಮುಷ್ಟೂರು ಗ್ರಾಮ ಶೈಕ್ಷಣಿಕವಾಗಿ ಉತ್ತಮ ಫಲಿತಾಂಶ ಪಡೆದರೂ ಹಾಸ್ಟೆಲ್ ಸೌಲಭ್ಯ ನೀಡುವಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮೀನಮೇಷ ಎಣಿಸುತ್ತಿದ್ದಾರೆ. ಹಾಸ್ಟೆಲ್ ಪ್ರಾರಂಭಿಸುವ ಬಗ್ಗೆ ಹಲವು ದಿನಗಳ ಕನಸಿದ್ದು, ನನಸಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಸುಮಾರು ೧೫ಕ್ಕೂ ಹೆಚ್ಚು ಹಳ್ಳಿಗಳನ್ನು ಸುತ್ತಿಕೊಂಡ ಮುಷ್ಟೂರು ಗ್ರಾಪಂ ಹೊಂದಿದ್ದು, ಅತಿಹೆಚ್ಚು ಜನಸಂಖ್ಯೆ, ವಿದ್ಯಾರ್ಥಿಗಳಿದ್ದಾರೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಿಂದುಳಿದ ವರ್ಗ ಅಥವಾ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ಆರಂಭಿಸಬೇಕು ಎನ್ನುವುದು ಪಾಲಕರ ಬಹುದಿನದ ಬೇಡಿಕೆ. ಆದರೆ, ಇವರ ಧ್ವನಿ ಅಧಿಕಾರಿಗಳಿಗಾಗಲಿ, ಜನಪ್ರತಿನಿಧಿಗಳಿಗಾಗಲಿ ಕೇಳಿಸುತ್ತಿಲ್ಲ.
ಇದರಿಂದ ಬಡಕುಟುಂಬದ ವಿದ್ಯಾರ್ಥಿಗಳು ವಸತಿ ಸೌಲಭ್ಯವಿಲ್ಲದೆ ಅರ್ಧದಲ್ಲಿ ಅಕ್ಷರಭ್ಯಾಸ ನಿಲ್ಲಿಸುವ ಸ್ಥಿತಿಯಿದೆ. ಹಾಸ್ಟೆಲ್ ಆರಂಭಿಸಿದರೆ ಮುಷ್ಟೂರು ಮಾತ್ರವಲ್ಲ, ಸುತ್ತಲಿನ ಸುಮಾರು ೧೫ಹಳ್ಳಿಗಳ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಹಾಸ್ಟೆಲ್‌ಗಾಗಿ ಇಲ್ಲಿನ ಮಕ್ಕಳು ದೂರದ ಅರಕೇರಾ, ಗಬ್ಬೂರಿಗೆ ತೆರಳುವ ತೊಂದರೆ ತಪ್ಪಲಿದೆ.
ಗ್ರಾಮದಲ್ಲಿ ೧೬ವಾರ್ಡ್‌ಗಳಿದ್ದು, ಐದುಸಾವಿರ ಜನಸಂಖ್ಯೆಯಿದೆ. ಸುಮಾರು ಒಂದು ಸಾವಿರ ವಿವಿಧ ಹಂತದ ವಿದ್ಯಾರ್ಥಿಗಳಿದ್ದಾರೆ. ಅಲ್ಲದೆ ಸುತ್ತಲಿನ ಹಳ್ಳಿಯಲ್ಲಿ ಸುಮಾರು ಒಂದುಸಾವಿರ ವಿದ್ಯಾರ್ಥಿಗಳಿದ್ದಾರೆ. ಸುಸಜ್ಜಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಯಿದ್ದು, ಎಸ್ಸೆಸ್ಸೆಲ್ಸಿಯಲ್ಲಿ ಪ್ರತಿವರ್ಷ ಶೇ.೯೦ಕ್ಕೂ ಹೆಚ್ಚು ಫಲಿತಾಂಶ ಬಂದಿದೆ. ಬಾಲಕಿಯರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಶಾಲೆಗೆ ದಾಖಲಾಗಿದ್ದು, ಅವರಿಗೂ ಪ್ರತ್ಯೇಕ ಹಾಸ್ಟೆಲ್ ಆರಂಭಿಸಬೇಕು ಎನ್ನುವ ಬೇಡಿಕೆಯಿದೆ.