
ದೇವದುರ್ಗ,ಏ.೨೦- ತಾಲೂಕಿನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮೊದಲಿನಿಂದಲೂ ಹೊಂದಾಣಿಕೆ ರಾಜಕೀಯ ನಡೆಯುತ್ತಿದ್ದು, ಈಗ ಬಹಿರಂಗವಾಗಿದೆ. ನನ್ನ ಸೋಲಿಸಲು ಅಳಿಯ ಮಾವ ಒಂದಾಗಿದ್ದಾರೆ ಎಂದು ಶಿವನಗೌಡ ನಾಯಕ, ಬಿ.ವಿ.ನಾಯಕ ವಿರುದ್ಧ ಜೆಡಿಎಸ್ ಅಭ್ಯರ್ಥಿ ಕರೆಮ್ಮ ಜಿ.ನಾಯಕ ವಾಗ್ದಾಳಿ ನಡೆಸಿದರು.
ಪಟ್ಟಣದ ಟಿಎಪಿಎಂಎಸ್ ಮೈದಾನದಲ್ಲಿ ಜೆಡಿಎಸ್ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಬುಧವಾರ ಮಾತನಾಡಿದರು. ೩೦ವರ್ಷಗಳಿಂದ ಕಾಂಗ್ರೆಸ್, ೧೫ವರ್ಷಗಳಿಂದ ಬಿಜೆಪಿ ತಾಲೂಕಿನ ಜನರಿಗೆ ಅನ್ಯಾಯ ಮಾಡುತ್ತಾ ಬಂದಿವೆ. ಮೇಲ್ನೋಟಕ್ಕೆ ಎದುರಾಳಿ ಎಂದು ಬಿಂಬಿಸಿಕೊಂಡು ಒಳಗೊಳಗೆ ಒಪ್ಪಂದ ಮಾಡಿಕೊಂಡು ರಾಜಕೀಯ ಮಾಡಿದ್ದು, ಈಗ ಕ್ಷೇತ್ರದ ಜನರಿಗೆ ಗೊತ್ತಾಗಿದೆ ಎಂದು ಕುಟುಕಿದರು.
ನಾನೇನು ದೊಡ್ಡ ರಾಜಕೀಯ ಕುಟುಂಬದ ಮನೆತನದಿಂದ ಬಂದಿಲ್ಲ. ನನ್ನ ಬಳಿ ಹಣವಿಲ್ಲದಿದ್ದರೂ ಕ್ಷೇತ್ರದ ಜನರ ಜತೆಗಿದ್ದೇನೆ. ಪ್ರಚಾರಕ್ಕೆ ಹೋದಲೆಲ್ಲ ಉಡಿತುಂಬಿ ಮನೆಯ ಮಗಳಂತೆ ಪ್ರೀತಿತೋರಿಸಿದ್ದೀರಿ. ಇದರಿಂದ ನನಗೆ ಹೋರಾಟ ಮಾಡಲು ಶಕ್ತಿಬಂದಿದೆ. ಚುನಾವಣೆಯಲ್ಲಿ ನನಗೆ ಅವಕಾಶ ಸಿಕ್ಕಿದ್ದು, ನಿಮ್ಮ ಪ್ರೀತಿ ಮತವಾಗಿ ನನ್ನ ಬೆಂಬಲಕ್ಕೆ ಬೇಕಿದೆ. ನಿಮ್ಮ ಪ್ರೀತಿ, ವಿಶ್ವಾಸಕ್ಕೆ ಧಕ್ಕೆ ಬರದಂತೆ ನಾನು ಕೆಲಸ ಮಾಡುವೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತೇನೆ ಎಂದು ಹೇಳಿದರು.
ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿದರು. ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ, ತಾಲೂಕು ಅಧ್ಯಕ್ಷ ಬುಡ್ಡನಗೌಡ ಜಾಗಟಗಲ್, ಮಹಾಂತೇಶ ಪಾಟೀಲ್ ಅತ್ತನೂರು, ಸಿದ್ದನಗೌಡ ಮುಡಲಗುಂಡ, ಅಖಂಡ ಶಿವರಾಜ ಕೊತ್ತದೊಡ್ಡಿ, ರೇಣುಕಾ ಮಯೂರಸ್ವಾಮಿ ಇತರರಿದ್ದರು.